ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ಗುಂಡಿ ತುಂಬಿದ ರಸ್ತೆ: ಸಂಚಾರವೇ ಸವಾಲು!

ಅತ್ತಿಬೆಲೆ- – ಬಳ್ಳೂರು ರಸ್ತೆ: ಮೂರು ಕಿ.ಮೀ ಸಾಗಲು ಬೇಕು ಒಂದು ತಾಸು...
Last Updated 23 ಜನವರಿ 2023, 4:18 IST
ಅಕ್ಷರ ಗಾತ್ರ

ಆನೇಕಲ್ : ತಾಲ್ಲೂಕಿನ ಅತ್ತಿಬೆಲೆ-ಬಳ್ಳೂರು ರಸ್ತೆ ಹಾಗೂ ಅತ್ತಿಬೆಲೆ-ಸರ್ಜಾಪುರ ರಸ್ತೆಯುದ್ದಕ್ಕೂ ಬಿದ್ದಿರುವ ಗುಂಡಿಗಳಿಂದಾಗಿ ಈ ಭಾಗದ ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ.

ಗುಂಡಿಗಳೇ ತುಂಬಿರುವ ಈ ರಸ್ತೆಯಲ್ಲಿ ಸಂಚಾರ ಸವಾಲಿನ ಕೆಲಸವಾಗಿದೆ. ದ್ವಿಚಕ್ರ ವಾಹನ, ಬಸ್‌, ಕಾರು, ಲಾರಿ ಮುಂತಾದ ವಾಹನಗಳು ಮೂರು ಕಿ.ಮೀ. ಸಾಗಲು ಕನಿಷ್ಟ ಒಂದು ತಾಸು ಸಮಯ ಬೇಕು. ಇದರಿಂದ ವಾಹನ ದಟ್ಟಣೆ
ಹೆಚ್ಚಾಗಿರುತ್ತದೆ.

ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಆಗಿಂದ್ದಾಗಿ ಮಾಡುತ್ತಾರೆ. ಆದರೆ ಮುಚ್ಚಿದಷ್ಟೇ ವೇಗವಾಗಿ ರಸ್ತೆ ಗುಂಡಿ ಬೀಳುತ್ತದೆ. ಇದರಿಂದ ರಸ್ತೆ ಗುಂಡಿಯಿಂದ ಮುಕ್ತವಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಗುಂಡಿಗಳನ್ನು ಮುಚ್ಚುವ ಬದಲು ರಸ್ತೆಯನ್ನು ಸರ್ವ ಋತು ರಸ್ತೆಯನ್ನಾಗಿ ಮಾಡುವ ಮೂಲಕ ಶಾಶ್ವತ ಪರಿಹಾರ ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವ ಅತ್ತಿಬೆಲೆ ಟಿವಿಎಸ್‌ ಸರ್ಕಲ್‌-ಬಳ್ಳೂರು ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಲಾರಿಗಳು ಸಂಚರಿಸುತ್ತಿದ್ದು, ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಅತ್ತಿಬೆಲೆ ಮತ್ತು ತಮಿಳುನಾಡಿನ ಹೊಸೂರು ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಗೆ ತೆರಳುವ ಕಾರ್ಮಿಕರು, ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಶಾಲಾ ಬಸ್‌ಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕು. ಆದರೆ ಹದಗೆಟ್ಟ ರಸ್ತೆಯಿಂದಾಗಿ ಸಾರ್ವಜನಿಕರು ಪ್ರತಿದಿನ ಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ಗುಂಡಿಗಳೇ ಹೆಚ್ಚಾಗಿರುವುದರಿಂದ ಜನರು ಪ್ರಾಣವನ್ನು ಕೈಯಲ್ಲಿಡಿದು ಸಂಚರಿಸಬೇಕಾಗಿದೆ. ಒಂದೆಡೆ ಗುಂಡಿಗಳ ಸಮಸ್ಯೆ ಮತ್ತೊಂದೆಡೆ ಹೆಚ್ಚು ಲಾರಿಗಳ ಸಂಚಾರ ಇದರ ನಡುವೆ ದ್ವಿಚಕ್ರ ವಾಹನ ಸವಾರರು ಹರಸಾಹಸ ಪಡಬೇಕಾಗಿದೆ. ಜೊತೆಗೆ ಗುಂಡಿಗಳನ್ನು ತಪ್ಪಿಸಲು ಹೋದಾಗ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.

ಅತ್ತಿಬೆಲೆ-ಬಳ್ಳೂರು ರಸ್ತೆಯನ್ನು ಧೂಳು ಮತ್ತು ಗುಂಡಿ ಮುಕ್ತವಾಗಿ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಧೂಳಿನಿಂದ ಹೆಚ್ಚಾದ ಅಪಘಾತಗಳು

ಅತ್ತಿಬೆಲೆ-ಬಳ್ಳೂರು ರಸ್ತೆಯಲ್ಲಿ ಗುಂಡಿಗಳ ಜೊತೆಗೆ ಧೂಳಿನ ಸಮಸ್ಯೆ ಹೆಚ್ಚಾಗಿದೆ. ವಾಹನಗಳು ಸಂಚರಿಸಿದರೆ ಧೂಳು ಹೆಚ್ಚಾಗಿ ಮುಂದಿನ ವಾಹನಗಳು ಕಾಣದೆ ಅಪಘಾತಗಳೂ ಹೆಚ್ಚಾಗುತ್ತಿದೆ. ಜೊತೆಗೆ ಭಾರೀ ಗಾತ್ರದ ಲಾರಿಗಳು ಸಂಚರಿಸಿದಾಗ ಹದಗೆಟ್ಟ ರಸ್ತೆಗಳಲ್ಲಿ ಬೇರೆ ವಾಹನಗಳು ಸಂಚರಿಸುವುದು ಕಷ್ಟಕರವಾಗಿದೆ.

3 ವರ್ಷ ಕಳೆದರೂ ಪೂರ್ಣಗೊಳ್ಳದ ಮೇಲ್ಸೇತುವೆ ಕಾಮಗಾರಿ

ವಾಹನ ದಟ್ಟಣೆಯನ್ನು ತಪ್ಪಿಸಲು ಅತ್ತಿಬೆಲೆ ಟಿ.ವಿ.ಎಸ್‌ ಸರ್ಕಲ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಾರಂಭಿಸಿ ಮೂರು ವರ್ಷಗಳು ಕಳೆದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಮೇಲ್ಸೇತುವೆಗಾಗಿ ನಿರ್ಮಿಸಿರುವ ಪಿಲ್ಲರ್‌ಗಳು ತುಕ್ಕು ಹಿಡಿಯುತ್ತಾ, ಕಸ ಹಾಕುವ ಮತ್ತು ಪ್ರಚಾರ ಫಲಕಗಳನ್ನು ಅಂಟಿಸುವ ಸ್ಥಳವಾಗಿ ಮಾರ್ಪಟ್ಟಿದೆ. ಜೊತೆಗೆ ಈಗಲೂ ಕಾಮಗಾರಿ ಪೂರ್ಣಗೊಳ್ಳುವ ಯಾವ ಲಕ್ಷಣಗಳು ಕಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT