ಶನಿವಾರ, ಜೂಲೈ 4, 2020
23 °C
ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ l ಸರ್ಕಾರದಿಂದ ಪಂಚಾಯತ್ ರಾಜ್‌ ಕಾಯ್ದೆ ಉಲ್ಲಂಘನೆ

ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತ ವಿರೋಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ, ಕಾರ್ಮಿಕ ಕಾಯ್ದೆ ತಿದ್ದುಪಡಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಸಮಿತಿ ನೇಮಕ ಮಾಡುತ್ತಿರುವ ಸರ್ಕಾರದ ಕ್ರಮಗಳನ್ನು ವಿರೋಧಿಸಿ ಕಾಂಗ್ರೆಸ್ ವತಿಯಿಂದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಅವಧಿ ಮೇ 31ಕ್ಕೆ ಮುಕ್ತಾಯವಾಗುತ್ತಿವೆ. ಆದರೆ, ಸರ್ಕಾರ ಚುನಾವಣೆ ನಡೆಸದೇ ತಮ್ಮ ಕಾರ್ಯಕರ್ತರನ್ನು ಆಡಳಿತ ಸಮಿತಿಗೆ ನೇರ ನೇಮಕ ಮಾಡಲು ಹೊರಟಿರುವುದು ಖಂಡನೀಯ. ಪಂಚಾಯತ್ ರಾಜ್ ಕಾಯ್ದೆಗೆ ಧಕ್ಕೆ ತರಲಿದೆ. ಸರ್ಕಾರ ಈಗಿರುವ ಸದಸ್ಯರ ಅವಧಿ ವಿಸ್ತರಿಸಲಿ ಇಲ್ಲವೇ ಚುನಾವಣೆ ನಡೆಸಲಿ. ರಾಜ್ಯದ ಬಿಜೆಪಿ ಸರ್ಕಾರ ಬಂದಾಗಿನಿಂದ ತಾಲ್ಲೂಕಿನ ಹಲವಾರು ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನವನ್ನು ತಡೆಹಿಡಿದೆ. ಇದು ಜನವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಎಪಿಎಂಸಿ ನಿರ್ದೇಶಕ ವಿಶ್ವನಾಥರೆಡ್ಡಿ, ನಾರನಹಳ್ಳಿ ಎಂ.ಗೋವಿಂದರಾಜು ಮಾತನಾಡಿ, ‘ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುತ್ತಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಕಾಂಗ್ರೆಸ್‍ನ ವಿರೋಧವಿದೆ. ಕಾಯ್ದೆಯಲ್ಲಿ ರೈತರ ಹಿತಕ್ಕೆ ಮಾರಕವಾಗಿರುವ ಅಂಶಗಳಿದ್ದು, ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲವಾಗಲಿದೆ. ಎಪಿಎಂಸಿ ಸಮಸ್ಯೆಗಳನ್ನು ಬಗೆಹರಿಸಬೇಕಿತ್ತು. ಆಧುನೀಕರಣಗೊಳಿಸುವ ಯೋಜನೆಯನ್ನು ಜಾರಿಗೆ ತರಬೇಕಿತ್ತು. ಆದರೆ, ಸರ್ಕಾರ ರೈತ ವಿರೋಧಿಯಾಗಿ ವರ್ತಿಸುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್, ಕಾಂಗ್ರೆಸ್ ತಾಲ್ಲೂಕು ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್,ತಾಲ್ಲೂಕು ಪಂಚಾಯಿತಿ ಸದಸ್ಯ ನಾರಾಯಣಗೌಡ, ಎಸ್.ಸಿ.ಘಟಕದ ನಗರ ಅಧ್ಯಕ್ಷ ಬಿ.ಮುನಿರಾಜು, ನಗರ ಪ್ರಧಾನ ಕಾರ್ಯದರ್ಶಿ ಆಂಜಿನಮೂರ್ತಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ರೇವತಿ ಅನಂತರಾಮ್, ತಾಲ್ಲೂಕು ಅಧ್ಯಕ್ಷೆ ಪುಷ್ಪಲತ, ನಗರ ಘಟಕದ ಅಧ್ಯಕ್ಷೆ ಪ್ರಭಾವತಿ, ಮುಖಂಡರಾದ ತಿ.ರಂಗರಾಜು, ಕೆ.ಪಿ.ಜಗನ್ನಾಥ್‌, ಭಾಸ್ಕರ್‌, ಬಿ.ಎಚ್.ಕೆಂಪಣ್ಣ,ಹೇಮಂತರಾಜು ಇದ್ದರು.

ಕಾರ್ಮಿಕರ ಬಗ್ಗೆ ಸರ್ಕಾರಕ್ಕಿಲ್ಲ ಕಾಳಜಿ:  ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡಿ ಕೆಲಸದ ಅವಧಿಯನ್ನು 8 ರಿಂದ 10 ಗಂಟೆಗೆ ಹೆಚ್ಚಿಸುತ್ತಿರುವುದು ಕಾರ್ಮಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಹೇಳಿದರು. 

ಮಾತೃಪೂರ್ಣ ಯೋಜನೆಯನ್ನು ಇಂದಿನ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದೆ. ಇದರಿಂದ ಉತ್ತರ ಕರ್ನಾಟಕದಲ್ಲಿ 20 ಮಂದಿ ಗರ್ಭಿಣಿ ಹಾಗೂ ಬಾಣಂತಿಯರು ಸಾವನ್ನಪ್ಪಿದ್ದಾರೆ. ಕೂಡಲೇ ಈ ಯೋಜನೆಯನ್ನು ಮರು ಜಾರಿ ಮಾಡಬೇಕು. ಕಾನೂನು ಸಚಿವ ಮಾಧುಸ್ವಾಮಿ ಅವರು ಕೋಲಾರದ ಎಸ್.ಅಗ್ರಹಾರದಲ್ಲಿ ರೈತ ಮಹಿಳೆಯನ್ನು ಅವಮಾನಿಸಿರುವುದು ಖಂಡನೀಯ. ಮುಖ್ಯಮಂತ್ರಿಗಳು ಕೂಡಲೇ ಸಂಪುಟದಿಂದ ಇವರನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು