ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಪಿಂಚಣಿ ಜಾರಿಗೆ ಹೋರಾಟ

ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಭರವಸೆ
Last Updated 19 ಅಕ್ಟೋಬರ್ 2020, 3:13 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:‘ಖಾಸಗಿ ಶಾಲಾ ಶಿಕ್ಷಕರಿಗೆ ಕೋವಿಡ್ ವಿಶೇಷ ಪ್ಯಾಕೇಜ್ ಮತ್ತು ಆರೋಗ್ಯ ವಿಮೆ ಸೌಲಭ್ಯ, ಸರ್ಕಾರಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಹಳೆಯ ಪಿಂಚಣಿ ಯೋಜನೆ ಮರುಜಾರಿಗೊಳಿಸಲು ಪ್ರಥಮ ಆದ್ಯತೆ ಮೇರೆಗೆ ಹೋರಾಟ ನಡೆಸಲಾಗುವುದು’ ಎಂದು ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಭರವಸೆ ನೀಡಿದರು.

ದೊಡ್ಡಬಳ್ಳಾಪುರದಲ್ಲಿ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜಿನ ಶಿಕ್ಷಕರು ಮತ್ತು ಉಪನ್ಯಾಸಕರು, ಖಾಸಗಿ ಶಾಲಾ– ಕಾಲೇಜು ಆಡಳಿತ ಮಂಡಳಿಯ ಪದಾಧಿಕಾರಿಗಳೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಯಾವುದೇ ಪಕ್ಷದಲ್ಲಿದ್ದರೂ ಆ ಪಕ್ಷದ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿ ಅವರ ಜೊತೆಗೆ ಚರ್ಚಿಸಿ ಹೋರಾಟ ಮಾಡಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಹೆಚ್ಚುವರಿ ಶಿಕ್ಷಕರ ಸಮಸ್ಯೆ, ಖಾಸಗಿ ಶಾಲೆಗಳ ನವೀಕರಣ, ಖಾಸಗಿ ಶಾಲಾ– ಕಾಲೇಜು ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಪಿಎಫ್ ಸೌಲಭ್ಯ, ಬ್ಯಾಂಕ್‌ ಮೂಲಕ ವೇತನ, ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಶಿಕ್ಷಕರ ಮತ್ತು ಉಪನ್ಯಾಸಕರ ಪರವಾಗಿ ಹೋರಾಟ ಮಾಡಿದ್ದೇನೆ ಎಂದರು.

ಶಿಕ್ಷಕರು ಮತ್ತು ಉಪನ್ಯಾಸಕರು ಇನ್ನು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಲು ನಿರಂತರವಾಗಿ ಹೋರಾಟ ಮಾಡುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕರ ಸಂಘಟನೆಗಳ ಪರವಾಗಿ ನಿಂತು ಹೋರಾಟ ಮುಂದುವರಿಸುತ್ತೇನೆ ಎಂದು ಭರವಸೆ ನೀಡಿದರು.

ದೊಡ್ಡಬಳ್ಳಾಪುರ ತಾಲ್ಲೂಕು ಖಾಸಗಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎ. ಸುಬ್ರಮಣಿ ಮಾತನಾಡಿ, ಅನುದಾನರಹಿತ ಶಾಲಾ–ಕಾಲೇಜಿನ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಕೋವಿಡ್ ಪರಿಹಾರ ವಿಶೇಷ ಪ್ಯಾಕೇಜ್ ಜಾರಿಯಾಗಬೇಕಿದೆ ಎಂದು ಒತ್ತಾಯಿಸಿದರು.

ಸರ್ಕಾರಿ ಶಾಲಾ, ಕಾಲೇಜಿನ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ನೀಡುವಂತೆ ಖಾಸಗಿ ಶಾಲಾ ಶಿಕ್ಷಕರಿಗೂ ವೈದ್ಯಕೀಯ ಸೌಲಭ್ಯ ದೊರೆಯಬೇಕು. ಇದಕ್ಕಾಗಿ ಆರೋಗ್ಯ ವಿಮೆ ಜಾರಿಗೊಳಿಸಬೇಕಿದೆ. ಶಾಲಾ– ಕಾಲೇಜು ಪ್ರಾರಂಭ ಮತ್ತು ಶೈಕ್ಷಣಿಕ ಚಟುವಟಿಕೆ ಬಗ್ಗೆ ಸರ್ಕಾರ ಸೂಕ್ತ ಮಾರ್ಗಸೂಚಿ ಪ್ರಕಟಿಸಬೇಕಿದೆ. ಖಾಸಗಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕಿದೆ ಎಂದು
ಕೋರಿದರು.

ವಕೀಲ ರವಿ ಮಾವಿನಕುಂಟೆ ಮಾತನಾಡಿ, ‘ಪುಟ್ಟಣ್ಣ ಅವರಿಗೆ ಶಿಕ್ಷಕರು ಮತ್ತು ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಸ್ಪಷ್ಟ ಅರಿವಿದೆ’ ಎಂದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಟಿ.ಕೆ. ಪ್ರಕಾಶ್, ದೊಡ್ಡಬಳ್ಳಾಪುರ ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ರಮೇಶ್, ಖಜಾಂಚಿ ಶ್ರೀನಿವಾಸಮೂರ್ತಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನಕುಮಾರ್, ಉಪ ಪ್ರಾಂಶುಪಾಲ ಶ್ರೀನಿವಾಸರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT