ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ಕೈತೋಟ ಕನಸಿಗೆ ನೆರವು

ಮನೆ ಅಂಗಳ, ತಾರಸಿಯಲ್ಲಿ ವಿವಿಧ ತರಕಾರಿ, ಹಣ್ಣು ಬೆಳೆಯಲು ಮಾರ್ಗದರ್ಶನ
Last Updated 24 ನವೆಂಬರ್ 2020, 3:21 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಮನೆ ಅಂಗಳದಲ್ಲಿ ಸುಂದರವಾದ ಕೈತೋಟ ಇರಬೇಕು ಎನ್ನುವುದು ಎಲ್ಲರ ಕನಸು. ಆದರೆ, ಯಾವ ಸಸಿ ಎಲ್ಲಿ ನೆಡಬೇಕು. ಯಾವ ರೀತಿ ಪೋಷಣೆ ಮಾಡಬೇಕು ಎನ್ನುವ ಗೊಂದಲ. ಸಮಯದ ಕೊರತೆ ಬಹುತೇಕರ ಜನರ ಸಮಸ್ಯೆ. ಹೀಗಾಗಿ ಮನೆ ಅಂಗಳ ಮತ್ತು ತಾರಸಿ ತೋಟ ನಿರ್ಮಾಣ, ನಿರ್ವಹಣೆ ಮಾಡಿಕೊಡುವ ಕೆಲಸವನ್ನು ಯುವ ಸಂಚಲನ ತಂಡದಿಂದ ಆರಂಭಿಸಲಾಗಿದೆ ಎಂದು ತಂಡದ ಚಿದಾನಂದ್‌ ತಿಳಿಸಿದರು.

ಅವರು ಈ ಬಗ್ಗೆ ಮಾಹಿತಿ ನೀಡಿ, ಲಾಕ್‌ಡೌನ್‌ ನಂತರ ಬಹುತೇಕ ಜನರಿಗೆ ಮನೆ ಅಂಗಳದಲ್ಲೇ ಕನಿಷ್ಠ ಮನೆ ಬಳಕೆಗೆ ವಾರದಲ್ಲಿ ಒಂದೆರಡು ದಿನಕ್ಕೆ ಆಗುವುಷ್ಟಾದರೂ ತರಕಾರಿ, ಸೊಪ್ಪು, ಹೂವು ಬೆಳೆದುಕೊಳ್ಳಬೇಕು ಎನ್ನುವ ಆಲೋಚನೆ ಮೂಡಿದೆ. ಸಾಕಷ್ಟು ಜನ ಪ್ರಯತ್ನ ನಡೆಸಿದ್ದಾರೆ. ಆದರೆ, ಸೂಕ್ತ ಮಾಹಿತಿ ಕೊರತೆಯಿಂದಾಗಿ ಹೂವು, ಸೊಪ್ಪು, ತರಕಾರಿ ಬೆಳೆಯವ ಆಸೆ ಕೈಗೂಡುತ್ತಿಲ್ಲ ಎಂದರು.

ಕೈತೋಟ, ತಾರಸಿ ತೋಟ ಕುರಿತಂತೆ ಈಗ ಸಾಕಷ್ಟು ಆಧುನಿಕ ತಂತ್ರಜ್ಞಾನದ ವಿಧಾನಗಳು ಬಂದಿವೆ. ನೀರಿನ ಮಿತಬಳಕೆ, ಮನೆಯಲ್ಲಿ ಬಳಸಿದ ನೀರನ್ನೇ ಕೈತೋಟಕ್ಕೆ ಬಳಸುವ ವಿಧಾನಗಳು ಸಾಕಷ್ಟು ಇವೆ. ಕೈತೋಟ ಎನ್ನುತ್ತಲೇ ಬಹುತೇಕ ಜನರಿಗೆ ಪ್ರತಿದಿನ ಮಾರುಕಟ್ಟೆಯಲ್ಲಿ ನೋಡುವ ಆಕರ್ಷಕ ಬಣ್ಣ, ದೊಡ್ಡ ಗಾತ್ರದ ತರಕಾರಿ ಬೆಳೆಯಬೇಕು ಎನ್ನುವುದು ಸಹಜ. ಆದರೆ, ಕೈತೋಟದಲ್ಲಿ ನಾಟಿ ಬೀಜದ ತಳಿಗಳನ್ನೇ ಬಳಸಿ ರುಚಿ, ಪೋಷಕಾಂಶ ಎರಡು ಹೊಂದಿರುವ ತರಕಾರಿ ಬೆಳೆಯುವ ಕಡೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ಕೈತೋಟದ ನಿರ್ಮಾಣ, ನಿರ್ವಹಣೆ ಕುರಿತಂತೆ ಮನೆಯವರಿಗೆ ಸೂಕ್ತ ಮಾಹಿತಿ, ಮಾರ್ಗದರ್ಶನ ಮಾಡಲಾಗುತ್ತದೆ. ನಂತರ ಆಸಕ್ತಿಗೆ ಅನುಗುಣವಾಗಿ ಸಸಿ, ಬೀಜ ಹಾಕಿಕೊಡಲಾಗುವುದು. ಮನೆ ಅಂಗಳ ಅಥವಾ ತಾರಸಿಯಲ್ಲಿ ಗಿಡಗಳ ನಡುವೆ ಬೆಳಿಗ್ಗೆ, ಸಂಜೆ ವೇಳೆಯಲ್ಲಿ ಒಂದಿಷ್ಟು ಸಮಯ ಕೆಲಸ ಮಾಡುತ್ತಾ ಕಾಲ ಕಳೆದರೆ ಆರೋಗ್ಯವೂ ಉತ್ತಮವಾಗಿರಲಿದೆ. ಹಾಗೆಯೇ ತಾಜಾ ತರಕಾರಿ, ಹೂವು ಪಡೆಯಬಹುದಾಗಿದೆ ಎಂದರು.

ನಗರದಲ್ಲಿ ಈಚೆಗೆ ನಡೆಸಲಾದ ಜೀವ ವೈವಿಧ್ಯ ಸಮೀಕ್ಷೆ ಸಂದರ್ಭದಲ್ಲಿ ಬಹುತೇಕ ಮನೆ ಅಂಗಳದಲ್ಲಿನ ಕೈತೋಟಗಳಿಗೆ ಭೇಟಿ ನೀಡಿ ಸಸಿಗಳ ದಾಖಲೀಕರಣ ಮಾಡಲಾಗಿತ್ತು. ಬಹುತೇಕ ಕೈತೋಟಗಳಲ್ಲಿ ಕಂಡು ಬಂದ ಸಾಮಾನ್ಯ ಸಮಸ್ಯೆಯೆಂದರೆ ಯಾವ ಸಸಿ ಎಲ್ಲಿ ನಡೆಬೇಕು ಎನ್ನುವುದೇ ಆಗಿತ್ತು. ಮನೆ ಬಳಕೆಗೆ ಅಗತ್ಯ ಇರುವ ಕೈತೋಟ ಯಾವ ರೀತಿ ಸಿದ್ಧ ಪಡಿಸಿಕೊಳ್ಳಬೇಕು ಎನ್ನುವ ಮಾಹಿತಿ ಕೊರತೆ ಕಾಣುತಿತ್ತು ಎನ್ನುತ್ತಾರೆ ಯುವ ಸಂಚಲನ ತಂಡದ ಹಣಬೆ ಸತೀಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT