ಆನೇಕಲ್: ಕಡಿಮೆ ಬೆಲೆಗೆ ಗೃಹ ಬಳಕೆಯ ವಸ್ತು ನೀಡುವುದಾಗಿ ನಂಬಿಸಿ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ನೆರಳೂರು ಸುತ್ತಮುತ್ತ ಹಲವು ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದ ತಮಿಳುನಾಡು ಮೂಲದ ವಂಚಕರು ಬುಧವಾರ ರಾತ್ರಿ ಅಂಗಡಿ, ಮನೆ ಖಾಲಿ ಮಾಡಿ ಪರಾರಿಯಾಗಿದ್ದಾರೆ.
ತಮಿಳುನಾಡು ಮೂಲದ ಆರ್ಮುಗಂ ಎಂಬ ವ್ಯಕ್ತಿ ತಿಂಗಳ ಹಿಂದೆ ನೆರಳೂರಿನಲ್ಲಿ ರಾಬಿನ್ ಹೋಮ್ ನೀಡ್ಸ್ ಹೆಸರಿನ ಗೃಹೋಪಯೋಗಿ ವಸ್ತುಗಳ ಮಳಿಗೆ ತೆರೆದಿದ್ದ. ಟಿವಿ, ಸೋಫಾ, ಫ್ರಿಡ್ಜ್, ವಾಷಿಂಗ್ ಮೆಷಿನ್, ಮಿಕ್ಸಿ ಸೇರಿದಂತೆ ಗೃಹ ಬಳಕೆಯ ಸಾಮಗ್ರಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಈ ಭಾಗದ ಜನರ ವಿಶ್ವಾಸ ಗಳಿಸಿದ್ದ.
ಹಣ ಪಾವತಿಸಿದ ತಿಂಗಳ ನಂತರ ಕಡಿಮೆ ಬೆಲೆಗೆ ವಸ್ತುಗಳನ್ನು ನೀಡುವುದಾಗಿ ಹೇಳಿ ನೆರಳೂರು, ಹೆನ್ನಾಗರ, ಚಂದಾಪುರ ಭಾಗಗಳಲ್ಲಿ ಭಾರಿ ಪ್ರಚಾರ ನಡೆಸಿದ್ದ ಆತ ಒಂದು ತಿಂಗಳಲ್ಲಿ ಅನೇಕರಿಗೆ ಗೃಹ ಬಳಕೆ ವಸ್ತುಗಳನ್ನು ಮಾರಾಟ ಕೂಡ ಮಾಡಿದ್ದ.
ಕಡಿಮೆ ಬೆಲೆಗೆ ವಸ್ತುಗಳು ಸಿಗುವುದು ಖಾತ್ರಿಯಾಗುತ್ತಲೇ ಮುಗಿಬಿದ್ದ ಗ್ರಾಹಕರು ಮುಂಗಡವಾಗಿ ಹಣ ಪಾವತಿಸಿದ್ದರು. ಲಕ್ಷಾಂತರ ರೂಪಾಯಿ ಸಂಗ್ರಹವಾಗುತ್ತಲೇ ಆರ್ಮುಗಂ ಬುಧವಾರ ರಾತ್ರಿ ಅಂಗಡಿ ಮತ್ತು ಮನೆ ಖಾಲಿ ಮಾಡಿ ತನ್ನ ತಂಡದೊಂದಿಗೆ ಪರಾರಿಯಾಗಿದ್ದಾನೆ.
ಗುರುವಾರ ಅಂಗಡಿ ತೆರೆಯದಿದ್ದರಿಂದ ಆತಂಕಗೊಂಡ ಜನರು ಮಳಿಗೆಯ ಮುಂದೆ ಜಮಾಯಿಸಿದ್ದರು. ಹಣ ಕಳೆದುಕೊಂಡ ಹಲವಾರು ಮಹಿಳೆಯರು ಅಂಗಡಿಯ ಮುಂದೆ ಪ್ರತಿಭಟನೆ ನಡೆಸಿದರು.
ಅಂದಾಜು 500-600 ಮಹಿಳೆಯರು ಮುಂಗಡ ಹಣ ಪಾವತಿಸಿದ್ದು, ಒಂದು ಅಂದಾಜಿನ ಪ್ರಕಾರ ಆರ್ಮುಗಂ ₹50 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಿರುವ ಮಾಹಿತಿ ಇದೆ. ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಳಿಗೆ ಬಾಡಿಗೆ ನೀಡಿದ್ದ ಮಾಲೀಕನಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.