ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲು ಎದುರಿಸಲು ಸಾಹಸ ಕ್ರೀಡೆ ಸಹಕಾರಿ

ದೊಡ್ಡಬಳ್ಳಾಪುರದ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ಜಾಂಬೋರೇಟ್
Last Updated 28 ಡಿಸೆಂಬರ್ 2019, 14:31 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸ್ಪರ್ಧಾತ್ಮಕ ಮತ್ತು ಸಹಕಾರ ಮನೋಭಾವನೆ ಮೂಡಿಸುವಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಮಕ್ಕಳಿಗೆ ಸಾಹಸ ಕ್ರೀಡೆಗಳ ಅಭಿರುಚಿಯಿದ್ದರೆ ಬದುಕಿನ ಸವಾಲುಗಳನ್ನು ಎದುರಿಸುವ ಚೈತನ್ಯ ದೊರೆಯುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ದೊಡ್ಡಬಳ್ಳಾಪುರದ ಡಾ.ಆನಿಬೆಸೆಂಟ್ ಸ್ಕೌಟ್ಸ್‌ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ 28ನೇ ಜಾಂಬೋರೇಟ್ ಕಾರ್ಯಕ್ರಮದ ಅಂಗವಾಗಿ ಶನಿವಾರ ಆಯೋಜಿಸಲಾಗಿದ್ದ ಚಾರಣ, ಸಾಹಸಮಯ, ಸಮುದಾಯ ಸೇವೆ, ಸರ್ವ-ಧರ್ಮಗಳ ಸಮನ್ವಯತೆ, ಗ್ಲೋಬಲ್ ಡೆವಲಪ್ಮೆಂಟ್ ವಿಲೇಜ್ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಜನರಲ್ಲಿ ಇತ್ತೀಚಿನ ದಿನಗಳಲ್ಲಿ ಸಂಕುಚಿತ ಮನೋಭಾವನೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ತರಬೇತಿ ಮತ್ತು ಶಿಬಿರಕ್ಕೆಂದು ಒಂದೆಡೆ ಸೇರಿಸುವ ಮೂಲಕ ಸ್ಕೌಟ್ಸ್‌ ಮತ್ತು ಗೈಡ್ಸ್ ಸಂಸ್ಥೆ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮತ್ತು ಸಹಕಾರ ಮನೋಭಾವನೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.

ಇಂತಹ ಶಿಬಿರದಿಂದಾಗಿ ಶಿಬಿರಾರ್ಥಿಗಳು ಸ್ಪರ್ಧಾ ಮನೋಭಾವ, ಹೊಸತನ, ವಿಶೇಷ ಆಸಕ್ತಿ ರೂಪಿಸಿಕೊಳ್ಳುವಿಕೆ, ಸಮಯಪಾಲನೆ, ಶಿಸ್ತು, ವ್ಯಕ್ತಿತ್ವ ವಿಕಸನದಂತಹ ಲಾಭಗಳನ್ನು ಪಡೆಯಬಹುದಾಗಿದೆ ಎಂದರು. ಇಂತಹ ಸಕಾರಾತ್ಮಕ ಮನೋಭಾವನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ದೇಶ ಸೇವೆಗೆ ಸನ್ನದ್ಧರಾಗುವಂತೆ ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ಅರಣ್ಯೀಕರಣಕ್ಕಾಗಿ ಬೀಜದ ಉಂಡೆಗಳನ್ನು ತಯಾರಿಸಿ ಗಿಡ-ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡಲು ಎಲೆ ಮರೆ ಕಾಯಿಯಂತೆ ಶ್ರಮಿಸುತ್ತಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯವೈಖರಿ ಪ್ರಶಂಸನೀಯವೆಂದು ಸಂತಸ ವ್ಯಕ್ತಪಡಿಸಿದರು.

ಮಾಜಿ ಸಚಿವೆ ಲೀಲಾದೇವಿ.ಆರ್.ಪ್ರಸಾದ್ ಮಾತನಾಡಿ, ವ್ಯಕ್ತಿತ್ವ ವಿಕಸನದ ಜೊತೆಗೆ, ಪ್ರತಿಭೆಗಳನ್ನು ಅನಾವರಣಗೊಳಿಸಲು ಸ್ಕೌಟ್ಸ್‌ ಮತ್ತು ಗೈಡ್ಸ್ ಸಂಸ್ಥೆ ಶಿಬಿರಗಳು ಸಹಕಾರಿಯಾಗುವುದರೊಂದಿಗೆ ಮಕ್ಕಳಿಗೆ ಮೌಲ್ಯಯುತ ಜೀವನ ರೂಪಿಸಿಕೊಳ್ಳಲು ತಳಪಾಯವಾಗಿದೆ ಎಂದರು.

ಆಕಾಶವಾಣಿ ನಿಲಯ ನಿರ್ದೇಶಕಿ ನಿರ್ಮಲಾ ಎಲಿಗಾರ್ ಮಾತನಾಡಿ, ಮಕ್ಕಳಲ್ಲಿ ಸಮಗ್ರ ಅಭಿವೃದ್ಧಿ ಹಾಗೂ ಚೇತನಕ್ಕೆ ಸ್ಕೌಟ್ಸ್‌ ಮತ್ತು ಗೈಡ್ಸ್ ಸಂಸ್ಥೆ ಹೊಸ ರೂಪವನ್ನು ನೀಡಿದೆ. ಇಂತಹ ಶಿಬಿರಗಳು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಸ್ಕೌಟ್ಸ್‌ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ಸ್ಕೌಟ್ಸ್‌ ಮತ್ತು ಗೈಡ್ಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಸ್ತು ಪ್ರದರ್ಶನ: ಗಾಂಧೀಜಿ 150ನೇ ಜನ್ಮದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರಿಗಾಗಿ ಗಾಂಧೀಜಿ ಅವರ ಕುರಿತಾದ ವಿಶೇಷ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಸರ್ಕಾರದ ಅಭಿವೃದ್ಧಿ ಪರ ಯೋಜನೆಗಳ ಮಾಹಿತಿಯುಳ್ಳ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ವಿವಿಧ ಮಳಿಗೆಗಳು, ಲಲಿತಕಲೆ, ವಿಜ್ಞಾನ ತಂತ್ರಜ್ಞಾನ, ಕೃಷಿಗೆ ಸಂಬಂಧಿಸಿದ ಮಳಿಗೆಗಳನ್ನು ತೆರೆಯಲಾಗಿದೆ.

ಡಾ.ಆನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹಲವು ಅಭಿವೃದ್ಧಿ ಯೋಜನೆಗಳ ಮಾಹಿತಿ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಉದ್ಘಾಟಿಸಿದರು. ಪ್ರದರ್ಶನದಿಂದ ಜ್ಞಾನ ಮತ್ತು ಮಾಹಿತಿ ಪಡೆಯುವ ಮೂಲಕ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ಸಾಹಸ ಪ್ರದರ್ಶನ: ಹಗ್ಗದ ಟ್ರ್ಯಾಲಿಯಲ್ಲಿ ಜಾರುವುದು, ಹಗ್ಗ ಏರುವುದು, ಹಗ್ಗದ ಮೇಲೆ ನಡೆದಾಡುವುದು, ಟೈರ್ ಸುರಂಗದಲ್ಲಿ ನುಸುಳುವುದು ಮೊದಲಾಗಿ 30 ವಿವಿಧ ಬಗೆಯ ಸಾಹಸ ಕ್ರೀಡೆಗಳನ್ನು ಶಿಬಿರಾರ್ಥಿಗಳು ಆಡಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT