ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದೃಢ ಸಮಾಜಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ: ರವಿ.ಡಿ.ಚನ್ನಣ್ಣನವರ್

ಬಾಲ್ಯವಿವಾಹ ನಿಷೇಧ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ
Last Updated 1 ನವೆಂಬರ್ 2019, 15:27 IST
ಅಕ್ಷರ ಗಾತ್ರ

ಸೂಲಿಬೆಲೆ: ಸದೃಢ ಸಮಾಜವನ್ನು ನಿರ್ಮಾಣ ಮಾಡಬೇಕಾದರೆ ಪೊಲೀಸ್ ಇಲಾಖೆ ಜತೆ ಸಾರ್ವಜನಿಕರು ಕೈಜೋಡಿಸುವುದು ಬಹಳ ಮುಖ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಹೇಳಿದರು.

ಸೂಲಿಬೆಲೆ ವಿವೇಕಾನಂದ ಪ್ರೌಢಶಾಲೆ ಆವರಣದಲ್ಲಿ ಗುರುವಾರ ನಡೆದ ಬಾಲ್ಯವಿವಾಹ ನಿಷೇಧ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಚೈಲ್ಡ್ ರೈಟ್ಸ್ ಸರ್ವೆ ಪ್ರಕಾರ ರಾಜ್ಯದಲ್ಲಿ ಸುಮಾರು 3,117 ಬಾಲ್ಯವಿವಾಹ ಪ್ರಕರಣಗಳು ಹಾಗೂ ವಿಶ್ವದಲ್ಲಿ ಸುಮಾರು 11.5 ಕೋಟಿ ಪ್ರಕರಣಗಳು ಇವೆ ಎಂಬ ಅಂಶ ವಿಶ್ವ ಸಂಸ್ಥೆಯ ವರದಿ ಹೇಳುತ್ತಿದೆ. ಬಾಲ್ಯವಿವಾಹ ತೆಡೆಯುವ ವಿಚಾರದಲ್ಲಿ ಬ್ರಿಟಿಷ್ ಸರ್ಕಾರ 1929 ರಲ್ಲಿಯೇ ಕಾಯ್ದೆಯನ್ನು ಭಾರತ ದೇಶದಲ್ಲಿ ಜಾರಿಗೆ ತಂದಿತ್ತು. ಅಂದಿನಿಂದ ಇಂದಿನವರೆಗೆ ಸತತ ಹೋರಾಟಗಳ ಫಲವಾಗಿ 2007 ರ ನವೆಂಬರ್ 1 ರಂದು ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೆ ತರುವಲ್ಲಿ ಸರ್ಕಾರ ಸಫಲವಾಗಿ, 2017 ರಲ್ಲಿ ಕಾಯ್ದೆ ತಿದ್ದುಪಡಿಯಾಗಿ ಬಾಲ್ಯವಿವಾಹಕ್ಕೆ ನೇರ ಅಥವಾ ಪರೋಕ್ಷವಾಗಿ ಸಹಾಯ ಮಾಡುವುದು, ಪಾಲ್ಗೊಳ್ಳುವುದು ಅಪರಾಧವಾಗಿದೆ. ಇದಕ್ಕೆ 1 ರಿಂದ 2 ವರ್ಷಗಳ ಕಾರಾಗೃಹ ಶಿಕ್ಷೆ ಕಡ್ಡಾಯ ಎಂದು ಅವರು ಎಚ್ಚರಿಸಿದರು.

ಚೈಲ್ಡ್ ಟ್ರಸ್ಟ್ ನ ಕಾರ್ಯಕಾರಿ ನಿರ್ದೇಶಕ ವಾಸುದೇವ್ ಶರ್ಮಾ ಮಾತನಾಡಿ, ಬಾಲ್ಯ ವಿವಾಹವು ಕೇವಲ ಒಂದು ಕುಟುಂಬಕ್ಕೆ ಸಂಬಂದಧಿಸಿದ ಸಮಸ್ಯೆ ಅಲ್ಲ. ಇಡೀ ದೇಶದ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಗಂಬೀರ ಸಮಸ್ಯೆಯಾಗಿದೆ. ಬಾಲ್ಯವಿವಾಹದ ಪಿಡುಗು ಮುಖ್ಯವಾಗಿ ಹೆಣ್ಣು ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದರ ಜತೆಗೆ ಅವರ ಶಿಕ್ಷಣವನ್ನು ಕಸಿದುಕೊಂಡು ಜೀನವಪೂರ್ತಿ ಗಂಡನ ಅಧೀನದಲ್ಲಿ ಬದುಕುವ ಅಬಲೆಯರನ್ನಾಗಿಸುತ್ತದೆ ಎಂದರು.

ಬಾಲ್ಯವಿವಾಹದಿಂದ ಶಿಶು ಮರಣ, ಹೆರಿಗೆ ಸಮಯದಲ್ಲಿ ತಾಯಂದಿರ ಮರಣ ಹಾಗೂ ಅಪೌಷ್ಟಿಕತೆಯಿಂದ ಹುಟ್ಟುವ ಮಕ್ಕಳ ಹುಟ್ಟಿಗೆ ಕಾರಣವಾಗುತ್ತದೆ. ಅಪೌಷ್ಟಿಕತೆಯಿಂದ ಹುಟ್ಟುವ ಪ್ರತಿ ಸಾವಿರ ಮಕ್ಕಳಲ್ಲಿ 25 ರಿಂದ 125 ರಷ್ಟು ಮಕ್ಕಳು ಮರಣ ಹೊಂದುತ್ತಿದ್ದಾರೆ. ಇದು ಕೇವಲ ಕುಟುಂಬದ ದುರಂತವಾಗಿರದೇ ಸಮಾಜದ, ದೇಶದ ದುರಂತವಾಗಿರುತ್ತದೆ. ಪ್ರತಿಯೊಬ್ಬ ದೇಶದ ಪ್ರಜೆಯೂ ಆ ದೇಶದ ಸಂಪನ್ಮೂಲ ಆಗಿರುವುದರಿಂದ ದೇಶ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಪ್ರಸಾದ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಮು ಜೋಗಿಹಳ್ಳಿ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ, ಚೈಲ್ಡ್ ರೈಟ್ಸ್ ವೆಂಕಟೇಶ್.ಟಿ, ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಎಂ.ಆರ್.ಉಮೇಶ್, ವಿಎಚ್ಎಸ್ ಶಾಲೆ ಮುಖ್ಯ ಶಿಕ್ಷಕ ಕೆ.ಸುರೇಶ್ ಭಾಗವಹಿಸಿದ್ದರು.

ಚೈಲ್ಡ್ ರೈಟ್ಸ್ ಹಾಗೂ ಪಟ್ಟಣದ ಶಾಲೆ, ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT