ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ಸರ್ವರ್‌ ಸಮಸ್ಯೆ: ತೆರಿಗೆ ಪಾವತಿ ಸ್ಥಗಿತ

ರಿಯಾಯಿತಿ ಸಹಿತ ತೆರಿಗೆ ಪಾವತಿ ಅವಧಿ ವಿಸ್ತರಣೆ ನಿರೀಕ್ಷೆ
Published 20 ಏಪ್ರಿಲ್ 2024, 6:09 IST
Last Updated 20 ಏಪ್ರಿಲ್ 2024, 6:09 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಪಾವತಿಗೆ ಸರ್ವರ್‌ ಸಮಸ್ಯೆ ತಲೆದೋರಿದ್ದು, 18 ದಿನಗಳಿಂದ ಕರ ವಸೂಲಿಯೇ ಸ್ಥಗಿತಗೊಂಡಿದೆ. 

ಏಪ್ರಿಲ್‌ ತಿಂಗಳಲ್ಲಿ ಆಸ್ತಿ ತೆರಿಗೆ ಪಾವತಿಸಿದವರಿಗೆ ಶೇ 5ರಷ್ಟು ರಿಯಾಯಿತಿ ನೀಡುವುದಾಗಿ ಬಳ್ಳಾರಿ ಮಹಾನಗರ ಪಾಲಿಕೆ ಕಳೆದ ತಿಂಗಳು ತಿಳಿಸಿತ್ತು. ಬ್ಯಾನರ್‌, ಪ್ರಚಾರ ಫಲಕಗಳನ್ನು ಹಾಕಿ ಪ್ರಚಾರವನ್ನೂ ಮಾಡಿತ್ತು. ತೆರಿಗೆ ಪಾವತಿಸಲು ತಿಂಗಳ ಆರಂಭದಲ್ಲಿ ನಾಗರಿಕರಿಂದಲೂ ಉತ್ತಮ ಸ್ಪಂದನೆ ದೊರೆತಿತ್ತು. ಆದರೆ, ಐದು ದಿನ ನಡೆದ ಆಸ್ತಿ ತೆರಿಗೆ ಸಂಗ್ರಹ ನಂತರ ಸರ್ವರ್‌ ಡೌನ್‌ ಸಮಸ್ಯೆಯಿಂದ ನಿಂತು ಹೋಗಿದೆ. 

ಆನ್‌ಲೈನ್‌ ಮತ್ತು ಆಫ್‌ಲೈನ್‌ ತೆರಿಗೆ ಪಾವತಿ ವ್ಯವಸ್ಥೆಗಳೆರಡೂ ಸ್ಥಗಿತಗೊಂಡಿದ್ದು, ನಾಗರಿಕರು ಪಾಲಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ಏಪ್ರಿಲ್‌ ಒಳಗಾಗಿ ತೆರಿಗೆ ಪಾವತಿ ಮಾಡಿದರೆ ಶೇ 5ರಷ್ಟು ವಿನಾಯಿತಿ ನೀಡುವುದಾಗಿ ಪಾಲಿಕೆಯೇ ಹೇಳಿದೆ. ನಿಗದಿತ ಕಾಲಾವಧಿ ಮೀರಿದರೆ ದಂಡವನ್ನೂ ಹಾಕುತ್ತದೆ. ಆದರೆ, ಈಗ ಎದುರಾಗಿರುವ ಸರ್ವರ್‌ ಸಮಸ್ಯೆಗೆ ಯಾರು ಹೊಣೆ? ಕರ ಪಾವತಿಸಲು ಈ ತಿಂಗಳಲ್ಲೇ  ಮೂರು ಬಾರಿ ಪಾಲಿಕೆ ಕಚೇರಿಗೆ ಭೇಟಿ ಕೊಟ್ಟಿದ್ದೇನೆ. ಹೋದಾಗಲೆಲ್ಲ ಸರ್ವರ್‌ ಡೌನ್‌ ಎಂಬ ಸಿದ್ಧ ಉತ್ತರ ಸಿಗುತ್ತಿದೆ‘ ಎಂದು ವಲಿ ಬಾಷಾ ಎಂಬುವರು ಬೇಸರ ವ್ಯಕ್ತಪಡಿಸಿದ್ದಾರೆ.  

ಕೆಎಂಡಿಎಸ್‌ನತ್ತ ಬೊಟ್ಟು: ಸಮಸ್ಯೆ ಕುರಿತು ಪಾಲಿಕೆ ಅಧಿಕಾರಿಗಳನ್ನು ವಿಚಾರಿಸಿದರೆ ಅವರು 'ಕರ್ನಾಟಕ ಮುನ್ಸಿಪಲ್‌ ಡೇಟಾ ಸೊಸೈಟಿ(ಕೆಎಂಡಿಎಸ್‌)' ಕಡೆಗೆ ಬೊಟ್ಟು ಮಾಡಿದ್ದಾರೆ. ಕೆಎಂಡಿಎಸಿಯು ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ದತ್ತಾಂಶ ನಿರ್ವಹಣಾ ಕೇಂದ್ರವಾಗಿದ್ದು, ಸಂಸ್ಥೆಗಳು ಬಳಸುವ ತಂತ್ರಾಂಶಗಳನ್ನು ನಿರ್ವಹಣೆ ಮಾಡುತ್ತದೆ. ಆಸ್ತಿಯೊಂದರ ಅಳತೆ, ಅದಕ್ಕೆ ಸಂಬಂಧಿಸಿದ ತೆರಿಗೆಯನ್ನು ಸ್ವಯಂಚಾಲಿತವಾಗಿ ಕೆಎಂಡಿಸಿ ಸೂಚಿಸುತ್ತದೆ. ಕೆಎಂಡಿಎಸ್‌ನಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯಿಂದಾಗಿ ಸರ್ವರ್‌ ಸಮಸ್ಯೆ ಎದುರಾಗಿದೆ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು. ಎರಡು ಮೂರು ದಿನಗಳಲ್ಲಿ ಸಮಸ್ಯೆ ಸರಿಹೋಗಬಹುದು‘ ಎಂದು ಹೇಳಿದರು. 

ರಿಯಾಯಿತಿ ವಿಸ್ತರಣೆಯಾಗುವುದೇ? 

ಪಾಲಿಕೆ ಕರ ವಸೂಲಿ ನಿಂತು 18 ದಿನಗಳಾಗಿವೆ. ತೆರಿಗೆ ವಿನಾಯಿತಿ ಮಾಸದಲ್ಲಿ ಅರ್ಧ ಭಾಗ ಕಳೆದ ಹೋಗಿದೆ. ಹೀಗಾಗಿ ವಿನಾಯಿತಿ ಅವಧಿಯನ್ನು ಮೊತ್ತೊಂದು ಅವಧಿಗೆ ವಿಸ್ತರಣೆ ಮಾಡಲಾಗುವುದೇ ಎಂಬ ಪ್ರಶ್ನೆ ನಾಗರಿಕರಲ್ಲಿ ಮೂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆ ವಲಯ ಆಯುಕ್ತ ಗುರುರಾಜ ಸವದಿ, ‘ ನಾಗರಿಕರ ಒತ್ತಾಯ, ಬೇಸಿಗೆ, ಚುನಾವಣೆಗಳ ಹಿನ್ನೆಲೆಯಲ್ಲಿ ರಿಯಾಯಿತಿ ಅವಧಿಯನ್ನು ವಿಸ್ತರಣೆ ಮಾಡಲು ಕೋರಿ ಪೌರಾಡಳಿತ ನಿರ್ದೇಶಕರಿಗೆ (ಡಿಎಂಎ)ಗೆ ಪಾಲಿಕೆ ಆಯುಕ್ತರು  ಪತ್ರ ಬರೆಯುವ ಸಾಧ್ಯತೆಗಳಿವೆ. ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು. 

ಸಿಗದ ಪಿಐಡಿ ಸಂಖ್ಯೆ: ಆನ್‌ಲೈನ್‌ನಲ್ಲಿ ಆಸ್ತಿ ತೆರಿಗೆ ಪಾವತಿಸಬೇಕಿದ್ದರೆ, ಆಸ್ತಿಯ ಪಿಐಡಿ ಸಂಖ್ಯೆ ಅಗತ್ಯ. ಆದರೆ, ನಗರದಲ್ಲಿ ಬಹುತೇಕರ ಆಸ್ತಿಗಳಿಗೆ ಪಿಐಡಿ ಸಂಖ್ಯೆಯೇ ಸಿಕ್ಕಿಲ್ಲ ಎನ್ನಲಾಗಿದೆ. ‘ಪಿಐಡಿ ಸಂಖ್ಯೆ ಪಡೆಯಲು ಆಸ್ತಿಯ ದಾಖಲೆ ಪತ್ರಗಳು, ಹಿಂದಿನ ತೆರಿಗೆ ರಸೀತಿ, ಫೋಟೊಗಳೆಲ್ಲವನ್ನೂ ಕೊಟ್ಟು ಬಹಳ ದಿನಗಳೇ ಕಳೆದಿವೆ. ಇದಕ್ಕೆ ಅವರಿಂದ ಸ್ವೀಕೃತಿ ರಸೀದಿಯೂ ಸಿಕ್ಕಿಲ್ಲ. ಪಿಐಡಿ ಸಂಖ್ಯೆಯನ್ನೂ ಕೊಟ್ಟಿಲ್ಲ’ ಎಂದು ಪ್ರಕಾಶ್‌ ರೆಡ್ಡಿ ಎಂಬುವವರು ದೂರಿದ್ದಾರೆ. 

ಮೇ 1ರಿಂದ ರಿಯಾಯಿತಿ ಇಲ್ಲ: ಪಾಲಿಕೆ ಈ ಹಿಂದೆ ತಿಳಿಸಿದ್ದಂತೆ  ಮೇ 1ರಿಂದ ಜೂನ್‌ 30ರ ಅವಧಿಯಲ್ಲಿ ತೆರಿಗೆ ಪಾವತಿಸುವವರಿಗೆ  ರಿಯಾಯಿತಿ ದೊರೆಯುವುದಿಲ್ಲ. ಆದರೆ, ದಂಡ ರಹಿತವಾಗಿ ಪಾವತಿಸಲು ಅವಕಾಶ ನೀಡಲಾಗಿದೆ. ಜುಲೈ 1ರಿಂದ ಪ್ರತಿ ತಿಂಗಳಿಗೆ ಶೇ 2ರಷ್ಟು ದಂಡ ವಿಧಿಸಲಾಗುತ್ತದೆ. 

ನಾಗರಿಕರಿಗೆ ಸ್ಪಂದಿಸದ ಆಯುಕ್ತ 

ಸದ್ಯ ತೆರಿಗೆ ಪಾವತಿಗೆ ಎದುರಾಗಿರುವ ಸರ್ವರ್‌ ಸಮಸ್ಯೆ ನಗರದಲ್ಲಿ ಈ ವರ್ಷ ಎದುರಾಗಿರುವ ನೀರಿನ ಸಮಸ್ಯೆಗಳನ್ನು ನೇರವಾಗಿ ಪಾಲಿಕೆ ಆಯುಕ್ತರಿಗೆ ತಿಳಿಸಲು ನಗರದ ನಾಗರಿಕರು ದೂರವಾಣಿ ಮೂಲಕ ಹಲವು ಬಾರಿ ಕರೆ ಮಾಡಿದ್ದಾರೆ. ಅವರು ಸ್ಪಂದಿಸಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ನಾಗರಿಕರ ಸಮಸ್ಯೆಗಳ ಪರಿಹಾರಕ್ಕೆಂದೇ ನಗರದಲ್ಲಿ ಹಲವರು ವ್ಯಾಟ್ಸ್‌ಅ್ಯಪ್‌ ಗ್ರೂಪ್‌ಗಳನ್ನು ರಚಿಸಿಕೊಂಡಿದ್ದು ಅದರಲ್ಲಿ ಪಾಲಿಕೆ ಆಯುಕ್ತರನ್ನೂ ಒಳಗೊಂಡಂತೆ ಉನ್ನತ ಮಟ್ಟದ ಅಧಿಕಾರಿಗಳನ್ನು ಸೇರಿಸಿದ್ದಾರೆ. ಅದರಲ್ಲಿ ನಗರದ ಸಮಸ್ಯೆಗಳನ್ನು ಪೋಸ್ಟ್‌ ಮಾಡಲಾಗುತ್ತೆದೆಯಾದರೂ ಪಾಲಿಕೆ ಆಯುಕ್ತರು ಅದಕ್ಕೆ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಎಷ್ಟೋ ಬಾರಿ ಸಮಸ್ಯೆಗೆ ಜಿಲ್ಲಾಧಿಕಾರಿ ಉತ್ತರಿಸುತ್ತಾರೆ. ಆಯುಕ್ತರು ಮಗುಂ ಆಗಿರುತ್ತಾರೆ ಎಂಬ ಆರೋಪವಿದೆ. ಸದ್ಯದ ಸರ್ವರ್‌ ಸಮಸ್ಯೆ ಕುರಿತು ಪ್ರತಿಕ್ರಿಯೆ ಪಡೆಯಲು ಅವರನ್ನು ‘ಪ್ರಜಾವಾಣಿ’ಯೂ ಪ್ರಯತ್ನಿಸಿತಾದರೂ ಅವರು ಕರೆಯನ್ನೇ ಸ್ವೀಕರಿಸಲಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT