ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಸ್ಮಾರಕಕ್ಕೆ ಅಭೇದ್ಯ ಗೋಡೆ ರಕ್ಷಣೆ

Last Updated 28 ಜೂನ್ 2017, 6:30 IST
ಅಕ್ಷರ ಗಾತ್ರ

ಹೊಸಪೇಟೆ: ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಸ್ಮಾರಕಗಳಿಗೆ ಸೇರಿದ ಜಾಗ ಸಂರಕ್ಷಣೆಗೆ ಹಂಪಿ ವೃತ್ತದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್‌.ಐ.) ಮುಂದಾಗಿದೆ.

ಹಂಪಿ ಪರಿಸರದಲ್ಲಿರುವ ವಿವಿಧ ಸ್ಮಾರಕಗಳ ಸುತ್ತ ಗೋಡೆ ನಿರ್ಮಿಸಿ, ಭವಿಷ್ಯದಲ್ಲಿ ಆ ಸ್ಥಳ ಒತ್ತುವರಿಯಾಗದಂತೆ ಕ್ರಮ ಕೈಗೊಂಡಿದೆ. ಈಗಾಗಲೇ ಹಂಪಿ ಭೋಜನ ಶಾಲೆ, ಭೀಮಾ ದ್ವಾರ, ಪಟ್ಟಾಭಿರಾಮ ದೇವಸ್ಥಾನ, ಗಾಣಿಗಿತ್ತಿ ಜೈನ ದೇವಸ್ಥಾನ, ಚಂದ್ರಶೇಖರ ದೇವಸ್ಥಾನದ ಸುತ್ತಲೂ ಕಂಪೌಂಡ್‌ ನಿರ್ಮಿಸುವ ಕೆಲಸ ಭರದಿಂದ ನಡೆದಿದೆ.

ಹಾಸು ಬಂಡೆಗಲ್ಲು ಮಾದರಿಯ ಕಲ್ಲು, ಗಾರೆ ಮಣ್ಣು ಬಳಸಿಕೊಂಡು ಗೋಡೆ ನಿರ್ಮಿಸಲಾಗುತ್ತಿದೆ. ಸ್ಮಾರಕಗಳ ಸಹಜ ಸೌಂದರ್ಯಕ್ಕೆ ಯಾವುದೇ ರೀತಿಯ ಚ್ಯುತಿ ಉಂಟಾಗದಿರಲಿ ಎನ್ನುವುದು ಇದರ ಮುಖ್ಯ ಉದ್ದೇಶ. ಈ ಕೆಲಸವನ್ನು ‘ರ್‍ಯಾಪ್‌ ಕೋರ್ಸ್‌’ ಸಂಸ್ಥೆಗೆ ವಹಿಸಲಾಗಿದೆ. ದೇಶದ ಹಲವೆಡೆ ಜಲಾಶಯಗಳನ್ನು ನಿರ್ಮಿಸಿರುವ ಖ್ಯಾತಿ ಈ ಸಂಸ್ಥೆಗೆ ಇದೆ.

‘ಹಂಪಿಯಲ್ಲಿರುವ ಸ್ಮಾರಕಗಳ ಸುತ್ತ ಸುಮಾರು 15 ಕಿ.ಮೀ ಹಾಗೂ ಬಳ್ಳಾರಿ ಕೋಟೆ ಸಂರಕ್ಷಣೆಗೆ ಅದರ ಸುತ್ತಮುತ್ತ 3 ಕಿ.ಮೀ ಗೋಡೆ ನಿರ್ಮಿಸಲು ₹19 ಕೋಟಿ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ ಆಯ್ದ ಸ್ಮಾರಕಗಳ ಸುತ್ತ ಕಾಂಪೌಂಡ್‌ ನಿರ್ಮಾಣ ಮಾಡಲಾಗುತ್ತಿದ್ದು, ಹಂತ ಹಂತವಾಗಿ ಎಲ್ಲ ಸ್ಮಾರಕಗಳಿಗೂ ಗೋಡೆ ನಿರ್ಮಿಸಿ ಅವುಗಳಿಗೆ ಸೇರಿದ ಜಾಗ ರಕ್ಷಣೆ ಮಾಡಲಾಗುವುದು’ ಎಂದು ಎ.ಎಸ್‌.ಐ. ಹಂಪಿ ವೃತ್ತದ ಸೂಪರಿಂಟೆಂಡೆಂಟ್‌ ಮೂರ್ತೇಶ್ವರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಂಪಿಯಲ್ಲಿರುವ ಎಲ್ಲ ಸ್ಮಾರಕಗಳನ್ನು ಹಂತ ಹಂತವಾಗಿ ಜೀರ್ಣೋದ್ಧಾರ ಮಾಡಲಾಗುವುದು. ಆರಂಭದಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನದ ಗೋಪುರ, ವಿಜಯ ವಿಠಲ ದೇವಸ್ಥಾನ ಅಭಿವೃದ್ಧಿ ಪಡಿಸಲಾಗುವುದು. ಸಣ್ಣಪುಟ್ಟ ಕೆಲಸ ಈಗಾಗಲೇ ಆರಂಭವಾಗಿದೆ’ ಎಂದು ಮಾಹಿತಿ ನೀಡಿದರು.

‘ಇತ್ತೀಚೆಗೆ ಹಂಪಿಗೆ ಭೇಟಿ ನೀಡಿದ್ದ ಪರಿಣತ ತಜ್ಞರಿಗೆ ಎಲ್ಲ ಸ್ಮಾರಕಗಳ ಹಳೆಯ ಛಾಯಾಚಿತ್ರಗಳನ್ನು ನೀಡಲಾಗಿದೆ. ಸ್ಮಾರಕಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು.

₹2 ಕೋಟಿ ವೆಚ್ಚದಲ್ಲಿ ವಿರೂಪಾಕ್ಷ ದೇವಸ್ಥಾನದ ಬಜಾರ್‌, ₹60 ಲಕ್ಷದಲ್ಲಿ ಕಡ್ಡಿರಾಂಪುರದಲ್ಲಿರುವ ಮಹಮ್ಮಡನ್‌ ಗೋರಿ,  ₹3 ಕೋಟಿಯಲ್ಲಿ ಅನಂತಶಯನಗುಡಿ ಹಾಗೂ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಎನ್‌.ಎಂ.ಡಿ.ಸಿ.ಯಿಂದ ₹5 ಕೋಟಿಯಲ್ಲಿ ಬಳ್ಳಾರಿ ಕೋಟೆ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ’ ಎಂದು ವಿವರ ನೀಡಿದರು.

‘ನಮ್ಮ ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಜಿಲ್ಲೆಯ ಸಂಸದ ಬಿ. ಶ್ರೀರಾಮುಲು ಅವರು ಸಾಕಷ್ಟು ಸಹಕಾರ ನೀಡಿದ್ದಾರೆ. ಅವರ ಶ್ರಮದಿಂದ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕೆಲಸಗಳು ಆರಂಭಗೊಂಡಿವೆ’ ಎಂದರು.

* * 

ಎಲ್ಲ ಸ್ಮಾರಕಗಳನ್ನು ಪರಿಣತ ತಜ್ಞರ ಸಲಹೆ ಮೇರೆಗೆ ಜೀರ್ಣೋದ್ಧಾರ ಮಾಡಲಾಗುವುದು. ತಜ್ಞರು ಭೇಟಿ ನೀಡಿ ಹೋಗಿದ್ದಾರೆ. ಸ್ಮಾರಕಗಳ ಸಹಜ ಸೌಂದರ್ಯಕ್ಕೆ ಧಕ್ಕೆ ಆಗದಂತೆ ನೋಡಲಾಗುವುದು
ಮೂರ್ತೇಶ್ವರಿ
ಸೂಪರಿಂಟೆಂಡೆಂಟ್‌, ಎ.ಎಸ್‌.ಐ. ಹಂಪಿ ವೃತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT