ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ಯುತ್ ಮಾರ್ಗದ ಕೆಳಗೆ ಕಟ್ಟಡ ನಿರ್ಮಿಸುವಂತಿಲ್ಲ’

ಬೆಸ್ಕಾಂ ಕಚೇರಿ ಸಭಾಂಗಣದಲ್ಲಿ ಗ್ರಾಹಕರ ಸಂವಾದ ಕಾರ್ಯಕ್ರಮ
Last Updated 21 ಜುಲೈ 2019, 13:27 IST
ಅಕ್ಷರ ಗಾತ್ರ

ದೇವನಹಳ್ಳಿ: ಪ್ರಸ್ತುತ ಹಾದು ಹೋಗಿರುವ ವಿದ್ಯುತ್ ಮಾರ್ಗದ ಕೆಳಗೆ ಯಾವುದೇ ರೀತಿಯ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಬಸವಣ್ಣ ಗ್ರಾಹಕರಿಗೆ ತಿಳಿಸಿದರು.

ಇಲ್ಲಿನ ಬೆಸ್ಕಾಂ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಹಕರ ಸಂವಾದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಮರವೆ ಗ್ರಾಮದ ಗ್ರಾಹಕ ಕೆಂಪಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ನೀವು ಕಳೆದ ಹತ್ತು ವರ್ಷಗಳಿಂದ ವರ್ಷಕ್ಕೆರಡು ಬಾರಿಯಂತೆ ಬೆಸ್ಕಾಂ ಗೆ ವಿದ್ಯುತ್ ಮಾರ್ಗ ಸ್ಥಳಾಂತರಿಸಿ ಕೊಡುವಂತೆ ಮನವಿ ಮಾಡಿರುವಿರಿ. ವಿದ್ಯುತ್ ಕಂಬ ಶಿಥಿಲಗೊಂಡಿದೆ ಎಂದು ಹೇಳುತ್ತೀರಿ. ವಿದ್ಯುತ್ ಮಾರ್ಗದ ಕೆಳಗೆ ಮನೆ ಕಟ್ಟಲು ಪಂಚಾಯಿತಿಯವರು ಅನುಮತಿ ಹೇಗೆ ನೀಡಿದರು’ ಎಂದು ಪ್ರಶ್ನಿಸಿದರು.

‘ಬೆಸ್ಕಾಂ ಇಲಾಖೆ ವತಿಯಿಂದ ಮಾರ್ಗ ಸ್ಥಳಾಂತರಿಸಲು ತಗಲುವ ವೆಚ್ಚ ಗ್ರಾಹಕರೇ ಭರಿಸಬೇಕಾಗುತ್ತದೆ. ಅಂದಾಜುಪಟ್ಟಿ ಮಾಡಿ ಕಳುಹಿಸಿ ತ್ವರಿತವಾಗಿ ಸ್ಥಳಾಂತರ ಮಾಡಿಕೊಡಿ’ ಎಂದು ಇತರೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಹಕ ಭೈರೇಗೌಡ ಮಾತನಾಡಿ, ಕಾರಹಳ್ಳಿ ಕ್ರಾಸ್ ಸರ್ವೇ ನಂಬರ್ 59 ರಲ್ಲಿ ವಿದ್ಯುತ್ ಕಂಬ ಇದ್ದು ಹತ್ತಾರು ವರ್ಷಗಳಾಗಿದೆ. ಸ್ಥಳಾಂತರಕ್ಕೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಆದರೆ ಕಾರ್ಯಗತವಾಗಿಲ್ಲ ಎಂದು ಸಂವಾದದಲ್ಲಿ ಪ್ರಸ್ತಾಪಿಸಿದರು.

ಇದಕ್ಕೆ ಉತ್ತರಿಸಿದ ಬೆಸ್ಕಾಂ ಸಹಾಯಕ ಎಂಜಿನಿಯರ್ ಷಡಕ್ಷರಯ್ಯ, ‘ನೀವು ಸಹ ವೈಯಕ್ತಿಕ ವೆಚ್ಚ ಪಾವತಿಸಿ. ಆಗಸ್ಟ್ ಮೊದಲ ವಾರದಲ್ಲಿ ಕಂಬ ಪೂರ್ಣಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

ಗ್ರಾಹಕ ಪಿಳ್ಳರಾಜು ಮಾತನಾಡಿ, ಸ್ವಪ್ನ ಯಾರ್ಚರಿಸ್ ನಲ್ಲಿ ವಿದ್ಯುತ್ ಕಡಿತಗೊಳಿಸಿ ಒಂದು ವರ್ಷ ಕಳೆದಿದೆ, ಆರು ತಿಂಗಳ ಹಿಂದೆ ಬೆಸ್ಕಾಂಗೆ ಪಾವತಿಸಿರುವ ಠೇವಣಿ ಮೊತ್ತ ₹ 6 ಲಕ್ಷ ಮರಳಿ ನೀಡಿಲ್ಲ, ಯಾಕೆ ವಿಳಂಬ ಎಂಬುದು ಗೊತ್ತಿಲ್ಲ. ಒಂದು ದಿನ ತಡವಾಗಿ ವಿದ್ಯುತ್ ಹಣ ಪಾವತಿಸಿದರೆ ದಂಡ ಕಟ್ಟಬೇಕು’ ಎಂದರು.

ಇದಕ್ಕೆ ಸ್ಪಷ್ಟನೆ ನೀಡಿದ ಎಂಜಿನಿಯರ್ ಷಡಕ್ಷರಯ್ಯ, ‘₹ 6 ಲಕ್ಷ ಠೇವಣಿ ಮೊತ್ತಕ್ಕೆ ಶೇಕಡ ಒಂದರಷ್ಟು ಬಡ್ಡಿ ನಿಮ್ಮ ಖಾತೆಗೆ ಬರುತ್ತಿದೆ. ಇನ್ನು ಎರಡು ತಿಂಗಳಲ್ಲಿ ಠೇವಣಿ ಹಣ ಸಿಗಲಿದೆ. ವಿದ್ಯುತ್ ಬಿಲ್ಲುಗಳ ಮುದ್ರಣ ದೋಷ, ಯುನಿಟ್ ಗೆ ಇಂತಿಷ್ಟು ಏರಿಕೆ ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ. ಕೆ.ಇ.ಎಸ್ ನ್ಯಾಯಾಲಯದಲ್ಲಿ ಗ್ರಾಹಕರ ಅಭಿಪ್ರಾಯ ಪರಿಗಣಿಸಿಯೇ ಯುನಿಟ್ ಗೆ ಇಂತಿಷ್ಟು ಏರಿಕೆ ಮಾಡಲು ಶಿಫಾರಸು ಮಾಡಲಾಗುತ್ತದೆ’ ಎಂದು ಹೇಳಿದರು.

ಚಿಕ್ಕಸಣ್ಣೆ ಗ್ರಾಮದ ವೆಂಕಟೇಶ್ ಮಾತನಾಡಿ, ‘ಈ ಹಿಂದೆ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಮಾರ್ಗವನ್ನು ನಮ್ಮ ಜಮೀನಿನಲ್ಲಿರುವ ತೆಂಗಿನ ತೋಟದ ಮೂಲಕ ಸ್ಥಳಾಂತರಿಸಲಾಗಿದೆ. ತೆಂಗಿನ ಮರಗಳು ತಂತಿ ಸ್ಪರ್ಶದಿಂದ ಬೆಂಕಿಯಾಗಿ ಸುಡುತ್ತಿವೆ. ಯಾರು ಮಾಡಿದ್ದಾರೆ ಮತ್ತು ಮಾಡಿಸಿದ್ದಾರೆ, ನನಗೆ ನ್ಯಾಯ ಬೇಕು’ ಎಂದು ಮನವಿ ಮಾಡಿದರು.

ಸಂಬಂಧಿಸಿದ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಕರೆ ಮಾಡಿದ ಎಂಜಿನಿಯರ್ ಬಸವಣ್ಣ, ‘ಸ್ಪಷ್ಟ ಮಾಹಿತಿ ನೀಡುತ್ತಿಲ್ಲ, ತನಿಖೆ ನಡೆಸಿ ತಪ್ಪಿತಸ್ಥರನ್ನು ಅಮಾನತು ಮಾಡಿ’ ಎಂದು ಸ್ಥಳದಲ್ಲಿದ್ದ ಅಧಿಕಾರಿಗೆ ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT