ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನ ಆಶಯದಂತೆ ಶರಣಸಾಹಿತ್ಯ ಪರಿಷತ್ತು ಕೆಲಸ ಮಾಡಲಿ

ಶರಣ ಸಾಹಿತ್ಯ ಪರಿಷತ್ತಿನ ದೀಕ್ಷಾ ಸಮಾರಂಭದಲ್ಲಿ ಬಸವಲಿಂಗ ಸ್ವಾಮೀಜಿ
Last Updated 9 ಜನವರಿ 2023, 14:04 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಸಮ ಸಮಾಜ ಬಸವಣ್ಣನವರ ಆಶಯ. ಅದರಂತೆ ಶರಣ ಸಾಹಿತ್ಯ ಪರಿಷತ್ತು ಕೆಲಸ ನಿರ್ವಹಿಸಬೇಕು’ ಎಂದು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಹಭಾಗಿತ್ವದಲ್ಲಿ ಭಾನುವಾರ ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಹಾನಗಲ್‌ ಕುಮಾರೇಶ್ವರ ಸಭಾ ಮಂಟಪದಲ್ಲಿ ಏರ್ಪಡಿಸಿದ್ದ ಪರಿಷತ್ತಿನ ನೂತನ ಜಿಲ್ಲಾಧ್ಯಕ್ಷ, ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಕಾಯಕ ದೀಕ್ಷೆ ಮತ್ತು ಡಾ. ಬಸವರಾಜ ಮಲಶೆಟ್ಟಿ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ, ಮತ, ಪಂಥವೆನ್ನದೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಸುವ ಶಕ್ತಿ ಶರಣ ಸಾಹಿತ್ಯ ಪರಿಷತ್ತಿಗಿದೆ. ಬಸವಾದಿ ಶರಣರ ವಿಚಾರಗಳನ್ನು ಪ್ರಚುರಪಡಿಸಲು ಲಿಂಗೈಕ್ಯ ಸಂಗನಬಸವ ಸ್ವಾಮೀಜಿಯವರು ಮಠದಲ್ಲಿ ವೇದಿಕೆ ಕಲ್ಪಿಸಿದ್ದಾರೆ. ಅದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಪರಿಷತ್ತಿನ ನೂತನ ಅಧ್ಯಕ್ಷ ಕೆ. ರವೀಂದ್ರನಾಥ ಮಾತನಾಡಿ, ಶರಣ ಸಾಹಿತ್ಯ ಸಂಸ್ಕೃತಿಯನ್ನು ಪಸರಿಸುವ ನಿಟ್ಟಿನಲ್ಲಿ ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಈ ಸಂಸ್ಥೆ ಹುಟ್ಟು ಹಾಕಿದರು. ಎಚ್‌. ತಿಪ್ಪೇರುದ್ರ ಸ್ವಾಮೀಜಿ, ಗೊ.ರು.ಚ. ಸೇರಿದಂತೆ ಅನೇಕರು ಇದನ್ನು ಮುನ್ನಡೆಸಿದ್ದಾರೆ. ಪೂಜ್ಯರ ಸಹಕಾರ, ಮಾರ್ಗದರ್ಶನದಲ್ಲಿ ಶರಣರ ಚಿಂತನೆಗಳನ್ನು ಬಿತ್ತುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಫ್‌.ಟಿ. ಹಳ್ಳಿಕೇರಿ ಮಾತನಾಡಿ, ಶಿವಶರಣರ ವಚನಗಳ ಬಗ್ಗೆ ಬಸವರಾಜ ಮಲಶೆಟ್ಟಿ ಅವರು ವೈಚಾರಿಕ ನೆಲೆಯಲ್ಲಿ ಸಂಶೋಧನೆ ನಡೆಸಿದ್ದಾರೆ. ಬಸವಣ್ಣ, ಅಂಬಿಗರ ಚೌಡಯ್ಯನವರ ವಚನಗಳಲ್ಲಿ ವಿಡಂಬನೆ, ಜಯದೇವಿ ತಾಯಿ ಕಂಡ ಸಿದ್ದರಾಮ, ಸಣ್ಣಾಟಗಳಲ್ಲಿ ಶರಣರ ಚರಿತ್ರೆ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಲೇಖನಗಳಲ್ಲಿ ಮಲಶೆಟ್ಟಿ ಅವರು ಶರಣರ ಕ್ಷೇತ್ರಗಳ ಬಗ್ಗೆ ವಿಸ್ತಾರವಾದ ಅಧ್ಯಯನ ಮಾಡಿ, ದಾಖಲಿಸಿದ್ದಾರೆ ಎಂದರು.

ಪರಿಷತ್ತಿನ ಬಳ್ಳಾರಿ ಜಿಲ್ಲಾಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ, ಸಾಹಿತಿ ರಾಜಶೇಖರ ಜಮಖಂಡಿ, ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಜಿ. ಬಸಪ್ಪ, ಚೇತನ ಸಾಹಿತ್ಯ ಸಂಸ್ಥೆಯ ಅಧ್ಯಕ್ಷ ಜಂಬುನಾಥ ಎಚ್‌.ಎಂ., ಉಪನ್ಯಾಸಕ ಎಚ್‌.ಎಂ. ನಿರಂಜನ್‌, ಶಿಕ್ಷಕಿ ಟಿ.ಎಂ. ಉಷಾರಾಣಿ, ಕದಳಿ ಮಹಿಳಾ ವೇದಿಕೆಯ ಆರ್‌. ಅಕ್ಕಮಹಾದೇವಿ, ಪರಿಷತ್ತಿನ ತಾಲ್ಲೂಕು ಅಧ್ಯಕ್ಷೆ ಸೌಭಾಗ್ಯಲಕ್ಷ್ಮಿ, ವಿಜಯನಗರ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಧುರಚೆನ್ನ ಶಾಸ್ತ್ರಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ನಾಯಕರ ಹುಲುಗಪ್ಪ, ಶಾರದಾ ಮಲಶೆಟ್ಟಿ, ನಿವೃತ್ತ ಶಿಕ್ಷಕ ಬಿ.ಎಂ.ಎಸ್‌. ಮೃತ್ಯುಂಜಯ, ಯತ್ನಳ್ಳಿ ಮಲ್ಲಯ್ಯ, ಶರಣು ಸ್ವಾಮಿ, ರವಿಶಂಕರ್‌ ಇತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT