ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲ್ಲೂರು ಕೋಟೆ ಅಭಿವೃದ್ಧಿ ಭರವಸೆ

Last Updated 28 ಜೂನ್ 2019, 12:22 IST
ಅಕ್ಷರ ಗಾತ್ರ

ವಿಜಯಪುರ: ‘ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಜೀವವೈವಿಧ್ಯ ತಾಣವಾಗಿರುವ ಐತಿಹಾಸಿಕ ಕೋಟೆಯನ್ನು ಶೀಘ್ರವಾಗಿ ಅಭಿವೃದ್ಧಿ ಪಡಿಸಿ, ಪ್ರವಾಸಿ ತಾಣವಾಗಿ ಮಾರ್ಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ ಹೇಳಿದರು.

ಇಲ್ಲಿನ ನಲ್ಲೂರು ಕೋಟೆಗೆ ಗುರುವಾರ ತಂಡದೊಂದಿಗೆ ಭೇಟಿ ನೀಡಿದ್ದ ಅವರು, ‘ಜೀವ ವೈವಿಧ್ಯ ತಾಣದಲ್ಲಿರುವ ಬೃಹದಾಕಾರದ ಹುಣಸೆಮರಗಳು ಹಾಗೂ ಅವುಗಳ ವಿಶಿಷ್ಟತೆಯನ್ನು ಪರಿಶೀಲಿಸಲಾಗಿದೆ. ಈ ಪ್ರದೇಶದ ಅಭಿವೃದ್ದಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಶೀಘ್ರ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಅಭಿವೃದ್ಧಿ ಮಾಡುವುದರ ಜೊತೆಗೆ ಇದರ ಉತ್ತಮ ನಿರ್ವಹಣೆಗೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಕರ್ನಾಟಕ ಜೀವವೈವಿಧ್ಯ ಮಂಡಳಿಯ (ಪ್ರಾಣಿಶಾಸ್ತ್ರ) ಸಹಾಯಕ ಸಂಶೋಧಕ ಎಸ್.ಪ್ರೀತಮ್ ಮಾತನಾಡಿ, ‘ನಲ್ಲೂರು ಹುಣಸೆ ತೋಪು ನಮ್ಮ ರಾಷ್ಟ್ರದಲ್ಲೆ ಪ್ರಥಮವಾಗಿ ಘೋಷಣೆಯಾದ ಜೀವವೈವಿಧ್ಯ ಪಾರಂಪರಿಕ ತಾಣವಾಗಿದೆ. ಇಲ್ಲಿ ಚೋಳರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಗಿರುವ ಗಂಗಾತಾಯಿ ದೇವಾಲಯ, ಬಸವಣ್ಣ ಹಾಗೂ ಚನ್ನಕೇಶವಸ್ವಾಮಿ ಪುರಾತನ ದೇವಾಲಯಗಳು ಹಾಗೂ ಪ್ರಪಂಚದಲ್ಲಿ ಎಲ್ಲೂ ನೋಡಲು ಸಿಗದ ಸುಮಾರು 298 ಅತ್ಯಂತ ವಿಶಿಷ್ಟ ತಳಿಯ ಹುಣಸೆಮರಗಳು ಇತಿಹಾಸವನ್ನು ನೆನಪಿಸಲು ಸಾಕ್ಷಿಯಾಗಿವೆ. ಸ್ಥಳೀಯ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಸೂಕ್ತ ರೀತಿಯಲ್ಲಿ ಸಂರಕ್ಷಣೆ ಮಾಡುವುದರ ಜತೆಗೆ ರಾಷ್ಟ್ರದಲ್ಲಿ ಉತ್ತಮ ಪ್ರವಾಸಿ ತಾಣವನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಮಾತನಾಡಿ, ‘ಪುರಾತನ ಕಾಲದ ಐತಿಹಾಸಿಕ ಹಿನ್ನೆಲೆಯಿರುವ ನಲ್ಲೂರು ಕೋಟೆಯಲ್ಲಿ ಇಂದಿಗೂ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುವ ಮೂಲಕ ರಾಜ್ಯದ ಗಮನ ಸೆಳೆಯಲಾಗುತ್ತಿದೆ. ದೀಪೋತ್ಸವ, ಜಾತ್ರಾ ಮಹೋತ್ಸವಗಳ ಜತೆಗೆ ವರ್ಷಕ್ಕೊಮ್ಮೆ ಅನ್ನಸಂತರ್ಪಣೆ ಮಾಡುವ ಮೂಲಕ ಇಲ್ಲಿನ ವೈವಿಧ್ಯಮಯವಾದ ಸಾಕ್ಷಿಗಳ ಕುರುಹುಗಳನ್ನು ಸಂರಕ್ಷಣೆ ಮಾಡಿಕೊಂಡು ಬರಲಾಗುತ್ತಿದೆ’ ಎಂದರು.

ಮಂಡಳಿಯ ಮೂಲಕ ಈ ಪುರಾತನ ತಾಣಗಳ ಅಭಿವೃದ್ಧಿಗೆ ಸ್ಥಳೀಯ ಶಾಸಕರು, ಸಂಸದರು, ಹಾಗೂ ಜನಪ್ರತಿನಿಧಿಗಳೆಲ್ಲರೂ ಕೈ ಜೋಡಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT