ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿ, ಬಾಣಂತಿಗೆ ‘ಮಾತೃವಂದನೆ’ ನೆರವು

Last Updated 11 ಜೂನ್ 2018, 10:18 IST
ಅಕ್ಷರ ಗಾತ್ರ

ಮುಂಡಗೋಡ: ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯ ಸುಧಾರಣೆ ಹಾಗೂ ರಕ್ತಹೀನತೆ ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಲ್ಲಿ ತಾಲ್ಲೂಕಿನ ಶೇ 90ರಷ್ಟು ಫಲಾನುಭವಿಗಳು ನೆರವು ಪಡೆದಿದ್ದಾರೆ.

ಪ್ರಸವ ಹಾಗೂ ಗರ್ಭಾವಸ್ಥೆಯಲ್ಲಿ ತಾಯಿ ಹಾಗೂ ಮಗುವಿನ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುವುದು. ಪೌಷ್ಟಿಕ ಆಹಾರ ಒದಗಿಸಲು ಪ್ರೋತ್ಸಾಹಧನದ ರೂಪದಲ್ಲಿ ನೆರವು ಒದಗಿಸಲಾಗುವುದು.

‘2017ರ ಜನವರಿ 1ರ ನಂತರ ಮೊದಲ ಬಾರಿ ಗರ್ಭಿಣಿಯಾದವರು ಯೋಜನೆ ವ್ಯಾಪ್ತಿಗೆ ಬರುತ್ತಾರೆ. ಯೋಜನೆಯಡಿ ಒಟ್ಟು ಮೂರು ಕಂತುಗಳಲ್ಲಿ ₹5 ಸಾವಿರ ಪ್ರೋತ್ಸಾಹಧನವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ಗರ್ಭಿಣಿಯರು ಅಂಗನವಾಡಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡ ನಂತರ ಯೋಜನೆಯ ಮೊದಲನೇ ಕಂತಿನ ಹಣ ಖಾತೆಗೆ ಜಮೆಯಾಗಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಎಚ್‌.ಬಿ.ಬೈಲಪತ್ತಾರ್‌ ಹೇಳಿದರು.

ತಾಲ್ಲೂಕಿನಲ್ಲಿ ಈವರೆಗೆ ಒಟ್ಟು 725 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, 691 ಮಹಿಳೆಯರು ಮೊದಲ ಹಾಗೂ ಎರಡನೇ ಕಂತಿನ ಹಣ ಪಡೆದಿದ್ದಾರೆ. ಉಳಿದ ಫಲಾನುಭವಿಗಳ ಹಣ ಕೆಲವೇ ದಿನಗಳಲ್ಲಿ ಮಂಜೂರಾಗಲಿದೆ. ತಾಯಿ ಕಾರ್ಡ್‌ ಜತೆಗೆ ಅಂಗನವಾಡಿ ಕೇಂದ್ರದಲ್ಲಿ ನೋಂದಣಿಯಾದ ಮೂರೇ ದಿನದಲ್ಲಿ ಮೊದಲ ಕಂತಿನ ₹1ಸಾವಿರ ಫಲಾನುಭವಿ ಖಾತೆಗೆ ಜಮೆಯಾಗಲಿದೆ ಎಂದು ಅವರು ವಿವರಿಸಿದರು.

ಗರ್ಭಿಣಿಯಾಗಿ ಆರು ತಿಂಗಳ ನಂತರ ಎರಡನೇ ಕಂತಿನ ಎರಡು ಸಾವಿರ ಹಾಗೂ ಮಗು ಜನನವಾದ ನಂತರ ಚುಚ್ಚುಮದ್ದು ಹಾಕಿಸುವ ಸಮಯದಲ್ಲಿ ಮೂರನೇ ಕಂತಿನ ₹2 ಸಾವಿರ ಹಣ ಫಲಾನುಭವಿ ಖಾತೆಗೆ ಜಮೆಯಾಗಲಿದೆ. ಜೊತೆಗೆ ರಾಜ್ಯ ಸರ್ಕಾರದ ಜನನಿ ಸುರಕ್ಷಾ ಯೋಜನೆಯಡಿ ₹1ಸಾವಿರ ಫಲಾನುಭವಿ ಪಡೆಯಬಹುದು.

‘ಮಾತೃವಂದನಾ ಯೋಜನೆಯ ಕುರಿತು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ತಾಯಂದಿರು, ಬಾಣಂತಿಯರ ಸಭೆ ನಡೆಸಬೇಕು. ಯೋಜನೆಯ ಬಗ್ಗೆ ಮಾಹಿತಿ ನೀಡಿ, ಫಲಾನುಭವಿಗಳಿದ್ದರೆ ಅವರ ಸಂಪೂರ್ಣ ಮಾಹಿತಿಯೊಂದಿಗೆ ದಾಖಲಾತಿಗಳನ್ನು ಕಚೇರಿಗೆ ಕಳುಹಿಸಬೇಕು. ಆನ್‌ಲೈನ್‌ನಲ್ಲಿ ಸೂಕ್ತ ದಾಖಲೆಗಳನ್ನು ಕಳುಹಿಸಿದ ಮೂರು ದಿನಗಳಲ್ಲಿ ಯೋಜನೆಯ ಮೊದಲ ಕಂತಿನ ಹಣ ಮಂಜೂರಾಗುತ್ತದೆ’ ಎಂದು ಎಚ್‌.ಬಿ.ಬೈಲಪತ್ತಾರ್‌ ಹೇಳಿದರು.

–ಶಾಂತೇಶ ಬೆನಕನಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT