ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಕೃಷಿ ಚಟುವಟಿಕೆ ಆರಂಭ

ಹೂವಿನಹಡಗಲಿ ತಾಲ್ಲೂಕು : 52,841 ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ
Published 24 ಮೇ 2023, 15:58 IST
Last Updated 24 ಮೇ 2023, 15:58 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನಲ್ಲಿ ಈಚೆಗೆ ಸಾಧಾರಣ ಮಳೆಯಾಗಿದ್ದು, ರೈತರು ಮುಂಗಾರು ಕೃಷಿ ಚಟುವಟಿಕೆ ಪ್ರಾರಂಭಿಸಿದ್ದಾರೆ.

ತಾಲ್ಲೂಕಿನಲ್ಲಿ ಒಮ್ಮೆ ಮಾತ್ರ ಅಲ್ಪ ಮಳೆಯಾಗಿದೆ. ಮಳೆ ಕೊರತೆ ನಡುವೆಯೂ ರೈತರು ರಂಟೆ, ಟಿಲ್ಲರ್ ಹೊಡೆದು ಮುಂಗಾರು ಬಿತ್ತನೆಗಾಗಿ ಭೂಮಿ ಹದಗೊಳಿಸುತ್ತಿದ್ದಾರೆ. ಮತ್ತೊಂದೆಡೆ ಬೀಜ, ರಸಗೊಬ್ಬರ, ಕೃಷಿ ಪರಿಕರಗಳ ಖರೀದಿ ಪ್ರಾರಂಭವಾಗಿದೆ. ರೈತರ ಬೇಡಿಕೆಯ ಬೀಜ, ಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ತಾಲ್ಲೂಕಿನ 93,853 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣದಲ್ಲಿ 60,495 ಹೆಕ್ಟೇರ್ ಸಾಗುವಳಿ ಯೋಗ್ಯ ಭೂಮಿ ಇದೆ. ಈ ಪೈಕಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 52,841 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. 32,350 ಹೆಕ್ಟೇರ್ ಮೆಕ್ಕೆಜೋಳ, 5000 ಹೆಕ್ಟೇರ್ ಭತ್ತ, 2,200 ಹೆಕ್ಟೇರ್ ಜೋಳ, 600 ಹೆಕ್ಟೇರ್ ರಾಗಿ 700 ಹೆಕ್ಟೇರ್ ಸಜ್ಜೆ, 1700 ಹೆಕ್ಟೇರ್ ತೊಗರಿ, 2,000 ಹೆಕ್ಟೇರ್ ಸೂರ್ಯಕಾಂತಿ ಬಿತ್ತನೆಯಾಗಲಿದೆ.

‘ಮುಂಗಾರು ಬಿತ್ತನೆಗಾಗಿ 4060 ಕ್ವಿಂಟಲ್ ಮೆಕ್ಕೆಜೋಳ, 730 ಕ್ವಿಂಟಲ್ ಭತ್ತ, 220 ಕ್ವಿಂಟಲ್ ಹೈ. ಜೋಳ, 108 ಕ್ವಿಂಟಲ್ ಸೂರ್ಯಕಾಂತಿ, 25 ಕ್ವಿಂಟಲ್ ಸಜ್ಜೆ, 40 ಕ್ವಿಂಟಲ್ ತೊಗರಿ, 27 ಕ್ವಿಂಟಲ್ ರಾಗಿ ಬೀಜ ಪೂರೈಕೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮುಂಗಾರಿಗೆ 3500 ಮೆಟ್ರಿಕ್‌ ಟನ್ ಗೊಬ್ಬರದ ಬೇಡಿಕೆ ಇದ್ದು, ಈಗಾಗಲೇ 2,000 ಮೆಟ್ರಿಕ್‌ ಟನ್ ಗೊಬ್ಬರ ಮಾರಾಟವಾಗಿದೆ. 1,127 ಮೆಟ್ರಿಕ್‌ ಟನ್ ಗೊಬ್ಬರ ದಾಸ್ತಾನಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಮಹ್ಮದ್ ಆಶ್ರಫ್ ತಿಳಿಸಿದರು.

ಜೂ. 1 ರಿಂದ ಬಿತ್ತನೆ ಬೀಜ ಮಾರಾಟ: ‘ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜೂನ್ ಮೊದಲ ವಾರದಲ್ಲಿ ಮಳೆ ಸುರಿಯುವ ನಿರೀಕ್ಷೆ ಇದೆ. ಕೃಷಿ ಇಲಾಖೆಯಿಂದ ಜೂ. 1 ರಿಂದ ಹಡಗಲಿ, ಇಟ್ಟಿಗಿ, ಹಿರೇಹಡಗಲಿ ರೈತ ಸಂಪರ್ಕ ಕೇಂದ್ರಗಳು ಹಾಗೂ ಸೋಗಿ, ಹಿರೇಮಲ್ಲನಕೆರೆ, ಹೊಳಗುಂದಿ, ಹೊಳಲು ಗ್ರಾಮದ ಹೆಚ್ಚುವರಿ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತದೆ. ಬೀಜ ಮಾರಾಟಕ್ಕೆ ಅಗತ್ಯ ಸಿದ್ದತೆ ಮಾಡಿಕೊಂಡಿದ್ದೇವೆ’ ಎಂದು ಎಡಿಎ ಮಹ್ಮದ್ ಆಶ್ರಫ್ ಹೇಳಿದರು.

‘ಹಿಂದಿನ ವರ್ಷ ಮಳೆ ಹೆಚ್ಚಾಗಿದ್ದರಿಂದ ಬೆಳೆಗಳು ರೋಗ ಪೀಡಿತವಾಗಿ ಇಳುವರಿ ಕುಂಠಿತವಾಗಿದ್ದವು. ಈ ಬಾರಿಯಾದರೂ ಉತ್ತಮ ಮಳೆ ಬೀಳುವ ಆಶಾಭಾವದೊಂದಿಗೆ ಬಿತ್ತನೆಗೆ ಸಜ್ಜಾಗುತ್ತಿದ್ದೇವೆ’ ಎಂದು ಇಟ್ಟಿಗಿ ಗ್ರಾಮದ ರೈತ ದೇವೇಂದ್ರಪ್ಪ ತಿಳಿಸಿದರು.

5 ಎಕರೆಗೆ ಮಾತ್ರ ಬಿತ್ತನೆ ಬೀಜ ರಿಯಾಯಿತಿ

ಕೃಷಿ ಇಲಾಖೆಯಿಂದ ಈ ವರ್ಷ ಪ್ರತಿ ರೈತರಿಗೆ 5 ಎಕರೆ ವಿಸ್ತೀರ್ಣಕ್ಕೆ ಮಾತ್ರ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ನೀಡಲಾಗುತ್ತದೆ. ಈ ಬಾರಿ ಬಾರ್ ಕೋಡ್ ಸ್ಕ್ಯಾನ್ ಕಡ್ಡಾಯಗೊಳಿಸಿರುವುದರಿಂದ ನಿಗದಿತ ಪ್ರಮಾಣದ ಬೀಜ ದೊರೆಯಲಿದೆ. ಹೆಚ್ಚುವರಿ ಬಿತ್ತನೆ ಬೀಜ ಬೇಕಾದಲ್ಲಿ ಪೂರ್ಣ ಹಣ ಪಾವತಿಸಿ ಪಡೆಯಬೇಕು. ರಿಯಾಯಿತಿ ಬಿತ್ತನೆ ಬೀಜ ಖರೀದಿಗೆ ಸಾಮಾನ್ಯ ರೈತರು ಪಹಣಿ, ಆಧಾರ್ ಜರಾಕ್ಸ್ ನೀಡಬೇಕು. ಪರಿಶಿಷ್ಟ ಪಂಗಡದ ರೈತರು ಜಾತಿ ಪ್ರಮಾಣ ಪತ್ರದ ಜರಾಕ್ಸ್ ತರಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹೂವಿನಹಡಗಲಿ ತಾಲ್ಲೂಕು ಉತ್ತಂಗಿಯಲ್ಲಿ ಟಿಲ್ಲರ್ ಹೊಡೆದು ಬಿತ್ತನೆಗೆ ಭೂಮಿ ಹದಗೊಳಿಸಲಾಯಿತು
ಹೂವಿನಹಡಗಲಿ ತಾಲ್ಲೂಕು ಉತ್ತಂಗಿಯಲ್ಲಿ ಟಿಲ್ಲರ್ ಹೊಡೆದು ಬಿತ್ತನೆಗೆ ಭೂಮಿ ಹದಗೊಳಿಸಲಾಯಿತು
ಮುಂಗಾರು ಬಿತ್ತನೆಗೆ ಅಗತ್ಯವಿರುವ ಬೀಜ ಗೊಬ್ಬರ ದಾಸ್ತಾನು ಮಾಡಿದ್ದೇವೆ. ಜೂ. 1 ರಿಂದ ರೈತ ಸಂಪರ್ಕ ಕೇಂದ್ರ ಹೆಚ್ಚುವರಿ ಕೇಂದ್ರಗಳಲ್ಲಿ ಬೀಜ ಮಾರಾಟ ಪ್ರಾರಂಭಿಸುತ್ತೇವೆ.
ಮಹ್ಮದ್ ಆಶ್ರಫ್, ಸಹಾಯಕ ಕೃಷಿ ನಿರ್ದೇಶಕ ಹೂವಿನಹಡಗಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT