ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆ ಮನೋಭಾವ ಅಗತ್ಯ: ಸಂವಿಧಾನ ಅರ್ಪಣಾ ದಿನಾಚರಣೆ

ಸಂವಿಧಾನ ಅರ್ಪಣಾ ದಿನಾಚರಣೆ
Last Updated 28 ಜನವರಿ 2021, 2:34 IST
ಅಕ್ಷರ ಗಾತ್ರ

ವಿಜಯಪುರ: ಪ್ರಜಾಪ್ರಭುತ್ವದ ತತ್ವಗಳಲ್ಲಿ ನಂಬಿಕೆ, ವಿಶ್ವಾಸ ಇರಿಸಿರುವ ದೇಶ ಭಾರತ. ಜನತಂತ್ರದ ಉತ್ತಮ ಕಾರ್ಯ ನಿರ್ವಹಣೆಗಾಗಿ ಎಲ್ಲರೂ ರಾಷ್ಟ್ರಭಕ್ತಿ, ಏಕತೆ, ಸಮಾನತೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್ ಹೇಳಿದರು.

ಪಟ್ಟಣದ ಶಾಂತಿನಗರದಲ್ಲಿ ಭಾರತ ಜನಜಾಗೃತಿ ಸೇನೆಯಿಂದ ಆಯೋಜಿಸಿದ್ದ ಸಂವಿಧಾನ ಅರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನವು ದೇಶದ ಪ್ರಜೆಗಳಿಗೆ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದೆ. ಇವುಗಳನ್ನು ಪ್ರತಿಯೊಬ್ಬರೂ ಪಾಲಿಸಿದಾಗ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ದೇಶದ ಜನರು ಧರ್ಮ, ಭಾಷೆ, ಸಂಸ್ಕೃತಿ, ಪಂಗಡ, ಸಂಪ್ರದಾಯ ಮತ್ತು ಪರಂಪರೆಗೆ ಧಕ್ಕೆ ಬಾರದಂತೆ ಸಮಸ್ತರನ್ನೂ ಏಕತೆ ಮತ್ತು ಸಹಿಷ್ಣುತೆಯಲ್ಲಿ ಬೆಸೆಯುವಂತೆ ಸಂವಿಧಾನದ ಕರಡು ಸಿದ್ಧಪಡಿಸಿದ ಕೀರ್ತಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆ ಎಂದರು.

ಭಾರತ ಜನಜಾಗೃತಿ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಸಿ. ಮುನಿಯಪ್ಪ ಮಾತನಾಡಿ, ದೇಶದ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಹೋಗಲಾಡಿಸಲು ಅಂಬೇಡ್ಕರ್ ಸಂವಿಧಾನ ರಚಿಸಿ ದೇಶಕ್ಕೆ ಅರ್ಪಿಸಿದರು. ದೇಶ ಹಾಗೂ ಸಮುದಾಯದ ಜನರನ್ನು ಅತಿಯಾಗಿ ಪ್ರೀತಿಸುವ ಕಾರಣಕ್ಕೆ ನಾನು ಸಂವಿಧಾನ ಬರೆದಿದ್ದೇನೆ. ಬೇರೆಯವರು ಬರೆದರೆ ನೊಂದ ಜನರಿಗೆ ನ್ಯಾಯ ಸಿಗುವುದು ಕಷ್ಟ ಎನಿಸಿತ್ತು ಎಂದು ಬಾಬಾ ಸಾಹೇಬರು ಹೇಳಿದ್ದಾರೆ ಎಂದರು.

ರಾಜಕೀಯ ವ್ಯವಸ್ಥೆಯಲ್ಲಿ ಸಾಮಾನ್ಯನಿಂದ ರಾಷ್ಟ್ರಪತಿವರೆವಿಗೂ ಒಂದೇ ಮತವಿದ್ದರೂ ಸಾಮಾಜಿಕ ಹಾಗೂ ಆರ್ಥಿಕತೆಯಲ್ಲಿ ಅಸಮಾನತೆ ಕಾಣುತ್ತಿದೆ. ಪ್ರತಿಯೊಬ್ಬರಿಗೂ ನ್ಯಾಯ ಸಮ್ಮತವಾದ ಸಮಾನ ಹಕ್ಕುಗಳು, ಅವಕಾಶಗಳು ಇರಬೇಕೆಂಬ ಉದ್ದೇಶದಿಂದ ಅವರು ಸಾಕಷ್ಟು ಅಧ್ಯಯನ ಮಾಡಿ ದೇಶಕ್ಕೆ ಸದೃಢ ಸಂವಿಧಾನ ನೀಡಿದ್ದಾರೆ ಎಂದು ಹೇಳಿದರು.

ವಹ್ನಿಕುಲ ತಿಗಳರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ವಿ. ರಾಮಚಂದ್ರಪ್ಪ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ, ಶಿಕ್ಷಣ, ಸಮಾನತೆಯ ಹಕ್ಕುಗಳನ್ನು ನೀಡಿದ್ದಾರೆ. ಅವರ ಶ್ರಮದಿಂದ ದೇಶ ಇಂದು ಉತ್ತಮ ಸಂವಿಧಾನ ಹೊಂದಿದೆ. ಸಮಾನ ಸಂಕಷ್ಟಗಳು ಹಾಗೆಯೇ ಉಳಿದಿವೆ. ಸಂಘಟನೆಗಳು ಹೆಚ್ಚಾಗಿವೆ. ಆದರೆ, ದಲಿತರ ಸಮಸ್ಯೆಗಳು ಮಾತ್ರ ಹಾಗೆಯೇ ಉಳಿದಿವೆ ಎಂದು ವಿಷಾದಿಸಿದರು.‌

ಸಂಘಟನೆಗಳು ಈಗ ಭದ್ರವಾಗಬೇಕಿದೆ. ಒಗ್ಗಟ್ಟಿನಿಂದ ಮಾತ್ರ ಇದು ಸಾಧ್ಯವಾಗುತ್ತದೆ. ದಲಿತರು ಎಂದರೆ ಕೇವಲ ಒಂದು ವರ್ಗದ ಜನರಲ್ಲ. ದಲಿತರು ಎಂದರೆ ಈ ದೇಶದಲ್ಲಿ ಶಿಕ್ಷಣ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದವರು. ಅವರಿಗೆ ಈ ಎಲ್ಲಾ ಹಕ್ಕುಗಳು ಸಿಗಬೇಕು ಎನ್ನುವುದು ಅಂಬೇಡ್ಕರ್ ಅವರ ಆಶಯವಾಗಿದೆ ಎಂದರು.

ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಅಕ್ಕಯಮ್ಮ, ಟೌನ್ ಪ್ರಧಾನ ಕಾರ್ಯದರ್ಶಿ ಎಸ್. ಮಂಜುನಾಥ್, ಮುಖಂಡರಾದ ಎಂ.ಡಿ. ರಾಮಚಂದ್ರಪ್ಪ, ಎಚ್.ಕೆ. ಸುರೇಶ್, ವೆಂಕಟರೋಣಪ್ಪ, ಮುನೇಗೌಡ, ಶ್ರೀಧರ್, ಸುಬ್ಬಣ್ಣ, ರಮೇಶ್, ಸಹದೇಶ್, ಮದರ್ ತೆರೆಸಾ ಟ್ರಸ್ಟ್‌ನ ಸಂಸ್ಥಾಪಕಿ ನಿರ್ಮಲಾ ಮೇರಿ, ಶಬಿನಾ ಸುಲ್ತಾನಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT