ಕಾನಹೊಸಹಳ್ಳಿ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಬೆಳಗಿನ ಜಾವ ಉತ್ತಮ ಮಳೆಯಾಗಿದ್ದು, 7 ಮನೆಗಳಿಗೆ ಹಾನಿಯಾಗಿದೆ.
ಕಾನಹೊಸಹಳ್ಳಿ, ಕೆಂಚಮಲ್ಲನಹಳ್ಳಿ, ಬಯಲುತುಂಬರಗುದ್ದಿ, ಜುಮೋಬನಹಳ್ಳಿ, ಸೂಲದಹಳ್ಳಿ, ಹುಲಿಕೆರೆ, ಎಚ್.ಕೆ ಕುಂಟೆ ಗ್ರಾಮಗಳಲ್ಲಿ ತಲಾ ಒಂದೊಂದು ಮನೆಗಳು ಗೋಡೆ ಸೇರಿದಂತೆ ಚಾವಣಿ ಕುಸಿದಿವೆ ಎಂದು ಕಂದಾಯ ನಿರೀಕ್ಷಕ ಸಿದ್ದಪ್ಪ ತಿಳಿಸಿದ್ದಾರೆ.
ಬುಧವಾದ ಬೆಳಗಿನ ಜಾವ 3ರಿಂದ 6 ರವರೆಗೂ ಬಿಟ್ಟೂ ಬಿಡದೆ ಗುಡುಗು -ಸಿಡಿಲ ಅರ್ಭಟದೊಂದಿಗೆ ನಿರಂತರವಾಗಿ ಮಳೆ ಸುರಿಯಿತು.
ಆಲೂರು, ಕಾನಮಡಗು, ಬಯಲುತುಂಬರಗುದ್ದಿ, ದಾಸರೋಬನಹಳ್ಳಿ, ಹಿರೇಕುಂಬಳಗುಂಟೆ, ಬಣವಿಕಲ್ಲು ಸೇರಿದಂತೆ ಹಲವು ಗ್ರಾಮಗಳಲ್ಲಿ ಹಳ್ಳಗಳು ತುಂಬಿ ಹರಿದಿವೆ. ಕಾನಹೊಸಹಳ್ಳಿ 4.2 ಸೆಂ.ಮಿ, ಬಣವಿಕಲ್ಲು 5.1. ಸೆಂ.ಮಿ, ಚಿಕ್ಕಜೋಗಿಹಳ್ಳಿ 5.6 ಸೆಂ.ಮಿ ಮಳೆಯಾಗಿದೆ.