‘ಕಲಾವಿದರಿಗೆ ನಟನೆ ಜತೆ ಉಚ್ಚಾರಣೆ ಅನಿವಾರ್ಯ’

7
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಅಭಿಮತ

‘ಕಲಾವಿದರಿಗೆ ನಟನೆ ಜತೆ ಉಚ್ಚಾರಣೆ ಅನಿವಾರ್ಯ’

Published:
Updated:
Prajavani

ವಿಜಯಪುರ: ‘ಕಲಾವಿದರಿಗೆ ಕೇವಲ ನಟನೆ ಮಾತ್ರವಲ್ಲದೆ, ಭಾಷೆಯ ಉಚ್ಚಾರಣೆಯ ಮೇಲೂ ಹಿಡಿತವಿರಬೇಕು‘ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಹೇಳಿದರು.

ಕನ್ನಡ ಕಲಾವಿದರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ 51ನೇ ಕನ್ನಡ ದೀಪ ಕಾರ್ಯಕ್ರಮ ಹಾಗೂ ಕಲಾವಿದರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

’ಕಾವ್ಯಗಳಲ್ಲಿ ರಮ್ಯವಾದದ್ದು ನಾಟಕ. ಭರತಮುನಿಯಿಂದ ಆರಂಭವಾದ ನಾಟಕವು ಈಗಲೂ ಪ್ರಚಲಿತವಾಗಿದೆ. ರಂಗಕಲೆಯು ಬದುಕು ಕಲಿಸುತ್ತದೆ. ಕಲಾವಿದನು ಕನ್ನಡ ವ್ಯಾಕರಣ ಬಳಕೆಯ ಬಗ್ಗೆ ತಿಳಿಯಬೇಕು. ಅಲ್ಪಪ್ರಾಣ, ಮಹಾಪ್ರಾಣ, ಅನುನಾಸಿಕಗಳ ಉಚ್ಚಾರಣೆಯ ಬಗ್ಗೆ ಗಮನವಿರಬೇಕು. ಕಲಾವಿದರಲ್ಲಿ ಸ್ವರ ವಿನ್ಯಾಸ ಹೆಚ್ಚು ಮಹತ್ವವಾದುದು ಅದನ್ನು ಕಡೆಗಣಿಸಬಾರದು‘ ಎಂದರು.

‌’ಕಲಾವಿದರು ನಟನಾ ಕೌಶಲ ತೋರ್ಪಡಿಸಿ ಸಹಜವಾಗಿ ಪಾತ್ರದಲ್ಲಿ ಪರಕಾಯ ಪ್ರವೇಶ ಪಡೆದು ಕಲಾರಸಿಕರನ್ನು ರಂಜಿಸುತ್ತಾರೆ. ಇಂತಹ ಕಲಾವಿದರನ್ನು ಗುರುತಿಸುವುದರ ಜತೆಗೆ ಗ್ರಾಮೀಣ ಭಾಗದ ಕಲಾವಿದರನ್ನು ಹೊರ ಪ್ರಪಂಚಕ್ಕೆ ಪರಿಚಯಿಸುವ ಹೊಣೆಗಾರಿಕೆ ಸಂಘದ ಮೇಲಿದೆ‘ ಎಂದರು.

ಸಾಹಿತಿ ಡಾ.ವಿ.ಎನ್.ರಮೇಶ್ ಮಾತನಾಡಿ, ’ಕಣ್ಣಲ್ಲಿ ನೋಡಿ ಅಭಿನಯಿಸುವುದಕ್ಕೂ ಕಲಿತು ಅಭಿನಯಿಸುವುದಕ್ಕೂ ವ್ಯತ್ಯಾಸವಿದೆ. ಕಲಾವಿದರೂ ಯಾವಾಗಲೂ ಜಾಗೃತರಾಗಿರುವ ಕಾರಣ ಅವರಲ್ಲಿನ ಕಲೆಯನ್ನು ಯಾವಾಗ ಬೇಕಾದರೂ ಹೊರತರಬಹುದಾಗಿದೆ’ ಎಂದರು.

ಪುರಸಭಾ ಸದಸ್ಯ ಜೆ.ಎನ್.ಶ್ರೀನಿವಾಸ್ ಮಾತನಾಡಿ, ’ರಂಗಕಲೆ ಗ್ರಾಮಾಂತರ ಪ್ರದೇಶಗಳಲ್ಲಿ ಉಳಿದುಕೊಂಡಿದೆ. ಅನೇಕರಲ್ಲಿ ಪ್ರತಿಭೆಯಿದ್ದರೂ ಕಲೆ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ರಂಗಕಲೆ, ಜಾನಪದ ಕಲೆ, ಸೋಬಾನೆ, ಮುಂತಾದ ಕಲೆಗಳಿಗೆ ಹೆಚ್ಚು ಪ್ರಚಾರದ ಅವಶ್ಯಕತೆಯಿದೆ‘ ಎಂದರು.

ಕರವೇ ಮುಖಂಡ ವಿ.ರಾ.ಶಿವಕುಮಾರ್ ಮಾತನಾಡಿ, ’ಆಧುನಿಕತೆಯ ಸೆಳತಕ್ಕೆ ಸಿಲುಕಿ ಕನ್ನಡ ಭೂಮಿಯ ಕಲೆಗಳು ವಿನಾಶದ ಅಂಚನ್ನು ತಲುಪಿದೆ. ಅವುಗಳನ್ನು ಉಳಿಸಿ ಪ್ರೋತ್ಸಾಹಿಸಬೇಕಾಗಿರುವ ಅನಿವಾರ್ಯತೆ ನಮ್ಮೆಲ್ಲರ ಮೇಲಿದೆ‘ ಎಂದರು.

ಕನ್ನಡ ಕಲಾವಿದ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ರಾಜಗೋಪಾಲ್ ಮಾತನಾಡಿ, ’ಕಲೆ ಉಳಿಯಬೇಕು. ಕಲಾವಿದರು ಬೆಳೆಯಬೇಕು. ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಗೆ ಧಕ್ಕೆಯಾಗುವಂತಹ ಸನ್ನಿವೇಶಗಳು ನಿರ್ಮಾಣವಾದಾಗ ಕನ್ನಡಪದ ಸಂಘಟನೆಗಳು, ಕನ್ನಡಿಗರು ಒಂದಾಗಬೇಕು. ರಂಗಕಲೆಯ ಮೂಲಕ ಗುರ್ತಿಸಿಕೊಂಡಿರುವ ಹಿರಿಯ ಕಲಾವಿದರಿಗೆ ತಿಂಗಳಿಗೆ ₹5 ಸಾವಿರ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು’ ಎಂದು ತಿಳಿಸಿದರು.
 
ರಂಗಕಲಾವಿದರಾದ ಗೋವಿಂದಪ್ಪ, ಮೋಹನ್ ಬಾಬು, ನಾಗರಾಜ್, ಪೌರಾಣಿಕ ನಾಟಕಗಳ ಕೆಲ ಸನ್ನಿವೇಶಗಳನ್ನು ಪ್ರದರ್ಶಿಸಿದರು. ಎಂ.ವಿ.ನಾಯ್ಡು ತಂಡದವರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು. ಕಲಾವಿದ ಗೋವಿಂದಪ್ಪ ಅವರನ್ನು ಸನ್ಮಾನಿಸಿದರು.

ಮುಖಂಡರಾದ ಕನಕರಾಜು, ನರಸಿಂಹಮೂರ್ತಿ, ಸುಭ್ರಮಣಿ, ಪಿಳ್ಳಪ್ಪ, ನಾಗಯ್ಯ, ಟಿ.ಗೋವಿಂದರಾಜು, ಬೇಕರಿ ಜನಾರ್ಧನ, ಸೀತಾರಾಮಯ್ಯ, ಭೈರೇಗೌಡ, ಸಾಗರ್, ರವಿಕುಮಾರ್, ವೇಮಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !