ಶುಕ್ರವಾರ, ಫೆಬ್ರವರಿ 26, 2021
20 °C
ಯುವಜನ ಸೇವಾ ಕ್ರೀಡಾ ಇಲಾಖೆಯಿಂದ ₹ 5ಕೋಟಿ ಅನುದಾನ ಬಿಡುಗಡೆ

ನೀಲನಕ್ಷೆ, ಕ್ರಿಯಾಯೋಜನೆ ಮಾಹಿತಿ ನೀಡಿ: ನಿಸರ್ಗ ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದೇವನಹಳ್ಳಿ: ಯುವಜನ ಸೇವಾ ಕ್ರೀಡಾ ಇಲಾಖೆ ವತಿಯಿಂದ ಬಿಡುಗಡೆಯಾಗಿರುವ ₹5 ಕೋಟಿ ಅನುದಾನ ವೆಚ್ಚ ಮಾಡಬಹುದಾದ ನೀಲನಕ್ಷೆ ಮತ್ತು ಕ್ರಿಯಾಯೋಜನೆ ಮಾಹಿತಿ ನೀಡಬೇಕೆಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಇರುವ ಕ್ರೀಡಾಂಗಣದ ಪೆವಲಿಯನ್ ಕಚೇರಿಯಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಕ್ರೀಡಾಂಗಣ ಅಭಿವೃದ್ಧಿಗೆ ಅನುದಾನ ನೀಡಿದ್ದರೂ ಅಧಿಕಾರಿಗಳು ಎಲ್ಲೋ ಕುಳಿತು ನೀಲನಕ್ಷೆ ಸಿದ್ಧಪಡಿಸಿದರೆ ಸಾಲದು. ಅಗತ್ಯವಿರುವ ಮೂಲ ಸೌಲಭ್ಯಗಳ ಬಗ್ಗೆ ಮೊದಲು ಆದ್ಯತೆ ನೀಡಬೇಕು ಎಂದರು.

ಯುವಜನ ಸೇವಾ ಕ್ರೀಡಾ ಇಲಾಖೆ ಉಪ ನಿರ್ದೇಶಕಿ ದೇವಿಕಾ ಮಾಹಿತಿ ನೀಡಿ, ಅನುದಾನದಲ್ಲಿ ಕ್ರೀಡಾಂಗಣದ ಸುತ್ತ ಗ್ಯಾಲರಿ, ಸಭಾಂಗಣ, ಕೊಳವೆ ಬಾವಿ ಕೊರೆಯಿಸಿ ಅಗತ್ಯ ನೀರಿನ ಸೌಲಭ್ಯ ಮತ್ತು ಈಜುಕೋಳ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಶಾಸಕರ ಗಮನಕ್ಕೆ ತಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಇಲ್ಲಿ ಈಜು ಕೊಳದ ಅವಶ್ಯ ಇಲ್ಲ. ಸ್ಟ್ಯಾಂಡರ್ಡ್ ಟ್ರ್ಯಾಕ್ ದುರಸ್ತಿಗೊಳಿಸಿ, ಹಾಕಿ ಅಂಕಣ ನಿರ್ಮಾಣ ಮಾಡಿದರೆ ಅಭ್ಯಂತರವಿಲ್ಲ. ಇಲ್ಲಿರುವ ವಿದ್ಯುತ್ ಕಂಬಗಳನ್ನು ಮೊದಲು ಸ್ಥಳಾಂತರಿಸಬೇಕು. ಸುತ್ತಲೂ ಉತ್ತಮ ತಳಿಯ ಹಣ್ಣಿನ ಸಸಿಗಳನ್ನು ಬೆಳೆಸಲು ಸಲಹೆ ನೀಡಿದರು.

ಸರ್ಕಾರಿ ಕಿರಿಯ ಕಾಲೇಜು ಆವರಣದಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ಯೋಜನಾ ಕೇಂದ್ರ ಕಟ್ಟಡದಲ್ಲಿರುವ ಶೌಚಾಲಯಕ್ಕೆ ನೀರಿನ ಕೊರತೆ ಇದೆ. ಪ್ರತಿನಿತ್ಯ ನೂರಾರು ಜನರು ವಾಯು ವಿಹಾರಕ್ಕೆ ಬರುತ್ತಾರೆ. ಅವರಿಗೆ ಅನುಕೂಲವಾಗಬೇಕು. 200ಮೀ.ಟ್ರ್ಯಾಕ್ ನಿರ್ಮಾಣ ಮಾಡಿ ಸ್ಥಳೀಯ ಕ್ರೀಡಾಪಟುಗಳು ಅಭ್ಯಾಸ ಮಾಡಲು ಹೆಚ್ಚಿನ ಅನುಕೂಲವಾಗುವಂತೆ ಖಾಸಗಿ ಕಂಪನಿಗಳಿಂದ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಕನಿಷ್ಠ ₹1 ಕೋಟಿ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದರು.

ಮುಖ್ಯಮಂತ್ರಿ ಬಜೆಟ್‌ನಲ್ಲಿ ಕ್ರೀಡಾಭಿವೃದ್ಧಿಗೆ ₹270 ಕೋಟಿ ಹಣ ಮೀಸಲಿಟ್ಟಿದ್ದಾರೆ. ಅನುದಾನ ಸದುಪಯೋಗವಾಗಬೇಕು. ಅಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಮಾತ್ರ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಪುರಸಭೆ ಮುಖ್ಯಾಧಿಕಾರಿ ಅಂಬಿಕಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನಬಸಪ್ಪ, ಎಪಿಎಂಸಿ ನಿರ್ದೇಶಕ ಕೆ.ವಿ. ಮಂಜುನಾಥ್. ಟಿಎಪಿಎಂಎಸ್‌ಸಿ  ನಿರ್ದೇಶಕ ಡೈರಿ ನಾಗೇಶ್, ಮುಖಂಡ ಪಿ.ಪಟಾಲಪ್ಪ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.