ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ಎಸ್ಸೆಸ್ಸೆಲ್ಸಿ: ಉತ್ತಮ ಫಲಿತಾಂಶದ ಗುರಿ

ಪರೀಕ್ಷೆಗೆ ನೋಂದಾಯಿಸಿಕೊಂಡಿವರು 20,849 ವಿದ್ಯಾರ್ಥಿಗಳು
ಹರಿಶಂಕರ್‌ ಆರ್‌.
Published 10 ಫೆಬ್ರುವರಿ 2024, 6:25 IST
Last Updated 10 ಫೆಬ್ರುವರಿ 2024, 6:25 IST
ಅಕ್ಷರ ಗಾತ್ರ

ಬಳ್ಳಾರಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕಳೆದ ವರ್ಷ 31ನೇ ಸ್ಥಾನಕ್ಕೆ ಕುಸಿದಿದ್ದ ಬಳ್ಳಾರಿ ಜಿಲ್ಲೆ ಈ ಬಾರಿ ಶತಾಯಗತಾಯ ಉತ್ತರ ಸಾಧನೆ ಮಾಡಲು ತಯಾರಿ ನಡೆಸುತ್ತಿದೆ. ಅದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 

2022ರಲ್ಲಿ ಜಿಲ್ಲೆ 28ನೇ ರ್‍ಯಾಂಕ್‌ ಗಳಿಸಿತ್ತು. ಮರು ವರ್ಷವೇ 31ನೇ ಸ್ಥಾನಕ್ಕೆ ಜಾರಿ ನಿರಾಶೆ ಮೂಡಿಸಿತ್ತು. ಈ ಬಾರಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ನಿರ್ದಿಷ್ಟ ಗುರಿ ಆಧಾರಿತ ಯೋಜನೆಗಳನ್ನು ರೂಪಿಸಿದ್ದಾರೆ.

‘ಈ ಬಾರಿ 311 ಶಾಲೆಗಳ 20,849 ಮಕ್ಕಳು ಪರೀಕ್ಷೆಗೆ ಹಾಜರಾಗುತ್ತಿದ್ದು, ಅವರಲ್ಲಿ ಶೇ 2ರಷ್ಟು ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಹಿಂದುಳಿದವರು (‘ಸಿ’ ಮತ್ತು ‘ಸಿ’ ಪ್ಲಸ್‌) ಎಂದು ಗುರುತಿಸಲಾಗಿದೆ. ಅಂಥವರನ್ನು ಶೈಕ್ಷಣಿಕ ದತ್ತು ಪಡೆದಿರುವ ಶಿಕ್ಷಕರು, ಹೆಚ್ಚಿನ ತರಬೇತಿ ನೀಡುತ್ತಿದ್ದಾರೆ. ನೋಡಲ್ ಅಧಿಕಾರಿಗಳನ್ನು ನೇಮಿಸಿ, ಶಾಲೆಗಳ ಉಸ್ತುವಾರಿ ನೀಡಲಾಗಿದೆ. ಶಿಕ್ಷಕರ ಕೊರತೆ ಇರುವೆಡೆ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ’ ಎಂದು ಡಿಡಿಪಿಐ ಉಮಾದೇವಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ಮರಳಿ ಶಾಲೆಗೆ ಬಾ:

‘ಶಾಲೆಗೆ ಸತತ ಗೈರಾಗುತ್ತಿದ್ದ, ಶೇ 75ಕ್ಕಿಂತಲೂ ಕಡಿಮೆ ಶಾಲಾ ಹಾಜರಾತಿ ಇದ್ದ 2,086 ಮಕ್ಕಳು ಜಿಲ್ಲೆಯಲ್ಲಿದ್ದರು. ಅವರಲ್ಲಿ ಬಹುತೇಕರ ಮನವೊಲಿಸಿ ಪರೀಕ್ಷೆಗೆ ನೋಂದಣಿ ಮಾಡಿಸಲಾಗಿದೆ. ಅವರ ಕಲಿಕಾ ಪ್ರಗತಿಗೂ ಕ್ರಮ ಕೈಗೊಳ್ಳಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.  

ಕಲಿಕಾ ಆಸೆರೆ– ಪ್ರತಿಬಿಂಬ:

ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಇನ್ನಷ್ಟು ತರಬೇತಿ ನೀಡಿ, ಅವರನ್ನು ಪರೀಕ್ಷೆಗೆ ಸಜ್ಜುಗೊಳಿಸಲು ‘ಕಲಿಕಾ ಆಸರೆ’ ಮತ್ತು ‘ಪ್ರತಿಬಿಂಬ’ ಎಂಬ ಆರು ವಿಷಯಗಳ, ಸಾಧ್ಯತಾ ಪ್ರಶ್ನೋತ್ತರಗಳ ಅಭ್ಯಾಸ ಪುಸ್ತಕಗಳನ್ನು ವಿತರಿಸಲಾಗಿದೆ.

‘ಕಲಿಕಾ ಆಸರೆ’ ಎಂಬ 7,811 ಪುಸ್ತಕಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಕೊಡಲಾಗಿದ್ದರೆ, ‘ಪ್ರತಿಬಿಂಬ’ ಎಂಬ 14,101 ಪುಸ್ತಕಗಳನ್ನು ‘ಕುಮಾರಸ್ವಾಮಿ ಮಿನರಲ್ಸ್‌’ ಸಂಸ್ಥೆಯು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ನೀಡಿದೆ.

ನೀವು ಆಫೀಸರ್‌ ಆಗಬಹುದು:

ತಾವೂ ಮುಂದೊಂದು ದಿನ ಅಧಿಕಾರಿಯಾಗಬಹುದು ಎಂಬ ಮಹಾತ್ವಾಕಾಂಕ್ಷೆಯನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿ, ಆ ಮೂಲಕ ಪರೀಕ್ಷಾ ಫಲಿತಾಂಶವನ್ನು ಹೆಚ್ಚು ಮಾಡುವ ವಿಶಿಷ್ಟ ಪ್ರಯೋಗವನ್ನೂ ಈ ಬಾರಿ ಮಾಡಲಾಗಿದೆ. ‘ವೃತ್ತಿ ಮಾರ್ಗದರ್ಶನ’ ಹೆಸರಿನ ಈ ಕಾರ್ಯಕ್ರಮದ ಭಾಗವಾಗಿ ಇತ್ತೀಚೆಗೆ ಜಿಲ್ಲಾಧಿಕಾರಿಯೇ ಸ್ವತಃ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು.

‘ಶೇ 65ಕ್ಕಿಂತಲೂ ಕಡಿಮೆ ಫಲಿತಾಂಶ ಕಂಡಿದ್ದ 51 ಶಾಲೆಗಳತ್ತ ವಿಶೇಷ ಗಮನ ಕೊಡಲಾಗಿದೆ. ಶಿಕ್ಷಣ ತಜ್ಞರೊಂದಿಗೆ ಫೋನ್‌ ಇನ್‌, ಪೋಷಕರೊಂದಿಗೆ ಸಭೆ, ಘಟಕ ಪರೀಕ್ಷೆ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ತರಬೇತಿ ನೀಡಲಾಗಿದೆ. ಶಿಕ್ಷಣ ತಜ್ಞ ನಾಗರಾಜ್‌ ಅವರು ಕಲ್ಯಾಣ ಕರ್ನಾಕಟ ಭಾಗದಲ್ಲಿ ರ್‍ಯಾಂಕ್‌ ಸುಧಾರಣೆಗೆ 11 ಶಿಫಾರಸುಗಳನ್ನು ಮಾಡಿದ್ದು, ಅವುಗಳನ್ನೂ ಅಳವಡಿಸಿಕೊಂಡಿದ್ದೇವೆ’ ಎನ್ನುತ್ತಾರೆ ಅಧಿಕಾರಿಗಳು.

ಸವಾಲುಗಳು:

‘ಶಿಕ್ಷಕರ ಕೊರತೆ, 15 ದಿನಗಳಿಗೊಮ್ಮೆ ನಡೆಯುವ ಘಟಕ ಪರೀಕ್ಷೆಗಳಿಂದ ಆಗುತ್ತಿರುವ ಒತ್ತಡ, ಕೋವಿಡ್‌ ಕಾಲದಲ್ಲಿ ಎದುರಾದ ಕಲಿಕಾ ಹಿನ್ನಡೆ, ಅತಿಥಿ ಶಿಕ್ಷಕರ ಬೋಧನಾ ಗುಣಮಟ್ಟ, ವಿದ್ಯಾರ್ಥಿಗಳ ಮೊಬೈಲ್‌ ಗೀಳು ಮತ್ತು ಭೌಗೋಳಿಕ ಸನ್ನಿವೇಶ, ಬಿಸಿಲು ಮತ್ತು ಬರವೂ ಪರೀಕ್ಷೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪಂಪಾಪತಿ ಗೌಡ ತಿಳಿಸಿದರು.

ಉಮಾದೇವಿ ಡಿಡಿಪಿಐ
ಉಮಾದೇವಿ ಡಿಡಿಪಿಐ
ಪಂಪಾಪತಿ ಗೌಡ 
ಪಂಪಾಪತಿ ಗೌಡ 
ಉತ್ತಮ ಫಲಿತಾಂಶಕ್ಕಾಗಿ ವಿನೂತನ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಂಡಿದ್ದೇವೆ. ಒಳ್ಳೆಯ ರ್‍ಯಾಂಕ್‌ ಗಳಿಕೆಯ ನಿರೀಕ್ಷೆಯಲ್ಲಿದ್ದೇವೆ
- ಉಮಾದೇವಿ ಡಿಡಿಪಿಐ.
3 ಪರೀಕ್ಷೆ ತೆಗೆದುಕೊಳ್ಳಲು ಅವಕಾಶ 
‘ಈ ಬಾರಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮೂರು ಬಾರಿ ಪರೀಕ್ಷೆ ತೆಗೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಆರೂ ವಿಷಯಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ಈ ಅವಕಾಶ. ಮೊದಲ ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿ ಇನ್ನೂ ಹೆಚ್ಚಿನ ಅಂಕ ಪಡೆಯುವ ಆತ್ಮವಿಶ್ವವಿದ್ದಲ್ಲಿ ಮತ್ತೊಂದು ಪರೀಕ್ಷೆ ಬರೆಯಬಹುದು. ಅದರಲ್ಲೂ ತೃಪ್ತಿ ಕಾಣದೇ ಇದ್ದಲ್ಲಿ ಮೂರನೇ (ಅಂತಿಮ) ಪರೀಕ್ಷೆಯನ್ನೂ ಪಡೆಯಲು ಸಾಧ್ಯವಿದೆ. ಅಂತಿಮವಾಗಿ ಹೆಚ್ಚಿನ ಅಂಕಗಳನ್ನೇ ಪರಿಗಣಿಸಲಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದರು. ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಮಾರ್ಚ್‌ 24ರಿಂದ ಏಪ್ರಿಲ್‌ 6ರವರೆಗೆ ಪರೀಕ್ಷೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT