ಮಂಗಳವಾರ, ಫೆಬ್ರವರಿ 18, 2020
26 °C
ಬಿಜೆ‍ಪಿ ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಪದಗ್ರಹಣ

‘ಸ್ಥಳೀಯವಾಗಿ ಗೆದ್ದು ಟಿಕೆಟ್ ಕೇಳಿ’ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಯ್ಕೆಗೊಂಡ ನಂತರ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೇಳಲು ಬನ್ನಿ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಆಶೋಕ್ ಮುಖಂಡರಿಗೆ ತಾಕೀತು ಮಾಡಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ನಡೆದ ತಾಲ್ಲೂಕು ನೂತನ ಅಧ್ಯಕ್ಷರ ಮತ್ತು ಪ್ರಧಾನ ಕಾರ್ಯದರ್ಶಿಗಳ ಪದಗ್ರಹಣ, ಬಿಜೆಪಿ ಹಿರಿಯ ಕಾರ್ಯಕರ್ತರಿಗೆ ಸನ್ಮಾನ ಮತ್ತು ವಿವಿಧ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಬೆಂಗಳೂರು ನಗರ ಮತ್ತು ಚಿಕ್ಕಬಳ್ಳಾಪುರ ಮಧ್ಯದಲ್ಲಿರುವ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ಬಿಜೆಪಿಗೆ ಗಟ್ಟಿ ತಳಪಾಯವಾಗಬೇಕು. ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ದೇವನಹಳ್ಳಿ ತಾಲ್ಲೂಕಿನಿಂದ ಮತಗಳು ಹರಿದು ಬಂದಿವೆ. ನಾಯಕರ ಮನೆಗಳಿಗೆ ಸುತ್ತಬಾರದು. ಸ್ಥಳೀಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ’ ಎಂದು ಹೇಳಿದರು.

‘ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಆಡಳಿತವಿದೆ. ವಿವಿಧ ನಿಗಮ ಮಂಡಳಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸರ್ಕಾರದ ವತಿಯಿಂದ ನಾಮ ನಿರ್ದೇಶನ ಮಾಡುವ ಉತ್ತಮ ಅವಕಾಶವಿದೆ. ಪಕ್ಷದಲ್ಲಿ ಸಂಘಟಿತರಾಗಿ ಕೆಲಸ ಮಾಡಬೇಕು. ಪಕ್ಷ ಮೊದಲು ನಂತರ ಹುದ್ದೆ. ನಮಗೆ ಸ್ಥಾನ ಅಷ್ಟು ಸುಲಭವಾಗಿ ದೊರಕಿಲ್ಲ. ಹದಿನೈದು ವರ್ಷ ಪೊಸ್ಟರ್, ಬ್ಯಾನರ್ ಕಟ್ಟಿದ್ದೇನೆ ಆರಂಭದಲ್ಲಿ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿ 15 ಮತಗಳಿಂದ ಸೋತಿದ್ದೆ. ಅದರೂ ಪಕ್ಷ ನಿಷ್ಠೆಯಿಂದ ಸಂಘಟಿಸಿದರ ಫಲವಾಗಿ ಸಚಿವ ಸ್ಥಾನ ಸಿಕ್ಕಿದೆ ಎಂಬುದನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ನಾಯಕರು ಮಾರ್ಗದರ್ಶನ ಮಾಡಬಾರದು. ವೈಯಕ್ತಿಕವಾಗಿ ಪಕ್ಷ ಕಟ್ಟಿ ಬೆಳೆಸುವತ್ತ ಗಮನ ಹರಿಸಬೇಕು. ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ಪರವಿರೋಧ ಚರ್ಚೆಗಳು, ಪ್ರತಿಭಟನೆಗಳು ನಡೆಯುತ್ತಿವೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಜಾಗೃತಿ ಅಭಿಯಾನ ನಡೆಸಿ ಪೌರತ್ವ ಕಾಯ್ದೆಯ ಅನುಕೂಲತೆ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಬೇಕು. ಈಗಿನಿಂದಲೇ ಮುಂಬರುವ ಚುನಾವಣೆಗೆ ತಯಾರಿ ನಡೆಸಿ, ಕಿತ್ತಾಡುವುದು ಬಿಜೆಪಿ ಪಕ್ಷದ ಸಿದ್ಧಾಂತವಲ್ಲ’ ಎಂದು ಕಿವಿಮಾತು ಹೇಳಿದರು.

ಬಿಜೆಪಿ ತಾಲ್ಲೂಕು ಘಟಕ ನೂತನ ಅಧ್ಯಕ್ಷ ಬೊಮ್ಮವಾರ ಸುನೀಲ್ ಮಾತನಾಡಿ, ‘ಹಲವು ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದ ಪರಿಣಾಮ ಪಕ್ಷ ಹುದ್ದೆಯನ್ನು ನೀಡಿದೆ. ಹುದ್ದೆಗೆ ಯಾವುದೇ ರೀತಿಯ ಚ್ಯುತಿ ತರದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಕ್ತಿ ಮೀರಿ ಪಕ್ಷವನ್ನು ಸಂಘಟಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಎಂ.ರವಿಕುಮಾರ್, ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷ ರಾಜ್ ಗೋಪಾಲ್, ಮುಖಂಡರಾದ ಚಂದ್ರಣ್ಣ, ನಾರಾಯಣಗೌಡ, ಎ.ವಿ.ನಾರಾಯಣಸ್ವಾಮಿ, ಗುರುಸ್ವಾಮಿ, ದೇ.ಸೂ ನಾಗರಾಜ್, ಬಿಜೆಪಿ ತಾಲ್ಲೂಕು ನೂತನ ಪ್ರಧಾನ ಕಾರ್ಯದರ್ಶಿಗಳಾದ ನಿಲೇರಿ ಮಂಜುನಾಥ್, ರವಿಕುಮಾರ್, ಹೈಕೋರ್ಟ್ ವಕೀಲ ಡಿ.ಸಿ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು