ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ ಗಡಿಯ 9 ಹಳ್ಳಿಗಳ ಪ್ರಗತಿಗೆ ಕ್ರಮ

ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್‌ ಭರವಸೆ
Last Updated 5 ಜುಲೈ 2022, 4:44 IST
ಅಕ್ಷರ ಗಾತ್ರ

ಕುಂದಾಣ (ದೇವನಹಳ್ಳಿ ತಾಲ್ಲೂಕು): ‘ರಾಜ್ಯದ ಗಡಿ ಪ್ರದೇಶಗಳಲ್ಲಿ ಭಾಷೆ, ಸಂಸ್ಕೃತಿ, ಜಲ ಸಂಘರ್ಷವಿದೆ. ಈ ಸಮಸ್ಯೆ ನಿವಾರಿಸಿ ಕನ್ನಡದ ಅಸ್ಮಿತೆ ಉಳಿಸಲು ಗಡಿ ಪ್ರದೇಶದ ಹಳ್ಳಿಗಳಿಗೆ ಮೂಲ ಸೌಕರ್ಯ ಒದಗಿಸಿ ಅಭಿವೃದ್ಧಿಗೆ ಒತ್ತು ನೀಡಬೇಕು’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್‌ ತಿಳಿಸಿದರು.

ತಾಲ್ಲೂಕಿನ ಬೀರಸಂದ್ರದ ಜಿಲ್ಲಾಡಳಿತ ಭವನದ ಕಚೇರಿ ಸಭಾಂಗಣ ದಲ್ಲಿ ಸೋಮವಾರ ನಡೆದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳು, ಕಾಮಗಾರಿಗಳು ಮತ್ತು ಗಡಿ ಭಾಗದಲ್ಲಿನ ವಿವಿಧ ಯೋಜನೆಗಳ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಒಟ್ಟು 19 ಜಿಲ್ಲೆಗಳ 63 ತಾಲ್ಲೂಕಿನ 998 ಹಳ್ಳಿಗಳು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿವೆ. ಅದರಂತೆ ಹೊಸಕೋಟೆ ತಾಲ್ಲೂಕಿನಲ್ಲಿ ಒಟ್ಟು 299 ಹಳ್ಳಿಗಳಿದ್ದು, 9 ಹಳ್ಳಿಗಳು ಗಡಿ ಹಳ್ಳಿಗಳಾಗಿವೆ. ಇವು ಪ್ರಾಧಿಕಾರದ ವ್ಯಾಪ್ತಿಗೆ ಬರಲಿವೆ ಎಂದರು.

ಹೊಸಕೋಟೆ ತಾಲ್ಲೂಕಿನ ಅಭಿವೃದ್ಧಿಗೆ ಕಳೆದ 10 ವರ್ಷಗಳಲ್ಲಿ ಒಟ್ಟು ₹ 33 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಈವರೆಗೂ ₹ 24 ಲಕ್ಷ ಅನುದಾನ ಬಳಕೆಯಾಗಿದ್ದು, ₹ 9 ಲಕ್ಷ ಅನುದಾನ ಉಳಿಕೆಯಾಗಿದೆ ಎಂದು ಮಾಹಿತಿ ನೀಡಿದರು.

ಹೊಸಕೋಟೆ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ₹ 5 ಲಕ್ಷ ಅನುದಾನ ಬಿಡುಗಡೆಯಾಗಿದೆ. ಶೀಘ್ರ ಅಂದಾಜು ಪಟ್ಟಿ ಸಲ್ಲಿಸಿ ಕಾಮಗಾರಿ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗೆ ಸೂಚಿಸಿದರು.

ಸಂಸ್ಕೃತಿ ಮತ್ತು ಪ್ರಗತಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಉತ್ಸವ ಕಾರ್ಯಕ್ರಮ ಆಯೋಜಿಸಲು ಹೊಸಕೋಟೆಯ 4 ಸಂಸ್ಥೆಗಳಿಗೆ ತಲಾ ₹ 1 ಲಕ್ಷದಂತೆ ಒಟ್ಟು ₹ 4 ಲಕ್ಷ ಬಿಡುಗಡೆ ಮಾಡಲಾಗಿದೆ. ಶೀಘ್ರವೇ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಬೇಕು ಎಂದು ತಿಳಿಸಿದರು.

ಹೊಸಕೋಟೆ ತಾಲ್ಲೂಕಿನ ಗಡಿ ಭಾಗದ ಕನ್ನಡ ಶಾಲೆಗಳಿಗೆ ಭೇಟಿ ನೀಡಿ ಕನ್ನಡ ಶಿಕ್ಷಕರ ಕೊರತೆ, ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್‌ ಇನ್ನಿತರ ಸ್ಥಿತಿಗತಿ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ತಿಳಿಸಿದರು.

ಗಡಿ ಭಾಗದ ಸಾಮಾಜಿಕ -ಆರ್ಥಿಕ ಸಮೀಕ್ಷೆ ಕೈಗೊಂಡು ವರದಿ ನೀಡುವಂತೆ ಜಿಲ್ಲಾ ಸಾಂಖ್ಯಿಕ ಅಧಿಕಾರಿಗೆ ಸೂಚಿಸಿದರು. ಯುವಕರು, ಯುವತಿ ಯರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಿ ಉದ್ಯೋಗ ಮೇಳ ಆಯೋಜಿಸಬೇಕೆಂದು ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ ಹಾಗೂ ಯುವಜನ ಸೇವಾ ಇಲಾಖೆಯ ಅಧಿಕಾರಿಗೆ ತಿಳಿಸಿದರು.

ಇತರೇ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗಡಿ ಪ್ರದೇಶ ಮತ್ತು ಭಾಷೆ ಸಂಘರ್ಷ, ದೌರ್ಜನ್ಯ ಸಮಸ್ಯೆ ಕಂಡುಬಂದಿಲ್ಲ. ಆದಾಗ್ಯೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಪ್ರಕ್ರಿಯೆಗಳಿಗೆ ಹೆಚ್ಚಿನ ಪ್ರೋತ್ಸಾಹ ನಿಡಬೇಕು. ಈ ನಿಟ್ಟಿನಲ್ಲಿ ಕಾಮಗಾರಿಗಳಿಗೆ ಸಾಂಸ್ಕೃತಿಕ ಸ್ಪರ್ಶ ನೀಡಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್‌ ಮತ್ತೀಹಳ್ಳಿ, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ರೇವಣಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶ್ರೀಕಂಠ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತಿಪ್ಪೇಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ನಮ್ರತಾ, ಯುವಜನ ಸೇವೆ ಮತ್ತು ಕ್ರೀಡಾ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಚೆಲುವಾಂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT