ಬುಧವಾರ, ಆಗಸ್ಟ್ 21, 2019
22 °C

ಅಂಬರವೇರಿದ ಕನಕಾಂಬರ: ಕೆ.ಜಿ.ಗೆ ₹2,400

Published:
Updated:
Prajavani

ದೇವನಹಳ್ಳಿ: ವಾರ್ಷಿಕ ವರ ಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದೆ. ಮಾರುಕಟ್ಟೆಯಲ್ಲಿ ಕನಕಾಂಬರ ಒಂದು ಕೆ.ಜಿಗೆ  ₹ 2,400  ದಾಖಲೆಯ ಬೆಲೆ ಇದೆ.

ವರಲಕ್ಷ್ಮಿ ಹಬ್ಬ ವಾಡಿಕೆ ಮಳೆ ಇಲ್ಲದೆ ಬರದ ಪರಿಸ್ಥಿತಿಯಲ್ಲಿಯೂ ಅನಿವಾರ್ಯವಾಗಿ ಆಚರಿಸಬೇಕಾದ ಸ್ಥಿತಿಯಿದ್ದು, ಅಗತ್ಯವಿರುವ ಎಲ್ಲ ರೀತಿಯ ದಿನಬಳಕೆಯ ವಸ್ತುಗಳ ಬೆಲೆ ದುಬಾರಿಯಾಗಿ ಪರಿಣಮಿಸಿದೆ. ಮಹಿಳೆಯರ ಅಚ್ಚುಮೆಚ್ಚಿನ ಹಬ್ಬಕ್ಕೆ ಕಿಸೆ ಖಾಲಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದರು.

ಪ್ರಸ್ತುತ ಮಾರುಕಟ್ಟೆಯಲ್ಲಿನ ವಿವಿಧ ಹೂವುಗಳ ದರ ಪ್ರತಿ ಕೆ.ಜಿಗೆ ಗುಲಾಬಿ ₹ 400, ಸೇವಂತಿಗೆ ₹ 480, ಮಲ್ಲಿಗೆ ₹ 1,200, ಕಾಕಡ ₹ 1,100, ಸುಗಂಧರಾಜ ₹ 1,500, ಸಂಪಿಗೆ ₹ 1,750, ಚೆಂಡು ಹೂ ₹ 150 ರಿಂದ 180 ವರೆಗೆ, ಮರಳೆ ₹ 725, ಬಟನ್ ₹ 250, ಪ್ರತಿಯೊಂದು ಹೂವಿನ ಬೆಲೆ ಕಳೆದ ಬಾರಿಗಿಂತ ಶೇ 30 ರಿಂದ 40 ರಷ್ಟು ಏರಿಕೆಯಾಗಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ.

ಬೆಂಗಳೂರು ನಗರದಲ್ಲಿನ ಮಾರುಕಟ್ಟೆ ಬೆಲೆಯನ್ನು ಮೀರಿಸುತ್ತಿದೆ ಎನ್ನುತ್ತಾರೆ ಗ್ರಾಹಕಿ ಸುನಿತಾ. ಹಬ್ಬಕ್ಕೆ ವಿಶೇಷವಾಗಿ ಖರೀದಿಸುವ ಎಲ್ಲ ಮಾದರಿಯ ಹಣ್ಣುಗಳ ದರದಲ್ಲಿ ಕೆಲವು ಯಥಾಸ್ಥಿತಿ ಇವೆ. ಕೆಲವು ಹಣ್ಣುಗಳ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಸೇಬು ₹ 100 ರಿಂದ 140 , ಕಿತ್ತಳೆ  ₹120 ರಿಂದ 180, ಅನಾನಸ್ ₹ 200, ಏಲಕ್ಕಿ ಬಾಳೆ ₹ 100 ರಿಂದ 120, ಪಚ್ಚಬಾಳೆ ₹ 40 ರಿಂದ 50, ಮರಸೇಬು ₹ 100 ರಿಂದ 120, ದ್ರಾಕ್ಷಿ ₹ 100 ರಿಂದ 120, ಪೇರಲ ₹ 80 ರಿಂದ 100 ರವರೆಗೆ ಮಾರಾಟವಾಗುತ್ತಿವೆ.  ಹಬ್ಬದ ಸಿಹಿಯ ಜತೆಗೆ ಬೆಲೆ ಏರಿಕೆ ಕಹಿ ಗ್ರಾಹಕರನ್ನು ಈ ಬಾರಿ ತಟ್ಟಿದೆ.

Post Comments (+)