ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿ ಸಮ್ಮೇಳನದಿಂದ ಬಳ್ಳಾರಿಯ ಪಾಪ ಕಳೆದಿದೆ: ಸಂಸದ ಎಲ್‌. ಹನುಮಂತಯ್ಯ

Last Updated 23 ಅಕ್ಟೋಬರ್ 2022, 14:46 IST
ಅಕ್ಷರ ಗಾತ್ರ

ಬಳ್ಳಾರಿ (ಡಾ. ಜೋಳದರಾಶಿ ದೊಡ್ಡನಗೌಡರ ವೇದಿಕೆ): ‘ಸಂಗಂ ವಿಶ್ವಕವಿ ಸಮ್ಮೇಳನವು ಬಳ್ಳಾರಿ ಇದುವರೆಗೆ ಮಾಡಿರುವ ಪಾಪಗಳನ್ನು ಕಳೆದಿದೆ’ ಎಂದು ಸಂಸದ ಎಲ್‌. ಹನುಮಂತಯ್ಯ ತಿಳಿಸಿದರು.

‘ಅರಿವು’ ಸಂಸ್ಥೆಯು ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ‘ಸಂಗಂ’ ವಿಶ್ವಕವಿ ಸಮ್ಮೇಳನದ ಸಮಾರೋಪ ಸಮಾರಂಭ ಭಾನುವಾರ ಸಂಜೆ ನಗರದ ಬಿಐಟಿಎಂ ಕಾಲೇಜಿನಲ್ಲಿ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಳ್ಳಾರಿಯ ಮೇಲೆ ಬಹಳ ದೊಡ್ಡ ಹೊರೆಯಿತ್ತು. ಸಂಗಂ ಸಮ್ಮೇಳನದ ಮೂಲಕ ಅಸಾಧ್ಯವಾದುದ್ದನ್ನು ಇಲ್ಲಿನವರು ಸಾಧ್ಯವಾಗಿಸಿದ್ದಾರೆ.

ಹೊರದೇಶದ ಕವಿಗಳು ಹೆಚ್ಚೆಂದರೆ ಬೆಂಗಳೂರು, ಚೆನ್ನೈಗೆ ಬರಬಹುದು. ಆದರೆ, ಬಳ್ಳಾರಿ ಮೆಟ್ರೊಪಾಲಿಟನ್‌ ಸಿಟಿ ಅಲ್ಲದಿದ್ದರೂ ವಿದೇಶಿ ಕವಿಗಳನ್ನು ಕರೆಸಿ ಸತ್ಕಾರ ಮಾಡಿರುವುದು, ಕಾವ್ಯಧಾರೆ ಹರಿಸಿರುವುದು ಮುಖ್ಯವಾದ ಕೆಲಸ. ಯಾರ ಟೀಕೆಗಳಿಗೂ ನೀವು ಕಿವಿಗೊಡಬೇಡಿ ನಿಮ್ಮ ಜೊತೆ ನಾವು, ನಾನಿದ್ದೇನೆ ಎಂದು ಧೈರ್ಯ ತುಂಬಿದರು.

ಬಳ್ಳಾರಿ ಅಂಥ ನಗರದಲ್ಲಿ ವಿಶ್ವಕವಿ ಸಮ್ಮೇಳನ ಮಾಡುವುದು ಸಾಧ್ಯವೇ? ಎಂಬ ಪ್ರಶ್ನೆ ನನ್ನನ್ನು ಕಾಡಿತ್ತು. ಆದರೆ, ಮೂರು ದಿನಗಳ ಕಾಲ ಯಶಸ್ವಿಯಾಗಿ ಸಮ್ಮೇಳನ ನಡೆದಿದೆ. ಜಗತ್ತಿನ 18 ದೇಶಗಳ, ದೇಶದ ವಿವಿಧ ರಾಜ್ಯಗಳು, ರಾಜ್ಯದ ಬೇರೆ ಬೇರೆ ಭಾಗಗಳ ಕವಿಗಳು ಕಾವ್ಯಧಾರೆ ಹರಿಸಿದ್ದಾರೆ ಎಂದರು.

ದೇಶಭಕ್ತಿ, ದೇಶಪ್ರೇಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರೇರಣೆಯಾಗಿತ್ತು. ಇಂದು ಅದು ಭಿನ್ನ ವ್ಯಾಖ್ಯಾನಕ್ಕೆ, ವೈರುದ್ಧಕ್ಕೆ ಸಿಕ್ಕಿ ಹಾಕಿಕೊಂಡಿದೆ. ದೇಶ ಎನ್ನುವುದು ಮಣ್ಣಲ್ಲ, ಅಲ್ಲಿನ ಜನ ಎಂದು ಬಳ್ಳಾರಿಯ ತೆಲುಗು ಕವಿಯೊಬ್ಬರು ಹೇಳಿದ್ದರು. ಒಂದು ಕಾಲದಲ್ಲಿ ಕಮ್ಯುನಿಸ್ಟರು ದೊಡ್ಡ ದೇಶಭಕ್ತರಾಗಿದ್ದರು. ಅವರು ಪೂಜೆಗೆ ಪಾತ್ರರಾಗಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಪರವಾಗಿ ಹೋರಾಟ ನಡೆಸುವವರು, ಆದಿವಾಸಿಗಳು, ಅಸ್ಪೃಶ್ಯರ ಪರವಾಗಿ ಧ್ವನಿ ಎತ್ತುವವರು, ಕಳಕಳಿ ಹೊಂದಿದವನು ದೇಶಭಕ್ತ ಎಂಬ ಭಾವನೆ ಇತ್ತು. ಕೇರಳದ ಮುಖ್ಯಮಂತ್ರಿ ನಂಬೂದರಿ ಪಾಡ್‌ ಇಡೀ ಆಸ್ತಿ ಕಮ್ಯುನಿಸ್ಟ್‌ ಪಕ್ಷಕ್ಕೆ ದಾನ ಮಾಡಿದದರು. ಕಾಲಾನಂತರದಲ್ಲಿ ಅವರನ್ನು ಪ್ರಭುತ್ವ ದೇಶದ್ರೋಹಿಗಳಾಗಿ ನೋಡುತ್ತಿರುವುದು ದುರದೃಷ್ಟಕರ ಎಂದರು.

ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣ ಮಾತನಾಡಿ, 12ನೇ ಶತಮಾನದ ಬಸವಣ್ಣನವರ ನಾಡಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನೋವು ತಂದಿದೆ. ಬರಹಗಾರರು ಕವನಗಳ ಮೂಲಕ ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕಲಾವಿದೆ ಮಾತಾ ಮಂಜಮ್ಮ ಜೋಗತಿ, ಕವಿ ಎಚ್.ಎಸ್‌. ಶಿವಪ್ರಕಾಶ್‌, ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣ, ಸಂಗಂ ಸಮ್ಮೇಳನದ ಸಂಘಟನಾಕಾರರಾದ ಡಾ. ಅರವಿಂದ ಪಟೇಲ್‌, ಎಸ್‌. ಪನ್ನರಾಜ್‌, ಆರಿಫ್‌ ರಾಜಾ, ಅಜಯ್‌ ಬಣಕಾರ್‌, ಡಾ. ವೈ.ಸಿ. ಯೋಗಾನಂದ ರೆಡ್ಡಿ, ಕೆ. ಶಿವಲಿಂಗಪ್ಪ ಹಂದ್ಯಾಳ್‌, ವೀರೇಂದ್ರ ರವಿಹಾಳ್‌, ಮಧುಸೂದನ್‌ ಕಾರಿಗನೂರು, ಡಾ. ಗಡ್ಡಿ ದಿವಾಕರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಸಿದ್ದಲಿಂಗೇಶ್‌ ರಂಗಣ್ಣನವರ, ಸಾಹಿತಿ ಕಮಲಾಕರ ಭಟ್‌, ಬಿಐಟಿಎಂ ಕಾಲೇಜಿನ ಮಹಿಪಾಲ್‌ ಇದ್ದರು.

‘ಸಮ್ಮೇಳನಕ್ಕಾಗಿ ನೊಬೆಲ್‌ ಕೊಟ್ಟಿಲ್ಲ’
‘ನೊಬೆಲ್‌ ಪ್ರಶಸ್ತಿ ಪಡೆಯುವುದಕ್ಕಾಗಿ ವಿಶ್ವಕವಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಸಮ್ಮೇಳನ ಆಯೋಜಿಸಿರುವುದಕ್ಕಾಗಿ ನೊಬೆಲ್‌ ಕೊಟ್ಟ ನಿದರ್ಶನಗಳಿಲ್ಲ’ ಎಂದು ಕವಿ ಎಚ್.ಎಸ್‌. ಶಿವಪ್ರಕಾಶ್‌ ಹೇಳಿದರು.
‘ವಿಚಾರಗಳ ಪರಸ್ಪರ ವಿನಿಮಯ, ಕವಿಗಳ ಸಮ್ಮಿಲನಕ್ಕಾಗಿ ಈ ಸಮ್ಮೇಳನ ಆಯೋಜಿಸಲಾಗಿತ್ತು ಹೊರತು ಬೇರೆ ಯಾವ ಉದ್ದೇಶವೂ ಇರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT