ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನರಾಯಸ್ವಾಮಿ ಬೆಟ್ಟಕ್ಕೆ ಹರಿದುಬಂದ ಜನ

ಕಿರು ಜಲಪಾತಗಳಲ್ಲಿ ಸ್ನಾನ l ನಿಯಂತ್ರಣ ಮಾಡದ ಅರಣ್ಯ ಇಲಾಖೆ ಸಿಬ್ಬಂದಿ ಕ್ರಮಕ್ಕೆ ಆಕ್ಷೇಪ
Last Updated 13 ಅಕ್ಟೋಬರ್ 2019, 20:07 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ನಂದಿಬೆಟ್ಟ ಸಾಲಿನಲ್ಲೇ ಕಿರು ಜಲಪಾತಗಳಿರುವ ಚನ್ನರಾಯಸ್ವಾಮಿ ಬೆಟ್ಟದಲ್ಲಿ ನೀರಿನ ಝರಿಗಳಲ್ಲಿ ಸ್ನಾನ ಮಾಡಲು ಭಾನುವಾರ ದೊಡ್ಡಬಳ್ಳಾಪುರ ನಗರ ಸೇರಿದಂತೆ ಬೆಂಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಯಿಂದ ನೂರಾರು ಸಂಖ್ಯೆಯಲ್ಲಿ ಜನ ಬೆಟ್ಟಕ್ಕೆ
ಲಗ್ಗೆಯಿಟ್ಟಿದ್ದರು.

ಬೆಟ್ಟದ ತಪ್ಪಲಿನಲ್ಲಿ ನೂರಾರು ಸಂಖ್ಯೆಯಲ್ಲಿ ಬೈಕ್‌, ಕಾರುಗಳನ್ನು ಸಾಲಾಗಿ ನಿಲ್ಲಿಸಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬೆಟ್ಟಕ್ಕೆ ಹತ್ತಲು ಯಾವುದೇ ಮೆಟ್ಟಿಲುಗಳ ಸೌಲಭ್ಯ ಇಲ್ಲದಿದ್ದರೂ ಕಾಲು ದಾರಿಯಲ್ಲಿಯೇ ನಡೆದು ಬೆಟ್ಟದಲ್ಲಿನ ಕಿರು ಜಲಪಾತಗಳಲ್ಲಿ ಸ್ನಾನ ಮಾಡಲು ನೂರಾರು ಜನರು ಸಾಲುಗಟ್ಟಿ ಹೋಗುತ್ತಿದ್ದರು.

ಚನ್ನರಾಯಸ್ವಾಮಿ ಬೆಟ್ಟದಲ್ಲಿ ಹಲವಾರು ರೀತಿಯ ಔಷಧೀಯ ಸಸ್ಯ ಸಂಪತ್ತು ಹಾಗೂ ಕಿರು ಜಲಪಾತ ಇರು
ವುದರಿಂದ ಸಾರ್ವಜನಿಕರ ಅತಿಕ್ರಮ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ, ಈ ನಿಯಮ ಕಳೆದ ಮೂರು ವಾರಗಳಿಂದ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಕೆಲವರಿಂದ ಹಣ ಪಡೆದು, ಜೋರು ಮಾಡುವವರಿಂದ ಹಣ ಪಡೆಯದೇ ಬೆಟ್ಟಕ್ಕೆ ಪ್ರವೇಶ ನೀಡುತ್ತಿದ್ದಾರೆ ಎಂದು ಚಿಕ್ಕರಾಯಪ್ಪನಹಳ್ಳಿ ಗ್ರಾಮದ ಸಾರ್ವಜನಿಕರು ಆರೋಪಿಸಿದ್ದಾರೆ.

ಎಲ್ಲಿ ನೋಡಿದರು ಪ್ಲಾಸ್ಟಿಕ್‌, ಮದ್ಯದ ಬಾಟಲಿ
ಬೆಟ್ಟಕ್ಕೆ ಪ್ಲಾಸ್ಟಿಕ್‌ ವಸ್ತು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಆದರೆ ಇಲ್ಲಿನ ಸುಂದರವಾದ ಪರಿಸರದಲ್ಲಿ ಕುಳಿತು ತಿಂಡಿ, ತಿನಿಸುಗಳನ್ನು ತಿನ್ನಲು ಹಾಗೂ ಪಾರ್ಟಿಗಳನ್ನು ಮಾಡಲು ಮದ್ಯದ ಬಾಟಲಿಗಳನ್ನು ಕೊಂಡೊಯ್ಯಲಾಗುತ್ತಿದೆ. ಇದರಿಂದಾಗಿ ಜಲಾಪಾತದ ಸುತ್ತಮುತ್ತಲಿನ ಪ್ರದೇಶ ಪ್ಲಾಸ್ಟಿಕ್ ಕವರ್‌ಗಳಿಂದ ತುಂಬಿ ಹೋಗಿದೆ.

ಪಾರ್ಟಿಗಳನ್ನು ನಡೆಸಿದ ನಂತರ ಮದ್ಯದ ಗಾಜಿನ ಬಾಟಲಿಗಳನ್ನು ಒಡೆದು ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ. ಇದರಿಂದ ಪರಿಸರ ಹಾಳಾಗುತ್ತಿರುವುದಲ್ಲದೆ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಹೋಗುವ ಜನರಿಗೆ ಮತ್ತು ಬೆಟ್ಟದಲ್ಲಿ ಸಂಚರಿಸುವ ಪ್ರಾಣಿಗಳ ಕಾಲುಗಳಿಗೆ ಗಾಜಿನ ಚೂರುಗಳು ಚುಚ್ಚಿ ಗಾಯಗಾಳಾಗುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಕಾವಲು ಸಿಬ್ಬಂದಿ ಯಾವುದೇ ಎಚ್ಚರ ವಹಿಸುತ್ತಿಲ್ಲ ಎಂದು ಪರಿಸರವಾದಿಗಳು ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.

ಬೆಟ್ಟದಲ್ಲಿ ಪ್ರಾಣಾಪಾಯಗಳು ಸಂಭವಿಸುವ ಮುನ್ನ ಪೊಲೀಸರು ಸಹ ಎಚ್ಚರ ವಹಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT