ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪನ್ನೇರಳೆ ಕೃಷಿಯಲ್ಲಿ ಸೋದರರ ಸಾಧನೆ

ವಾಬಸಂದ್ರ ಗ್ರಾಮದ ಚಂದ್ರಪ್ಪ, ಕೋದಂಡಪ್ಪ ಅವರ ಮಾ‌‌ದರಿ ಕೃಷಿ
Last Updated 3 ಏಪ್ರಿಲ್ 2021, 3:37 IST
ಅಕ್ಷರ ಗಾತ್ರ

ಸೂಲಿಬೆಲೆ: ಹೊಸಕೋಟೆ ತಾಲ್ಲೂಕಿನ ವಾಬಸಂದ್ರ ಗ್ರಾಮದ ರೈತರಾದ ಚಂದ್ರಪ್ಪ ಮತ್ತು ಕೋದಂಡಪ್ಪ ಸೋದರರು ಪನ್ನೇರಳೆ ಬೆಳೆ ಬೆಳೆದು ಬದುಕು ರೂಪಿಸಿಕೊಂಡಿದ್ದಾರೆ.

ಸುಮಾರು 30 ವರ್ಷಗಳಿಂದ ಪನ್ನೇರಳೆ ಕೃಷಿಯಲ್ಲಿ ತೊಡಗಿರುವ ಸಹೋದರರು ಪನ್ನೇರಳೆ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಕೃಷಿಕರಾದ ಸಂಪಂಗಿ ರಾಮಯ್ಯ ಎನ್ನುವವರು ಪನ್ನೇರಳೆ ಬೆಳೆಯನ್ನು ತಾಲ್ಲೂಕಿಗೆ ಪರಿಚಯಿಸಿದರು. ಅವರ ಹಾದಿಯಲ್ಲಿ ಇವರು ಕೂಡ ಸಾಗುತ್ತಿದ್ದಾರೆ.

ಪನ್ನೇರಳೆ ಬೆಳಗೆ ಹೆಚ್ಚಿನ ನೀರು ಅವಶ್ಯ ಇರುವುದರಿಂದ ರೈತರು ಈ ಬೆಳೆಯತ್ತ ಗಮನಹರಿಸುವುದಿಲ್ಲ. ಪ್ರತಿ ಕಾಯಿಗೂ ಪ್ಲಾಸ್ಟಿಕ್ ಚೀಲ ಕಟ್ಟಬೇಕು. ಪ್ಲಾಸ್ಟಿಕ್ ಚೀಲ ಕಟ್ಟಿದರೆ ಹಣ್ಣಾಗುತ್ತವೆ. ಇಲ್ಲದಿದ್ದರೆ ಹೂಜಿ (ಕೀಟ) ಕಾಟಕ್ಕೆ ಹಣ್ಣುಗಳಲ್ಲಿ ರಂಧ್ರ ಬಿದ್ದು ನಾಶವಾಗುತ್ತದೆ. ಐದು ವರ್ಷ ಮಾತ್ರ ಬೆಳೆ ತೆಗೆಯಲು ಸಾಧ್ಯ ಎನ್ನುತ್ತಾರೆ ರೈತರಾದ ಚಂದ್ರಪ್ಪ ಮತ್ತು ಕೋದಂಡ.

ಮಳೆಗಾಲ ಮತ್ತು ಚಳಿಗಾಲದಲ್ಲಿ ಪನ್ನೇರಳೆಗೆ ಉತ್ತಮ ಬೆಲೆ ಸಿಗುತ್ತದೆ. ಮೊದಲ ದರ್ಜೆ ಪನ್ನೇರಳೆ ಬೆಲೆ ಬುಟ್ಟಿಗೆ ₹ 1500ರಿಂದ ₹ 2500, 2ನೇ ದರ್ಜೆ ₹ 800ರಿಂದ 1500 ಹಾಗೂ 3ನೇ ದರ್ಜೆ ₹ 500ರಿಂದ 600ಕ್ಕೆ ಮಾರಾಟವಾಗುತ್ತದೆ. ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾಗಿರುವುದರಿಂದ ಕಾಯಿ ಉದುರಿ ಹೋಗುತ್ತದೆ ಹಾಗೂ ಗುಣಮಟ್ಟ ಇಲ್ಲದಿರುವುದರಿಂದ ಬೆಲೆಯೂ ಕುಸಿತ.

ಒಂದು ಎಕರೆ ವಿಸ್ತೀರ್ಣದಲ್ಲಿ 20X25 ಅಡಿ ಅಂತರದಲ್ಲಿ ಸಸಿ ನೆಟ್ಟರೆ ಸುಮಾರು 60 ಗಿಡ ನೆಡಬಹುದು. 35X40 ಅಂತರದಲ್ಲಿ ಸುಮಾರು 40 ಸಸಿ ನೆಡಬಹುದು. ಒಂದು ಸಸಿ ಬೆಲೆ ₹ 10 (5 ವರ್ಷದ ಹಿಂದೆ), ಗುಣಿ ತೊಡುವುದು, ಗೊಬ್ಬರ ಇನ್ನಿತರ ಖರ್ಚು ಸೇರಿದಂತೆ ಒಂದು ಎಕರೆಗೆ ₹ 50 ಸಾವಿರ ಹೂಡಿಕೆ ಮಾಡಬೇಕು. ವರ್ಷದಲ್ಲಿ 7-8 ತಿಂಗಳು ಫಸಲು ಇರುತ್ತದೆ. ಒಂದು ಗಿಡಕ್ಕೆ ಉತ್ತಮ ಇಳುವರಿ ಮತ್ತು ಬೆಲೆ ಸಿಕ್ಕರೆ ₹ 8ರಿಂದ 9 ಸಾವಿರ ಸಿಗುತ್ತದೆ ಎನ್ನುತ್ತಾರೆ ಕೋದಂಡಪ್ಪ.

ಸಾಂಪ್ರದಾಯಿಕ ಕೃಷಿಕರಾಗಿರುವ ಚಂದ್ರಪ್ಪ ಮತ್ತು ಕೋದಂಡಪ್ಪ ಮಾದರಿ ಬೆಳೆಗಾರರ ತೋಟಗಳಿಗೆ ಭೇಟಿ ನೀಡಿ ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಿರುವ ಕುರಿತು ಅಧ್ಯಯನ ನಡೆಸಿದ್ದಾರೆ. ಚಂದ್ರಪ್ಪ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ‘ಆತ್ಮಕೃಷಿ ಯೋಜನೆ’ ಜಿಲ್ಲಾ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT