ಮಂಗಳವಾರ, ಜೂನ್ 15, 2021
21 °C
ಸೋಂಕು ನಿಯಂತ್ರಣ: ಅಧಿಕಾರಿಗಳ ಸಭೆಯಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸೂಚನೆ

ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ/ ವಿಜಯಪುರ: ‘ಕ್ಷೇತ್ರದಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಕೋವಿಡ್ ಸಂಕಷ್ಟದಲ್ಲಿ ಉಚಿತವಾಗಿ ಚಿಕಿತ್ಸೆ ದೊರೆಯಬೇಕು. ಯಾವುದೇ ಒಬ್ಬ ರೋಗಿಯನ್ನು ಹಾಸಿಗೆ ಇಲ್ಲ ಎಂದು ವಾಪಸ್ಸು ಕಳುಹಿಸಬಾರದು’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ ಸೋಂಕಿನ ನಿಯಂತ್ರಣಕ್ಕಾಗಿ ಇದುವರೆಗೂ ತೆಗೆದುಕೊಂಡಿರುವ ಕ್ರಮಗಳ ಕುರಿತು ಚರ್ಚೆ ನಡೆಸಲು ಶುಕ್ರವಾರ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಆಸ್ಪತ್ರೆಗಳಲ್ಲಿ ಮರಣದ ಸಂಖ್ಯೆ ಕಡಿಮೆಯಾಗಬೇಕು, ಪ್ರತಿಯೊಂದು ಹಳ್ಳಿಯಲ್ಲಿ ಎಲ್ಲರಿಗೂ ಕೋವಿಡ್ ಪರೀಕ್ಷೆಯಾಗಬೇಕು ಇದಕ್ಕಾಗಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು’ ಎಂದರು.

‘ದಿನಬೆಳಗಾದರೆ ನೂರಾರು ಫೋನ್‌ಗಳು ನನ್ನ ಕ್ಷೇತ್ರದಿಂದ ಬರುತ್ತವೆ. ತಾಲ್ಲೂಕಿನಲ್ಲಿರುವ ಆಸ್ಪತ್ರೆಗಳಲ್ಲಿ ಸ್ಥಳೀಯರಿಗೆ ಬಿಟ್ಟು ಹೊರಗಿನಿಂದ ಬರುತ್ತಿರುವವರಿಗೆ ಹಾಸಿಗೆಗಳು ಸಿಗುತ್ತಿವೆ. ಸಾಕಷ್ಟು ಮಂದಿ ಹಾಸಿಗೆ ಸಿಗದೆ, ನಿಗದಿತ ಸಮಯಕ್ಕೆ ಚಿಕಿತ್ಸೆ ಲಭ್ಯವಾಗದೆ, ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿರುವ ಬಗ್ಗೆಯೂ ಸಾಕಷ್ಟು ದೂರುಗಳು ಬಂದಿವೆ. ಆಸ್ಪತ್ರೆಗಳಲ್ಲಿ ರೆಮ್‌ಡಿಸಿವರ್ ಚುಚ್ಚುಮದ್ದಿನ ಬೇಡಿಕೆ ಹೆಚ್ಚಾಗಿ ಕಂಡು ಬರುತ್ತಿದೆ. ಹೆಚ್ಚು ಹಣ ಕೊಟ್ಟರೆ ಲಭ್ಯವಾಗುತ್ತಿದೆ ಎನ್ನುವ ಆರೋಪಗಳೂ ಕೇಳಿ ಬಂದಿವೆ. ಈ ಕುರಿತು
ಜಿಲ್ಲಾ ಆರೋಗ್ಯಾಧಿಕಾರಿ ಗಮನಹರಿಸಬೇಕು. ಒಂದು ವೇಳೆ ಜನರಿಂದ ಹೆಚ್ಚು ಹಣ ವಸೂಲಿ ಮಾಡಲಿಕ್ಕಾಗಿ ಅಭಾವ ಸೃಷ್ಟಿಯಾದರೆ ಅಧಿಕಾರಿಗಳ ತಲೆ ದಂಡವಾಗಲಿದೆ’ ಎಂದರು.

ಆಕಾಶ್ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 50 ತಾಲ್ಲೂಕಿಗೆ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿ, ಅವರನ್ನು, ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಲಿಕ್ಕೆ ನೇಮಕ ಮಾಡಿಕೊಂಡರೆ ತಾಲ್ಲೂಕಿನಲ್ಲಿನ ಪ್ರತಿಯೊಂದು ಹಳ್ಳಿಯಲ್ಲಿ ತ್ವರಿತವಾಗಿ ತಪಾಸಣೆ ಮಾಡಲಿಕ್ಕೆ ಸಾಧ್ಯವಾಗುತ್ತದೆ. ಇದರಿಂದ ಹಳ್ಳಿಗಳಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಸೋಂಕನ್ನು ನಿಯಂತ್ರಣ ಮಾಡಲಿಕ್ಕೆ ಅನುಕೂಲವಾಗಲಿದೆ ಎಂದರು.

ಚಿತಾಗಾರ ಸಮಸ್ಯೆ: ತಾಲ್ಲೂಕಿನ ಕೋರಮಂಗಲದ ಬಳಿ ಸರ್ಕಾರಿ ಜಾಗದಲ್ಲಿ ಚಿತಾಗಾರ ನಿರ್ಮಾಣ ಮಾಡಿದ್ದೀರಿ, ಅದನ್ನು ಮಾಡುವ ಮುಂಚೆ ಸುತ್ತಮುತ್ತಲಿನ ರೈತರ ಅಭಿಪ್ರಾಯ ಸಂಗ್ರಹ ಮಾಡಿದ್ದೀರಾ, ಎಂದು ಪ್ರಶ್ನಿಸಿದರು. ಸಭೆಯಲ್ಲಿ ಹಾಜರಿದ್ದ ಮುಖಂಡ ಕೋರಮಂಗಲ ಭೈರೇಗೌಡ ಮಾತನಾಡಿ, ಚಿತಾಗಾರ ನಿರ್ಮಾಣ ಮಾಡಿರುವ ಪ್ರದೇಶದ ಸುತ್ತಲೂ 5 ಕೊಳವೆಬಾವಿಗಳಿವೆ ಅವುಗಳಿಂದ ಜನರಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿವೆ. ಚಿತಾಗಾರ ನಿರ್ಮಾಣವಾದರೆ ನೀರು ಕಲುಷಿತವಾಗುವ ಸಂಭವವಿದೆ ಎಂದರು.

ವೈದ್ಯ ನಟರಾಜ್ ಅವರ ಮೇಲೆ ದೌರ್ಜನ್ಯಕ್ಕೆ ಬೇಸರ: ದೇವನಹಳ್ಳಿ ಪಟ್ಟಣದ ವೈದ್ಯ ಡಾ.ನಟರಾಜ್ ಅವರನ್ನು ಲಾಕ್ ಡೌನ್ ಸಮಯದಲ್ಲಿ ರಸ್ತೆಯಲ್ಲಿ ಅಡ್ಡಗಟ್ಟಿ ಪೊಲೀಸರು ಅವರಿಗೆ ಅಪಮಾನ ಮಾಡಿದ್ದು ತಪ್ಪು, ಬಡವರಿಗಾಗಿ ಕೆಲಸ ಮಾಡುವ ವೈದ್ಯರ ಬಗ್ಗೆ ಅಮಾನುಷವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್ ಮಾತನಾಡಿ, ತಾಲ್ಲೂಕಿನಲ್ಲಿ ಮೊಬೈಲ್ ಕ್ಲಿನಿಕ್ ಗಳ ಮೂಲಕ ಹಳ್ಳಿಗಳಿಗೆ ಹೋಗಿ ಜನರನ್ನು ತಪಾಸಣೆ ಮಾಡುವ ಕಾರ್ಯ ಶುರುವಾಗಿದೆ. ತಪಾಸಣೆಯ ವೇಳೆ ಯಾರಿಗೆ ಪಾಸಿಟೀವ್ ಬರುತ್ತೋ ಅಂತಹವರಿಗೆ ಸ್ಥಳದಲ್ಲೆ ಔಷಧಿಯ ಕಿಟ್ ನೀಡುತ್ತಿದ್ದೇವೆ. ಕೋವಿಡ್ ಕೇರ್ ಸೆಂಟರ್ ಗಳು ಕೂಡಾ ಕಾರ್ಯನಿರ್ವಹಿಸುತ್ತಿದ್ದು, ಇತ್ತಿಚೆಗೆ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಆಮ್ಲಜನಕ ಕಾನ್ಸನ್ ಟ್ರೇಟರ್ ಗಳನ್ನು ಅಳವಡಿಸಿರುವುದರಿಂದ ಆಮ್ಲ ಜನಕದ ಕೊರತೆ ಎದುರಾಗಲ್ಲ. ನಮ್ಮಲ್ಲಿ ಸಿಬ್ಬಂದಿಯ ಕೊರತೆಯು ಹೆಚ್ಚಾಗಿದೆ. ಕೋವಿಡ್ ಸಂದರ್ಭದಲ್ಲಿ ಹೊರಗುತ್ತಿಗೆಯ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಿಕ್ಕೂ ಬರ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವೈದ್ಯರ ಸಂಖ್ಯೆಯೂ ಕಡಿಮೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಸಂಭಾವನೆ ಕೊಡುವುದರಿಂದ ಅಲ್ಲಿಗೆ ಹೋಗ್ತಾರೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ, ತಹಶೀಲ್ದಾರ್ ಅನಿಲ್ ಕುಮಾರ್ ಆರೋಲಿಕರ್, ತಾಲ್ಲುಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಸಂತ್ ಕುಮಾರ್, ದೇವನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ವಿಜಯಪುರ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು