ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಪುರಾತತ್ವ ಕಚೇರಿ ಕಾರ್ಯಾರಂಭ

ಒಂದು ವರ್ಷ ವಿಳಂಬವಾಗಿ ಮೈಸೂರಿನಿಂದ ಹಂಪಿಗೆ ಸ್ಥಳಾಂತರ
Last Updated 8 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಹೊಸಪೇಟೆ: ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕರ ಕಚೇರಿ ಇಲ್ಲಿನ ಹಂಪಿಯಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ.

ವಿಶ್ವ ಪಾರಂಪರಿಕ ತಾಣ ಹಂಪಿಗೆ ಇಲಾಖೆ ನಿರ್ದೇಶಕರ ಕಚೇರಿ ಸ್ಥಳಾಂತರಿಸಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕರಿಸಿದ ನಂತರ ಮಂಡಿಸಿದ ಮೊದಲ ಬಜೆಟ್‌ನಲ್ಲೇ ಈ ಕುರಿತು ಘೋಷಣೆ ಮಾಡಿದ್ದರು. ಆದರೆ, ಒಂದು ವರ್ಷ ವಿಳಂಬದ ಬಳಿಕ ಮೈಸೂರಿನಿಂದ ಹಂಪಿಗೆ ಕಚೇರಿ ಸ್ಥಳಾಂತರಗೊಂಡಿದೆ.

ಹಂಪಿಯ ಕಮಲ ಮಹಲ್‌ ಬಳಿಯ ಪ್ರವಾಸೋದ್ಯಮ ಕಚೇರಿಗೆ ಹೊಂದಿಕೊಂಡಂತಿರುವ ಜಾಗದಲ್ಲಿ ಏ. 1ರಿಂದ ನಿರ್ದೇಶಕರ ಕಚೇರಿ ಕಾರ್ಯಾರಂಭ ಮಾಡಿದೆ. ಇಲಾಖೆಗೆ ಸೇರಿದ ಈ ಹಿಂದಿನ ಸ್ಥಳೀಯ ಕಚೇರಿಯ ಜಾಗದಲ್ಲಿ ನಿರ್ದೇಶಕರ ಕಚೇರಿ ತೆಗೆಯಲಾಗಿದೆ. ಹೊಸದಾಗಿ ನಾಮಫಲಕವನ್ನು ಅಳವಡಿಸಲಾಗಿದೆ. ಇಲಾಖೆಯ ನಿರ್ದೇಶಕ ಡಾ. ಆರ್‌. ಗೋಪಾಲ್‌ ಅವರು ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಹಂಪಿಯಲ್ಲಿನ ಸ್ಮಾರಕಗಳು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್‌.ಐ.) ಹಾಗೂ ರಾಜ್ಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿವೆ. ಎ.ಎಸ್‌.ಐ. ವ್ಯಾಪ್ತಿಯಲ್ಲಿರುವ ಹಲವು ಸ್ಮಾರಕಗಳು ಈಗಾಗಲೇ ಜೀರ್ಣೋದ್ಧಾರಗೊಂಡಿವೆ. ಕೆಲ ಸ್ಮಾರಕಗಳ ಜೀರ್ಣೋದ್ಧಾರ ಕೆಲಸ ಪ್ರಗತಿಯಲ್ಲಿದೆ. ಆದರೆ, ರಾಜ್ಯ ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಸ್ಮಾರಕಗಳಿಗೆ ಇನ್ನಷ್ಟೇ ಕಾಯಕಲ್ಪ ಸಿಗಬೇಕಿದೆ.

‘ಪುರಾತತ್ವ ಇಲಾಖೆಯ ನಿರ್ದೇಶಕರ ಕಚೇರಿ ಬಂದರಷ್ಟೇ ಸಾಲದು. ಅದರ ವ್ಯಾಪ್ತಿಗೆ ಬರುವ ಸಂರಕ್ಷಣಾ ವಿಭಾಗ ಕೂಡ ಬರಬೇಕು. ಏಕೆಂದರೆ ಇದುವರೆಗೆ ಒಂದೇ ಒಂದು ಉತ್ಖನನ ಕೆಲಸ ಆಗಿಲ್ಲ. ಅನೇಕ ಕಡೆ ಪಾಳು ಬಿದ್ದಿರುವ ಸ್ಮಾರಕಗಳನ್ನು ಗುರುತಿಸುವ ಕೆಲಸ ಕೂಡ ಆಗಿಲ್ಲ. ಅದಕ್ಕೆ ಅನೇಕ ನಿದರ್ಶನಗಳನ್ನು ಕೊಡಬಲ್ಲೇ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ, ಕಮಲಾಪುರ ನಿವಾಸಿ ಶಿವಕುಮಾರ ಮಾಳಗಿ.

‘ರಾಜ್ಯ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಸಾವಿರಾರು ಸ್ಮಾರಕಗಳು ಬರುತ್ತವೆ. ಆದರೆ, ಅದಕ್ಕೆ ಸ್ವಂತ ಕಚೇರಿ ಇಲ್ಲ. ಇಲಾಖೆಗೆ ಸೇರಿದ ಈ ಹಿಂದಿನ ಚಿಕ್ಕ ಕಚೇರಿಗೆ ನಿರ್ದೇಶಕರ ಕಚೇರಿ ಸ್ಥಳಾಂತರಿಸಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಸಿಬ್ಬಂದಿ ಕೂಡ ಇಲ್ಲ. ತಾಲ್ಲೂಕಿನ ಕಡ್ಡಿರಾಂಪುರ, ಕಮಲಾಪುರ, ಸೀತಾರಾಮ ತಾಂಡಾ, ನಾಗೇನಹಳ್ಳಿ, ಮಲಪನಗುಡಿ, ಕೂಡ್ಲಿಗಿಯ ಗುಡೇಕೋಟೆ, ರಾಮದುರ್ಗ, ಹಗರಿಬೊಮ್ಮನಹಳ್ಳಿಯ ಕೋಗಳಿ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಸ್ಮಾರಕಗಳಿವೆ. ಕೆಲವು ಕುಸಿದು ಬೀಳುವ ಹಂತಕ್ಕೆ ಬಂದಿವೆ. ಕೆಲವೆಡೆ ಅವುಗಳ ಆಸ್ತಿ ಅತಿಕ್ರಮಣವಾಗಿದೆ. ಎಂದೋ ಆರಂಭಗೊಳ್ಳಬೇಕಿದ್ದ ಸಂರಕ್ಷಣಾ ಕೆಲಸ ಇದುವರೆಗೆ ಆರಂಭವಾಗಿಲ್ಲ. ಇನ್ನಷ್ಟು ವಿಳಂಬ ಮಾಡಿದರೆ ಅನೇಕ ಸ್ಮಾರಕಗಳು ಸಿಗದೇ ಇರಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT