ಮಂಗಳವಾರ, ಮಾರ್ಚ್ 9, 2021
31 °C
ಜುಲೈ 30, 31ರಂದು ಸಿಇಟಿ ಪರೀಕ್ಷೆ್

ಸಿಇಟಿ | ದೊಡ್ಡಬಳ್ಳಾಪುರ: ಹೆಚ್ಚುವರಿ ಕೇಂದ್ರಗಳಿಂದ ಅನುಕೂಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಗ್ರಾಮಾಂತರ ಜಿಲ್ಲೆ ಆರು ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಜುಲೈ 30 ಮತ್ತು 31ರಂದು ನಡೆಯುವ ಸಾಮಾನ್ಯ ಪರೀಕ್ಷೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ದೊಡ್ಡಬಳ್ಳಾಪುರದಲ್ಲಿ ಮಾತ್ರ ಸಿಇಟಿ ಪರೀಕ್ಷಾ ಕೇಂದ್ರ ಇತ್ತು. ಆದರೆ, ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಾರಂಭಿಸುತ್ತಿದೆ. ಜಿಲ್ಲೆಯ ನೆಲಮಂಗಲ ಮತ್ತು ಹೊಸಕೋಟೆಗೆ ಹೆಚ್ಚುವರಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ದೊರಕಿದೆ.

ಜಿಲ್ಲೆಯ ಆರು ಪರೀಕ್ಷಾ ಕೇಂದ್ರಗಳಾದ ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಪದವಿಪೂರ್ವ ಕಾಲೇಜು 648 ವಿದ್ಯಾರ್ಥಿಗಳು, ಶ್ರೀ ದೇವರಾಜ ಅರಸು ಪದವಿ ಪೂರ್ವ ಕಾಲೇಜಿನಲ್ಲಿ 288 ವಿದ್ಯಾರ್ಥಿಗಳು, ಸರ್ಕಾರಿ ಪದವಿಪೂರ್ವ ಕಾಲೇಜು
216 ವಿದ್ಯಾರ್ಥಿಗಳು, ಹೊಸಕೋಟೆ ಸರ್ಕಾರಿ ಬಾಲಕಿಯ ಪದವಿ ಪೂರ್ವ ಕಾಲೇಜು 264 ವಿದ್ಯಾರ್ಥಿಗಳು,
ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು 264 ವಿದ್ಯಾರ್ಥಿಗಳು ಹಾಗೂ ನೆಲಮಂಗಲದ ಬಸವೇಶ್ವರ ಬಾಲಕಿಯ ಪದವಿಪೂರ್ವ ಕಾಲೇಜು 408 ವಿದ್ಯಾರ್ಥಿಗಳು ಸೇರಿ ಒಟ್ಟು 2,088 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ಎಂ.ರಾಮಕೃಷ್ಣ ತಿಳಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಪ್ರತಿ ಸಿಇಟಿ ಪರೀಕ್ಷಾ ಕೇಂದ್ರದಲ್ಲೂ ವಿದ್ಯಾರ್ಥಿಗಳಿಗೆ ಶುಚಿತ್ವ ಸೇರಿದಂತೆ ಹಲವು ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ಪರೀಕ್ಷಾ ಕೇಂದ್ರ ಮುಂಭಾಗದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸುತ್ತಿದೆ. ವಿದ್ಯಾರ್ಥಿಗಳಿಗೆ ಸ್ಯಾನಿಟೈಜರ್ ವ್ಯವಸ್ಥೆ ಇರಲಿದೆ.

ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸಿ ಬರುವಂತೆ ಸೂಚಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ವೈದ್ಯಕೀಯ ನೆರವಿನ ವ್ಯವಸ್ಥೆ ಇದೆ. ಆರೋಗ್ಯ ಸಹಾಯಕರು ಪರೀಕ್ಷೆ ಪ್ರಾರಂಭದಿಂದ ಕೊನೆತನಕ ಅಗತ್ಯ ಔಷಧ
ಮತ್ತು ಪ್ರಥಮ ಚಿಕಿತ್ಸೆ ಸಲಕರಣೆಯೊಂದಿಗೆ ಕೇಂದ್ರದ ಆವರಣದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ತಹಶೀಲ್ದಾರ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಾಲ್ಲೂಕು
ಮಟ್ಟದ ಸಮಿತಿ ಯೊಂದನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮೊದಲ ದಿನ ಬೆಳಿಗ್ಗೆ 10.30ಕ್ಕೆ ಜೀವಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಅರಂಭಕ್ಕೆ ಕನಿಷ್ಠ 1.30 ತಾಸು ಮುಂಚಿತವಾಗಿ ಹಾಜರಿರಬೇಕಾಗಿದೆ ಎಂದು ಅವರು ತಿಳಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು