ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಕ್ಷೇತ್ರದಿಂದ ಗೆದ್ದು ಸಂಸತ್‌ಗೆ ಹೋದವರು ಚುನಾವಣೆಯ ಹೊತ್ತಲ್ಲಿ ಕಾಣೆ

Published 17 ಏಪ್ರಿಲ್ 2024, 5:22 IST
Last Updated 17 ಏಪ್ರಿಲ್ 2024, 5:22 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿಯಲ್ಲಿ ಬಿಸಿಲ ಬೇಗೆ ದಿನೇ ದಿನೆ ಏರುತ್ತಿದೆಯಾದರೂ, ಲೋಕಸಭಾ ಚುನಾವಣೆ ಮಾತ್ರ ತಣ್ಣಗೆ ಸಾಗಿದೆ. ಹಿಂದೆಲ್ಲ ಪ್ರತಿಷ್ಠೆಯ ಕಣವಾಗಿದ್ದ, ಬಿರುಸಿನ ರಾಜಕೀಯ ಚಟವಟಿಕೆಗಳಿಗೆ ಸಾಕ್ಷಿಯಾಗಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಈಗ ಹೇಳಿಕೊಳ್ಳುವ ಅಬ್ಬರವಿಲ್ಲ. ಇದರ ಜತೆಗೆ, ಮಾಜಿ ಸಂಸದರ ಗೈರಿನಿಂದಾಗಿ ಚುನಾವಣೆ ಮತ್ತಷ್ಟು ನೀರಸಗೊಂಡಿದೆ. 

ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಗೆದ್ದವರ ಪೈಕಿ ಸೋನಿಯಾಗಾಂಧಿ, ಕೆ. ಸಿ. ಕೊಂಡಯ್ಯ, ಕರುಣಾಕರ ರೆಡ್ಡಿ, ಜೆ. ಶಾಂತಾ, ವಿ.ಎಸ್‌ ಉಗ್ರಪ್ಪ, ವೈ. ದೇವೇಂದ್ರಪ್ಪ ಸದ್ಯ ಸಕ್ರಿಯ ರಾಜಕೀಯದಲ್ಲಿದ್ದಾರೆ. ಆದರೆ, ಇಷ್ಟು ಮಂದಿಯಲ್ಲಿ ಯಾರೊಬ್ಬರೂ ಈ ವರೆಗೆ ಕ್ಷೇತ್ರದಲ್ಲಿ ಅವರವರ ಪಕ್ಷದ ಪರ ಪ್ರಚಾರದ ಉಸಾಬರಿಗೇ ಬಂದಿಲ್ಲ.  

ಕಳೆದ ಚುನಾವಣೆಯ ಅಖಾಡದಲ್ಲಿ ಪರಸ್ಪರ ಸೆಣಸಿದ್ದ ವೈ ದೇವೇಂದ್ರಪ್ಪ ಮತ್ತು ವಿ.ಎಸ್‌ ಉಗ್ರಪ್ಪ ಅವರ ಸುಳಿವು ಈ ಚುನಾವಣೆಯಲ್ಲಿ ಕಾಣುತ್ತಲೇ ಇಲ್ಲ. ಚುನಾವಣೆಯಲ್ಲಿ ಗೆದ್ದಿದ್ದ ವೈ ದೇವಂದ್ರಪ್ಪ ಅವರು ರಾಜಕೀಯ ವೈರಾಗ್ಯಕ್ಕೆ ಜಾರಿದಂತೆ ಕಾಣುತ್ತಿದೆ. ಹಾಲಿ ಸಂಸದರೂ ಆಗಿರುವ ಅವರು ಬಿಜೆಪಿಯ ಯಾವ ಪ್ರಚಾರ ಸಭೆಗಳಲ್ಲೂ ಈ ವರೆಗೆ ಕಾಣಿಸಿಕೊಂಡಿಲ್ಲ. ಅವರ ಅನುಪಸ್ಥಿತಿಯ ಬಗ್ಗೆ ಪಕ್ಷವೂ ತಲೆಕೆಡಿಸಿಕೊಂಡಿಲ್ಲ. 

2018ರಲ್ಲಿ ಅಲ್ಪ ಅವಧಿಗೆ ಸಂಸದರಾಗಿದ್ದ ವಿ.ಎಸ್‌ ಉಗ್ರಪ್ಪ ಈ ಬಾರಿ ಕಾಂಗ್ರೆಸ್‌  ಟಿಕೆಟ್‌ಗಾಗಿ ಬಾರೀ ಪೈಪೋಟಿ ನಡೆಸಿದ್ದರು. ಸ್ಪರ್ಧಿಯಾಗಿದ್ದಿದ್ದರೆ ಕಾಲಿಗೆ ಚಕ್ರಕಟ್ಟಿಕೊಂಡು ಊರೂರು ಸುತ್ತಬೇಕಿದ್ದ ಅವರು, ಟಿಕೆಟ್‌ ಸಿಗದ ಕಾರಣಕ್ಕೆ ಬೆಂಗಳೂರಲ್ಲೇ ಉಳಿದಿದ್ದಾರೆ. 

ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಕೆ.ಸಿ ಕೊಂಡಯ್ಯ ಅವರು ಸಕ್ರಿಯ ರಾಜಕಾರಣದಲ್ಲಿ ಇಲ್ಲ. ಹೀಗಾಗಿ ಅವರು ಎಲ್ಲಿಯೂ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. 

ಬಳ್ಳಾರಿಯಲ್ಲಿ ಬಿಜೆಪಿಯಿಂದ ಗೆದ್ದ ಮೊಟ್ಟ ಮೊದ ಬಿಜೆಪಿ ಅಭ್ಯರ್ಥಿ ಕರುಣಾಕರ ರೆಡ್ಡಿ. 2009ರಲ್ಲಿ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಯಿತು. ಹೀಗಾಗಿ ಲೋಕಸಭೆಯಿಂದ ವಿಧಾನಸಭೆಯತ್ತ ಹೊರಳಿದ ಅವರು ಅದಕ್ಕಾಗಿ ಆರಿಸಿಕೊಂಡಿದ್ದು ಹರಪನಹಳ್ಳಿ ವಿಧಾನಸಭಾ ಕ್ಷೇತ್ರವನ್ನು. ಸದ್ಯ ಅವರು ಆ ಕ್ಷೇತ್ರಕ್ಕಷ್ಟೇ ಸೀಮಿತವಾದಂತೆ ಕಾಣುತ್ರಿದೆ. ಬಳ್ಳಾರಿ ರಾಜಕಾರಣದ ಬಗ್ಗೆ ಕರುಣಾಕರ ರೆಡ್ಡಿ ದಿವ್ಯ ಮೌನಿ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಅವರ ಕಾರ್ಯಕ್ಷೇತ್ರವನ್ನು ಸದ್ಯ ದಾವಣಗೆರೆಗೆ ಸ್ಥಳಾಂತರಿಸಿದ್ದಾರೆ. ಹೀಗಾಗಿ ಇಲ್ಲಿನ ಬಿಜೆಪಿ ಪ್ರಚಾರ ಸಭೆಗಳಲ್ಲಿ ಕರುಣಾಕರ ರೆಡ್ಡಿ ಪಾಲ್ಗೊಳ್ಳುತ್ತಿಲ್ಲ.  

ಹಿಂದೂಪುರದಲ್ಲಿ ಶಾಂತ 

ಬಳ್ಳಾರಿಯ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಅವರ ಸೋದರಿ ಜೆ. ಶಾಂತಾ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಅತ್ಯಲ್ಪ ಮತಗಳ ಅಂತರದಿಂದ ಗೆದ್ದು ಸಂಸದರಾಗಿದ್ದರು. 2014ರ ಚುನಾವಣೆಯಲ್ಲಿ ಅಣ್ಣನಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದ ಶಾಂತ, ನಂತರದ ದಿನಗಳಲ್ಲಿ ಸಕ್ರಿಯ ರಾಜಕಾರಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಿರುವಾಗಲೇ ಇತ್ತೀಚೆಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್‌ ಜಗನ್‌ಮೋಹನ ರೆಡ್ಡಿ ಅವರ ನೇತೃತ್ವದಲ್ಲಿ ವೈಎಸ್‌ಆರ್‌ಸಿಪಿ ಪಕ್ಷ ಸೇರಿರುವ ಶಾಂತಾ ಟಿಡಿಪಿಯ ಭದ್ರಕೋಟೆ ಹಿಂದೂಪುರದಿಂದ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದಾರೆ. 

ನಂದಮೂರಿ ಬಾಲಕೃಷ್ಣ ಅವರು ಪ್ರತಿನಿಧಿಸುವ ಹಿಂದೂಪುರ ವಿಧಾನಸಭಾ ಕ್ಷೇತ್ರವೂ ಇದೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಸಹಜವಾಗಿಯೇ ಅಲ್ಲಿ ಟಿಡಿಪಿಯ ಪ್ರಾಬಲ್ಯ ಅಧಿಕ. ಹೀಗಿರುವ ಕ್ಷೇತ್ರವನ್ನು ದಕ್ಕಿಸಿಕೊಳ್ಳುವುದು ಅಷ್ಟು ಸುಲಭಲ್ಲ. ಹೀಗಾಗಿ ಅವರು ಹಿಂದೂಪುರಕ್ಕಷ್ಟೇ ಸೀಮಿತರಾಗಿ, ಚುನಾವಣಾ ಕಾರ್ಯದಲ್ಲಿ ಶಾಂತಾ ತೊಡಗಿದ್ದಾರೆ. ಬಳ್ಳಾರಿಯಲ್ಲಿ ಶಾಂತಾ ಕಾಣಿಸಿಕೊಳ್ಳುವುದು ಸದ್ಯದ ಚುನಾವಣಾ ಸನ್ನಿವೇಶದಲ್ಲಿ ಕಷ್ಟವೂ ಆಗಬಹುದು. ಶಾಂತಾ ಅವರ ಎದುರು ಟಿಡಿಪಿಯಿಂದ ಬಿ.ಕೆ ಪಾರ್ಥಸಾರಥಿ, ಕಾಂಗ್ರೆಸ್‌ನಿಂದ ನಜೀಮುದ್ದೀನ್‌ ಸ್ಪರ್ಧಿಸಿದ್ದಾರೆ. 

ಸೋನಿಯಾಗೆ ಬಿಡುವೆಲ್ಲಿ?  

ಆಗ ತಾನೆ ರಾಜಕೀಯಕ್ಕೆ ಬಂದಿದ್ದ ಸೋನಿಯಾ ಗಾಂಧಿ 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಥಿ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಅವರ ವಿರುದ್ಧ ಬಿಜೆಪಿಯಿಂದ ಸುಷ್ಮಾ ಸ್ವರಾಜ್‌ ಸ್ಪರ್ಧಿಸಿದ್ದರು. ಸೋನಿಯಾ 56100 ಮತಗಳ ಅಂತರದಿಂದ ಗೆದ್ದಿದ್ದರು. ಕೊನೆಗೆ ಬಳ್ಳಾರಿಯನ್ನು ತೊರೆದಿದ್ದ ಸೋನಿಯಾ ಅಮೇಥಿ ಉಳಿಸಿಕೊಂಡಿದ್ದರು. ಸೋನಿಯಾಗೆ ರಾಜಕೀಯ ಜನ್ಮ ನೀಡಿದ ಹೆಗ್ಗಳಿಕೆ ಬಳ್ಳಾರಿಗಿದೆ. ಆದರೆ ರಾಷ್ಟ್ರ ರಾಜಕಾರಣದಲ್ಲಿ ಬಿಡುವಿಲ್ಲದ ಕಾರ್ಯಚಟವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸೋನಿಯಾ ಗಾಂಧಿ ಅವರಿಗೆ ಇಂಡಿಯಾ ಒಕ್ಕೂಟದ ಜವಾಬ್ದಾರಿಯೂ ಹೆಗಲ ಮೇಲಿದೆ. ಸದ್ಯ ಬಳ್ಳಾರಿಗೆ ಬಂದು ಅವರು ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದು ದೂರದ ಮಾತೇ ಸರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT