ಎಲ್ಲದರಲ್ಲೂ ವಿವಾದ ಹುಡುಕುವ ಕ್ರಿಮಿಗಳು: ಲಕ್ಷ್ಮಣ ಕೊಡಸೆ

7
ವಿಜಯಪುರದಲ್ಲಿ ಬ್ರಹ್ಮಶ್ರೀನಾರಾಯಣಗುರು ಜಯಂತಿ, ಪ್ರಶಸ್ತಿ ಸಮಾರಂಭ

ಎಲ್ಲದರಲ್ಲೂ ವಿವಾದ ಹುಡುಕುವ ಕ್ರಿಮಿಗಳು: ಲಕ್ಷ್ಮಣ ಕೊಡಸೆ

Published:
Updated:
Deccan Herald

ವಿಜಯಪುರ: ‘ಒಂದೇ ನಾಡು, ಒಂದೇ ಜಾತಿ, ಒಂದೇ ಕುಲ ಎಂಬ ಅರ್ಥಕ್ಕೆ ಪೂರಕವಾಗಿ ನಾರಾಯಣ ಗುರುಗಳು ಈ ನಾಡಿಗೆ ಬಿಟ್ಟು ಹೋದ ಪರಂಪರೆ ಅನನ್ಯವಾದದ್ದು’ ಎಂದು ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಅಭಿಪ್ರಾಯಪಟ್ಟರು.

ಇನ್ಸ್ ಫೈರ್ ಕಾಲೇಜಿನ ಆವರಣದಲ್ಲಿ ಶನಿವಾರ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು, ವರದಿಗಾರರ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಪ್ರಶಸ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಅಸಹಿಷ್ಣುತೆ ಜೀವಂತವಾಗಿದೆ. ಜಾತಿ ವ್ಯವಸ್ಥೆ ಹೋಗಿಲ್ಲ. ಮನುಷ್ಯರನ್ನು ಮನುಷ್ಯರಂತೆ ಕಾಣುವಂತಹ ಮನಸ್ಸುಗಳು ಇದುವರೆಗೂ ಸಿದ್ಧವಾಗಿಲ್ಲ. ನಾರಾಯಣ ಗುರುಗಳ ವಾಕ್ಯ ಪರಿಪಾಲನೆ, ನೀತಿ ಬೋಧನೆ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವ ಮೂಲಕ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಾತಿ, ಮತ, ಪಂಥ, ಆಹಾರ ಹಾಗೂ ಸಂಸ್ಕೃತಿ ಸೇರಿದಂತೆ ಎಲ್ಲದರಲ್ಲೂ ವಿವಾದ ಹುಡುಕಲಾಗುತ್ತಿದೆ. ಬುದ್ಧ, ಬಸವಣ್ಣ ಅವರು ಸಾರಿ ಹೋದ ಚಿಂತನೆ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದು ಎಂದು ಹೇಳಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜು ಮಾತನಾಡಿ, ಗುರು ಪರಂಪರೆ ಬಿಟ್ಟು ಹೋದ ಹೋರಾಟದ ನಿರೀಕ್ಷೆ ಎಲ್ಲಿ ನಿಂತಿದೆ ಎನ್ನುವುದನ್ನು ಅರಿತು ಈಡೇರಿಸಬೇಕಾಗಿರುವ ದೊಡ್ಡ ಹೊಣೆಗಾರಿಕೆ ಯುವಪೀಳಿಗೆ ಮೇಲಿದೆ ಎಂದರು.

ಕೊತ್ತೂರಪ್ಪ, ಕೆ.ಆರ್.ಲೊಕೇಶ್, ಕೆ.ಗೋಪಾಲ, ಗುರುರಾಜ್ ಹೂಗಾರ್, ಮುನಿರಾಜು, ಎಚ್.ಜಿ.ವಿರೂಪಾಕ್ಷಪ್ಪ ಅವರಿಗೆ ‘ಬ್ರಹ್ಮಶ್ರೀ ನಾರಾಯಣ ಗುರು’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು, ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಪ್ರೊ.ಬಿ.ಕೆ.ರವಿ, ಜಿ.ಕೆ.ಸತ್ಯ, ಹ್ಯುಮನ್ ರೈಟ್ಸ್ ಡಿಫೆಂಡರ್ ಕೌನ್ಸಿಲ್ ಅಧ್ಯಕ್ಷ ಮಧು.ಸಿ, ಬಿ.ವೆಂಕಟಸಿಂಗ್, ಕೆ.ಎಸ್.ಸೋಮಶೇಖರ್, ಶಿವರಾಜ್, ಪ್ರಾಂಶುಪಾಲ ಶ್ರೀನಿವಾಸಮೂರ್ತಿ, ಎಂ.ಎಸ್.ಮಣಿ, ವರದಿಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಮುನಿರಾಜು, ಜೆ.ಆರ್.ಮುನಿವೀರಣ್ಣ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !