ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಪರೀಕ್ಷೆ ಪೂರೈಸಿದ ತೇಜಸ್

Last Updated 28 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿರುವ ಲಘು ಯುದ್ಧ ವಿಮಾನ ತೇಜಸ್‌ ಶುಕ್ರವಾರ ಕ್ಷಿಪಣಿ ಉಡಾವಣಾ ಪರೀಕ್ಷಾರ್ಥ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದೆ.

ವಿಮಾನವನ್ನು ಸೇನಾಪಡೆಗಳ ಸೇವೆಗೆ ನಿಯೋಜಿಸಲು ಅಗತ್ಯವಿರುವ ‘ಅಂತಿಮ ಕಾರ್ಯಾಚರಣಾ ಅನುಮತಿ’ ಪಡೆಯಲು ಈ ಪರೀಕ್ಷೆ ನೆರವಾಗಲಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಗೋವಾ ಕರಾವಳಿಯಲ್ಲಿ ಶುಕ್ರವಾರ ನಡೆದ ಪರೀಕ್ಷೆಯ ವೇಳೆ ತೇಜಸ್‌ ಯಶಸ್ವಿಯಾಗಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ. ದೃಷ್ಟಿ ವ್ಯಾಪ್ತಿಯಾಚೆಗಿನ ಗುರಿಯ ಮೇಲೆ ದಾಳಿ ನಡೆಸುವ ಸಾಮರ್ಥ್ಯವಿರುವ ‘ಡೆರ‍್ಬಿ’ ಕ್ಷಿಪಣಿಯನ್ನು ತೇಜಸ್ ಮೂಲಕ ಉಡಾಯಿಸಲಾಯಿತು.

ಭಾರಿ ವೇಗದಲ್ಲಿ ಹಾರಾಟ ನಡೆಸುತ್ತಿರುವಾಗ ಕ್ಷಿಪಣಿಯನ್ನು ತೇಜಸ್‌ ಸರಿಯಾಗಿ ಉಡಾಯಿಸುತ್ತದೆಯೇ ಎಂಬುದನ್ನು ಪರೀಕ್ಷಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿತ್ತು. ಕ್ಷಿಪಣಿಯು ವಿಮಾನದಿಂದ ಬೇರ್ಪಡುವ ಪ್ರಕ್ರಿಯೆ ಅತ್ಯಂತ ಮಹತ್ವದ ಹಂತ. ಈ ಎಲ್ಲವನ್ನೂ ತೇಜಸ್ ಯಶಸ್ವಿಯಾಗಿ ಪೂರೈಸಿದೆ.

ಪರೀಕ್ಷಾರ್ಥ ಕಾರ್ಯಾಚರಣೆಯನ್ನು ಬೇರೆ ಎರಡು ತೇಜಸ್ ಯುದ್ಧವಿಮಾನಗಳ ಮೂಲಕ ಚಿತ್ರೀಕರಿಸಲಾಗಿದೆ. ಆ ವಿಡಿಯೊವನ್ನು ತೇಜಸ್ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಡೆರ‍್ಬಿ ಕ್ಷಿಪಣಿ ವಿಶೇಷತೆ
ಇನ್ಫ್ರಾರೆಡ್‌ ಕಿರಣ ಬಳಸಿಕೊಂಡು ಗುರಿಯತ್ತ ಮುನ್ನುಗ್ಗುವುದು ರಫೇಲ್‌ ಕಂಪನಿ ಅಭಿವೃದ್ಧಿಪಡಿಸಿರುವ ಡೆರ‍್ಬಿ ಕ್ಷಿಪಣಿಗಳ ವಿಶೇಷತೆಯಾಗಿದೆ.

ದಟ್ಟ ರಾತ್ರಿಯ ವೇಳೆ ಮತ್ತು ಮಳೆಗಾಲದ ಮೋಡ ಕವಿದ ಪ್ರತಿಕೂಲ ವಾತಾವರಣದ ಮಧ್ಯೆಯೂ ಈ ಕ್ಷಿಪಣಿಗಳು ಕರಾರುವಾಕ್ಕಾಗಿ ಶತ್ರುನೆಲೆಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿವೆ. ಎದುರಾಳಿಗಳ ವಿಮಾನಗಳ ಮೇಲೆ ದಾಳಿ ನಡೆಸಲು ಈ ಕ್ಷಿಪಣಿಗಳನ್ನು ಬಳಸಲಾಗುತ್ತದೆ. ಭಾರತದ ವಾಯುಪಡೆಯ ಮಿರಾಜ್ ಯುದ್ಧವಿಮಾನಗಳಲ್ಲಿ ಇವನ್ನು ಬಳಸಲಾಗುತ್ತದೆ.

**

40 - ತೇಜಸ್ ಯುದ್ಧವಿಮಾನಗಳನ್ನು ಖರೀದಿಸಲು ವಾಯುಪಡೆ ಈಗಾಗಲೇ ಆದೇಶ ನೀಡಿದೆ

83 - ತೇಜಸ್‌ ವಿಮಾನಗಳನ್ನು ಎರಡನೇ ಹಂತದಲ್ಲಿ ಖರೀದಿಸಲಾಗುತ್ತದೆ

₹ 50,000 ಕೋಟಿ - 83 ವಿಮಾನಗಳ ಖರೀದಿ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT