ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಕ್ಷೇತ್ರ | ಅಭ್ಯರ್ಥಿಗಳ ಹಣೆಬರಹ ಬರೆಯಲಿರುವ ಮತದಾರ

ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸರ್ವ ಸಿದ್ಧತೆ; ಇಂದು ಮತದಾನ
Last Updated 4 ಡಿಸೆಂಬರ್ 2019, 11:03 IST
ಅಕ್ಷರ ಗಾತ್ರ

ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಗುರುವಾರ (ಡಿ.5) ಮತದಾನ ನಡೆಯಲಿದೆ. ಕಣದಲ್ಲಿರುವ 13 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆಯಲಿದ್ದಾರೆ.

ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಮೂರು ವಾರಕ್ಕೂ ಹೆಚ್ಚು ಸಮಯ ಪ್ರಚಾರ ನಡೆಸಿ, ಭವಿಷ್ಯದ ಯೋಜನೆಗಳನ್ನು ಮತದಾರರ ಮುಂದಿಟ್ಟಿದ್ದಾರೆ. ಈಗ ಅವರಲ್ಲಿ ಯಾರನ್ನೂ ಆಯ್ಕೆ ಮಾಡಬೇಕು ಎನ್ನುವ ಸರದಿ ಮತದಾರರದ್ದು. ಎಲೆಕ್ಟ್ರಾನಿಕ್‌ ಮತಯಂತ್ರಗಳಲ್ಲಿ ಗುಂಡಿ ಒತ್ತುವ ಮೂಲಕ ಅಭ್ಯರ್ಥಿಗಳ ಭವಿಷ್ಯವನ್ನು ಅವರು ತೀರ್ಮಾನಿಸಬೇಕಿದೆ.

ಈ ಸಲದ ಚುನಾವಣೆಯಲ್ಲಿ ಎಂ–3 ಮತಯಂತ್ರಗಳನ್ನು ಬಳಸಲಾಗುತ್ತಿದ್ದು, ಅವುಗಳನ್ನು ತಮಿಳುನಾಡಿನಿಂದ ತರಿಸಲಾಗಿದೆ. ಈಗಾಗಲೇ ಈ ಸಂಬಂಧ ಸಿಬ್ಬಂದಿಗೆ ಮೂರು ಸಲ ತರಬೇತಿ ನೀಡಲಾಗಿದೆ.

ಒಟ್ಟು 247 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಒಂದು ‘ಪಿಂಕ್’ ಮತಗಟ್ಟೆ ಸ್ಥಾಪಿಸಲಾಗಿದೆ. 21 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಒಟ್ಟು 3,000 ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಿಬ್ಬಂದಿ ಮತಗಟ್ಟೆಗೆ ತೆರಳಲು 40 ಬಸ್ ಸೇರಿದಂತೆ ಒಟ್ಟು 60 ವಾಹನಗಳಿಗೆ ವ್ಯವಸ್ಥೆ ಮಾಡಲಾಗಿದೆ.

ಶಾಂತಿ ಮತ್ತು ಸುವ್ಯವಸ್ಥೆಯಿಂದ ಮತದಾನ ಪ್ರಕ್ರಿಯೆ ನಡೆಸಲು ತೆಲಂಗಾಣದಿಂದ ಬಂದಿರುವ ಕೆ.ಎಸ್‌.ಆರ್‌.ಪಿ. ತುಕಡಿ, ಸ್ಥಳೀಯ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 24 ಸೆಕ್ಟರ್‌ ಅಧಿಕಾರಿಗಳು ಚುನಾವಣೆ ಮೇಲೆ ಹದ್ದಿನ ಕಣ್ಣು ಇಡುವರು.

ಮತಗಟ್ಟೆಯತ್ತ ಸಿಬ್ಬಂದಿ

ಸಂಡೂರು ರಸ್ತೆಯ ಲಿಟ್ಲ್‌ ಫ್ಲವರ್‌ ಶಾಲೆಯಲ್ಲಿ (ಎಲ್‌.ಎಫ್‌.ಎಸ್‌.) ತೆರೆಯಲಾಗಿದ್ದ ಮಸ್ಟರಿಂಗ್‌ ಕೇಂದ್ರದಲ್ಲಿ ಬುಧವಾರ ಬೆಳಿಗ್ಗೆ ಸಿಬ್ಬಂದಿ ಮತಯಂತ್ರ, ಶಾಹಿ, ಮತದಾರರ ಪಟ್ಟಿ ಸೇರಿದಂತೆ ಇತರೆ ವಸ್ತುಗಳನ್ನು ತೆಗೆದುಕೊಂಡು ಮತಗಟ್ಟೆಗಳಿಗೆ ತೆರಳಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಎಸ್.ಎಸ್‌. ನಕುಲ್‌, ಚುನಾವಣಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ನಕುಲ್‌, ‘ಸುಗಮವಾಗಿ ಚುನಾವಣೆ ನಡೆಸಲು ಎಲ್ಲಾ ತಯಾರಿ ಪೂರ್ಣಗೊಂಡಿದೆ’ ಎಂದು ಹೇಳಿದರು.

ಸಿಬ್ಬಂದಿಗೆ ಹುಗ್ಗಿ

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳ್ಳಲು ಬಂದಿದ್ದ ಸಿಬ್ಬಂದಿಗೆ ಎಲ್‌.ಎಫ್‌.ಎಸ್‌. ಶಾಲೆಯಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಗೋಧಿ ಹುಗ್ಗಿ, ಅನ್ನ, ಸಾಂಬಾರ್‌, ಹಪ್ಪಳ, ಬದನೆಕಾಯಿ ಪಲ್ಯ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT