ಬುಧವಾರ, ಮೇ 18, 2022
27 °C
ಖಾಸಗಿ ಲೇಔಟ್‌ಗೆ ಪೂರೈಕೆ: ವರದಿ ಸಲ್ಲಿಕೆಗೆ ತಹಶೀಲ್ದಾರ್‌ ಸೂಚನೆ

ಚಿಕ್ಕಸಣ್ಣೆ‌ ಅಮಾನಿಕೆರೆ ಸ್ವರೂಪಕ್ಕೆ ಧಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿರುವ 550 ಎಕರೆ ವಿಸ್ತೀರ್ಣದ ಚಿಕ್ಕಸಣ್ಣೆಯ ಸಣ್ಣ ಅಮಾನಿಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲಾಗುತ್ತಿದೆ. ಇದರಿಂದ ಕೆರೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗುತ್ತಿದೆ ಎಂದು ರೈತರು
ದೂರಿದ್ದಾರೆ.

ಅಭಿವೃದ್ಧಿ ಕೆಲಸಕ್ಕೆ ಎಂದು ಸಬೂಬು ಹೇಳಿ ಮಣ್ಣು ತೆಗೆಯಲಾಗುತ್ತಿದೆ. ಆದರೆ, ಕೆರೆಯ ಮಣ್ಣನ್ನು ಖಾಸಗಿ ಬಡಾವಣೆ ನಿರ್ಮಾಣಕ್ಕೆ ಬಳಸಲಾಗುತ್ತಿದೆ ಎಂದು ಅಚ್ಚುಕಟ್ಟು ಪ್ರದೇಶದ ಅನ್ನದಾತರು ದೂರಿದ್ದಾರೆ.

ಅಣ್ಣೇಶ್ವರ ಗ್ರಾಮ ಪಂಚಾಯಿತಿ ಸರಹದ್ದಿನ ಗಡಿಯಲ್ಲಿರುವ ಸಣ್ಣ ಅಮಾನಿಕೆರೆ ಕೋಡಿ ಪ್ರದೇಶದಲ್ಲಿ ಯಾವುದೇ ಅನುಮತಿ ಪಡೆಯದೆ ಯಂತ್ರಗಳ ಮೂಲಕ ಮಣ್ಣು ತೆಗೆಯಲಾಗುತ್ತಿದೆ. ಇದರಿಂದ ಕೆರೆ ಪಾತ್ರಕ್ಕೆ ಧಕ್ಕೆಯಾಗುತ್ತಿದೆ. ಮಣ್ಣನ್ನು ತೆಗೆದು ಉದಯಗಿರಿ ಗ್ರಾಮದ ಮೂಲಕ ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ಕಂದಾಯ ಇಲಾಖೆಗೆ ದೂರು ನೀಡಿದ್ದರು.

ಈ ದೂರಿನ ಸಂಬಂಧ ಸ್ಥಳಕ್ಕೆ ಆಗಮಿಸಿದ ರಾಜಸ್ವ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಿಗರು ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದ ವಾಹನಗಳನ್ನು ತಡೆದು ಅನುಮತಿ ಪತ್ರ ನೀಡುವಂತೆ ತಾಕೀತು ಮಾಡಿದರು. ಈ ವೇಲೆ ಜೆಸಿಬಿ ಹಾಗೂ ಲಾರಿಗಳ ನಿರ್ವಾಹಕರ ಬಳಿ ಯಾವುದೇ ಅನುಮತಿ ಪತ್ರ ಇಲ್ಲದಿರುವುದು ಬಯಲಾಯಿತು. 

ಇದು ಕಾನೂನುಬಾಹಿರ. ಇನ್ನೊಮ್ಮೆ ಕೆರೆಯ ಬಳಿ ಮಣ್ಣು ತೆಗೆದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿ ವಾಹನಗಳನ್ನು ತೆರವು ಮಾಡಿದರು.

ಅಣ್ಣೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ವೇಣುಗೋಪಾಲ್‌ ಮಾತನಾಡಿ, ‘ಗ್ರಾಮದ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಎರಡು ಲೋಡ್‌ ಮಣ್ಣು ಬೇಕಿದ್ದರಿಂದ ಕೆರೆಯಿಂದ ಮಣ್ಣು ತೆಗೆದಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ನೀಡಿದ ಎಚ್ಚರಿಕೆ ನಂತರ ಕೆಲಸ ಸ್ಥಗಿತಗೊಂಡಿದೆ’ ಎಂದು
ಪ್ರತಿಕ್ರಿಯಿಸಿದರು.

‘ಸಣ್ಣ ಅಮಾನಿಕೆರೆಯ ಕೋಡಿಯಲ್ಲಿ ಮಣ್ಣು ತೆಗೆಯಲು ನಾನು ಯಾವುದೇ ಆದೇಶ ಪತ್ರ ನೀಡಿಲ್ಲ. ಈ ಪ್ರಕರಣ ಸಂಬಂಧ ಪರಿಶೀಲಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು’ ಎಂದು ಅಣ್ಣೇಶ್ವರ ಗ್ರಾಮ ಪಂಚಾಯಿತಿ ಪಿಡಿಒ ಕುಮಾರ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.