ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣ ಹೆಸರಿನ ದುರ್ಬಳಕೆ: ರಂಭಾಪುರಿ ಶ್ರೀ

ಈಶ್ವರ ಖಂಡ್ರೆ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ
Last Updated 2 ಅಕ್ಟೋಬರ್ 2018, 14:07 IST
ಅಕ್ಷರ ಗಾತ್ರ

ವಿಜಯಪುರ: ‘ಬಸವಣ್ಣನವರ ಹೆಸರು ಹೇಳಿಕೊಂಡು ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣ ಮಾಡಲಾಗುತ್ತಿದ್ದು, ಇಂತಹ ಪ್ರಯತ್ನಗಳು ಎಂದಿಗೂ ಸಾಗುವುದಿಲ್ಲ’ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಇಲ್ಲಿನ ಗಿರಿಜಾಶಂಕರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ‘ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಸಮಾರಂಭ’ದಲ್ಲಿ ಅವರು ಮಾತನಾಡಿದರು.

ವೀರಶೈವ ಲಿಂಗಾಯತರನ್ನು ಎರಡು ಧರ್ಮಗಳನ್ನಾಗಿ ಮಾಡಲು ಕೆಲವರು ಪ್ರಯತ್ನಿಸಿದ್ದಾರೆ. ಅಧಿಕಾರಕ್ಕಿಂತ ಧರ್ಮವೇ ಹೆಚ್ಚು, ಸಮುದಾಯದ ಹಿತವನ್ನು ಕಾಪಾಡುವುದೇ ಮುಖ್ಯವೆಂದು ಮುಂಚೂಣಿಗೆ ಬಂದಿದ್ದ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಈಶ್ವರ ಬಿ ಖಂಡ್ರೆ ಮುಂದೆ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲ ಅವಕಾಶಗಳಿವೆ ಎಂದು ಅವರು ಭವಿಷ್ಯ ನುಡಿದರು.

ಸರ್ವ ಜನಾಂಗದ ಶಾಂತಿಯ ತೋಟ ಈ ನಾಡು. ಧರ್ಮ ಹಲವು... ಆಚರಣೆಗಳು ಹಲವು. ಆದರೆ ಎಲ್ಲ ಧರ್ಮಗಳ ಗುರಿ ಮಾನವ ಕಲ್ಯಾಣ. ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ಪರಿಪಾಲನೆಯಿಂದ ಮನುಷ್ಯನಿಗೆ ಸುಖ ಶಾಂತಿ ಪ್ರಾಪ್ತವಾಗುತ್ತದೆ. ಸಕಲ ಜೀವಾತ್ಮರಿಗೆ ಸದಾ ಲೇಸನ್ನೇ ಬಯಸಿದ ವೀರಶೈವ ಧರ್ಮ ತತ್ವತ್ರಯಗಳಿಂದ ಕೂಡಿದೆ. ಧರ್ಮ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ಮಹತ್ಕಾರ್ಯ ಮಠಗಳಿಂದ ನಡೆಯುತ್ತಿದೆ. ಬಸವಾದಿ ಶಿವಶರಣರು ವೀರಶೈವ ಧರ್ಮದ ಎರಡು ಕಣ್ಣು. ಆಚಾರ್ಯರ ತತ್ತ್ವ ಸಿದ್ಧಾಂತಗಳು, ಶರಣರ ಸಾಮಾಜಿಕ ಚಿಂತನೆಗಳು ಬದುಕಿನ ಉನ್ನತಿಗೆ ದಾರಿದೀಪವಾಗಿವೆ ಎಂದು ನುಡಿದರು.

ಆರೋಗ್ಯಪೂರ್ಣ ಸಮಾಜ ನಿರ್ಮಾಣಗೊಳ್ಳಬೇಕಾದರೆ ಉತ್ತಮ ಕಾರ್ಯಗಳು ನಡೆಯಬೇಕು. ಮನುಷ್ಯನಲ್ಲಿ ಸದ್ಗುಣಗಳು ಬೆಳೆದು ಬಂದಾಗ ಮಾತ್ರ ಜನ ಹಿತ ಕಾರ್ಯಗಳು ನಡೆಯುತ್ತವೆ. ಸದ್ಗುಣ, ಸಚ್ಚಾರಿತ್ರ್ಯದಿಂದ ಧಾರ್ಮಿಕ ಮತ್ತು ಸಾಮಾಜಿಕ ಸತ್ಕಾರ್ಯಗಳು ನಡೆಯಲು ಸಾಧ್ಯವಾಗುತ್ತದೆ ಎಂದರು.

ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಈಶ್ವರ ಬಿ ಖಂಡ್ರೆ ಮಾತನಾಡಿ, ಯುವಜನರು ಸಂಘಟಿತರಾಗಬೇಕು. ಸಬಲ, ಸದೃಢ ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಖಾದಿ, ಖಾಕಿ -ಖಾವಿ ಪ್ರಾಮಾಣಿಕವಾಗಿ ಕಾರ್ಯ ಮಾಡಬೇಕು. ಆಗ ಎಲ್ಲೆಡೆ ಸಾಮರಸ್ಯ ಶಾಂತಿ ನೆಲೆಗೊಳ್ಳಲು ಸಾಧ್ಯವಾಗುತ್ತದೆ. ಧರ್ಮದ ರಕ್ಷಣೆಗಾಗಿ ಎಲ್ಲರೂ ಜಾಗೃತರಾಗಬೇಕು. ಸರ್ವಧರ್ಮಗಳು ಸಮನ್ವಯತೆಯಲ್ಲಿ ಬಾಳಬೇಕಾಗಿದೆ. ಗುರುಗಳ ಮಾರ್ಗದರ್ಶನ, ಸಿದ್ಧಾಂತಗಳನ್ನು ಆಧರಿಸಿ ನಡೆಯಬೇಕು ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಎಲ್ಲ ಸಮುದಾಯಗಳು ಮಾನವ ಧರ್ಮವನ್ನು ಕಾಪಾಡುವ ನಿಟ್ಟಿನಲ್ಲಿ ಶಾಂತಿ, ಸಾಮರಸ್ಯದಿಂದ ಬದುಕು ಕಟ್ಟಿಕೊಳ್ಳಬೇಕಾಗಿದೆ. ವರ್ಷಕ್ಕೊಮ್ಮೆ ಧರ್ಮ ಜಾಗೃತಿಗಾಗಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜನೆ ಮಾಡುವುದರಿಂದ ಜನರು ಜಾಗೃತರಾಗಿ ಸಹಭಾಳ್ವೆ ನಡೆಸಲು ಅನುಕೂಲವಾಗಲಿದೆ ಎಂದರು.

ಬೆಳಿಗ್ಗೆ 7 ಗಂಟೆಗೆ ಗಾಂಧಿಚೌಕದ ನಗರೇಶ್ವರಸ್ವಾಮಿ ದೇವಸ್ಥಾನ ಮತ್ತು ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಪೂರ್ಣ ಕುಂಭ ಕಳಶಗಳ, ವೀರಗಾಸೆ ಹಾಗೂ ಡೊಳ್ಳು ಕುಣಿತ, ಜನಪದ ಕಲಾತಂಡಗಳೊಂದಿಗೆ ರಾಜಬೀದಿಗಳಲ್ಲಿ ಕುಂಭಕಳಶಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಹಸಿರು ಬಳೆಗಳನ್ನು ತೊಟ್ಟು ಭಕ್ತಿಯಿಂದ ಪೂಜೆ ಸಲ್ಲಿಸಿದರು. ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಬಸವ ಕಲ್ಯಾಣ ಮಠದ ಮಹದೇವಸ್ವಾಮಿಜೀ, ಜ್ಯೋತಿ ಪ್ರಕಾಶ್ ಮಿರ್ಜಿ, ವೀರ ಶೈವ ಲಿಂಗಾಯತರ ಸಂಘದ ಅಧ್ಯಕ್ಷ ಎಸ್.ವಿ.ಬಸವರಾಜ್, ಎಂ.ಎಸ್.ರಮೇಶ್, ಬೀದರ್ ಶಾಸಕ ರಹೀಂ ಖಾನ್, ಜ್ಯೋತಿಪ್ರಕಾಶ್ ಮಿರ್ಜಿ, ಎಂ.ಸತೀಶ್ ಕುಮಾರ್, ಕೆ.ಪಿ.ಸಿ.ಸಿ.ಕಾರ್ಯದರ್ಶಿ ವಿ.ಮಂಜುನಾಥ್, ಎಸ್.ಭಾಸ್ಕರ್, ವಿಜಯ ಕುಮಾರ್, ಗಿರೀಶ್ ಆರಾಧ್ಯ, ಎಚ್.ಎಸ್.ರುದ್ರೇಶ್ ಮೂರ್ತಿ, ಪಿ.ಎಂ.ಕೊಟ್ರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT