ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಪೂರ್ವ ಕೃಷಿ ಸಿದ್ಧತೆಗೆ ಕೊರೊನೆ ತಡೆ

ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇಲ್ಲ * ಗೊಂದಲದಲ್ಲಿ ರೈತ ಸಮುದಾಯ
Last Updated 17 ಏಪ್ರಿಲ್ 2020, 15:44 IST
ಅಕ್ಷರ ಗಾತ್ರ

ದೇವನಹಳ್ಳಿ: ಕೊರೊನಾ ಕೃಷಿ ವಲಯದ ಮೇಲೂ ವಿಪರೀತ ಪರಿಣಾಮ ಬೀರಿದೆ. ಈಗಾಗಲೇ ರೈತ ಸಮುದಾಯ ಈ ಸಂಕಷ್ಟಕ್ಕೆ ಸಿಲುಕಿ ತತ್ತರಿಸಿ ಹೋಗಿದೆ. ರೈತರು ಮುಂಗಾರು ಪೂರ್ವ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮಾರ್ಚ್ ಮತ್ತು ಏಪ್ರಿಲ್ ಸಕಾಲ.ಒಣಭೂಮಿಯನ್ನು ಹದವಾದ ಸ್ಥಿತಿಗೆ ತರುವ ಸಮಯವಿದು.

ಆದರೆ,ಕೊರೊನಾ ಪರಿಣಾಮದಿಂದ ಜಮೀನು ಉಳುಮೆ ಮಾಡುವ, ಕೊಟ್ಟಿಗೆ ಗೊಬ್ಬರ ಹಾಕಿ ಮತ್ತೆ ಉಳುವೆ ಮಾಡುವ ಕಾರ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕಿನ 1,052 ಗ್ರಾಮಗಳ ವ್ಯಾಪ್ತಿಯಲ್ಲಿ 1,78,867 ರೈತ ಕುಟುಂಬಗಳಿವೆ. ಈ ಪೈಕಿ ಅತಿಸಣ್ಣ ರೈತರು 1,30,770, ಸಣ್ಣ ರೈತರು 31,102, ಅರೆ ಮಧ್ಯಮ ರೈತರು 13,096, ಮಧ್ಯಮ ರೈತರು 3,580, ದೊಡ್ಡ ರೈತರು 319. ಒಟ್ಟು 1,12,214 ಹೆಕ್ಟೇರ್‌ ಪ್ರದೇಶದಲ್ಲಿ ವಾರ್ಷಿಕ ಸಾಗುವಳಿ ವಿಸ್ತೀರ್ಣ ಇದೆ. ಇದನ್ನು ಹೊರತುಪಡಿಸಿ 24,995 ಹೆಕ್ಟೇರ್‌ನಲ್ಲಿ ನೀರಾವರಿ ವಿಸ್ತೀರ್ಣವಿದೆ.

ಶೇಕಡ 45ರಷ್ಟು ವಿಸ್ತೀರ್ಣದಲ್ಲಿ ಪಾರಂಪರಿಕ ಕೃಷಿಮೂಲ ಮುಂದುವರೆಸಿಕೊಂಡು ಬರುತ್ತಿರುವ ರೈತರು ಈಗಾಗಲೇ ಏನು ಮಾಡಬೇಕೆಂಬ ಗೊಂದಲದಲ್ಲಿದ್ದಾರೆ. ಲಾಕ್ ಡೌನ್ ‌ಮುಂದುವರಿದಿದ್ದು ಟ್ರ್ಯಾಕ್ಟರ್ ಬಾಡಿಗೆಗೆ ಬರುವವರು, ಕೂಲಿ ಕಾರ್ಮಿಕರ ಕೊರತೆ ಎದುರಾಗುವ ಸಾಧ್ಯತೆ ಇದೆ.

ವಿವಿಧ ಸಂಘಟನೆಗಳು ಪ್ರತಿಯೊಬ್ಬರಿಗೆ ಸಮಾನವಾಗಿ ದಿನಸಿ – ತರಕಾರಿ ಉಚಿತವಾಗಿ ನೀಡುತ್ತಿವೆ. ಜತೆಗೆ ಕೇಂದ್ರ ಸರ್ಕಾರ ಎರಡನೇ ಹಂತದಲ್ಲಿ 2ತಿಂಗಳ ಪಡಿತರ ಧಾನ್ಯ ನೀಡುವುದಾಗಿ ಘೋಷಿಸಿದೆ. ಇದರಿಂದ ಕೂಲಿಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ರೈತರಾದ ಮುನಿಯಪ್ಪ ,ಮುನಿರಾಜು, ಗಂಗಪ್ಪ ಮತ್ತು ರಾಜಣ್ಣ.

ಮುಂಗಾರು ಹಂಗಾಮಿನ ಮೊದಲ ಬಿತ್ತನೆ ತೊಗರಿ ಮತ್ತು ಅಲಸಂದೆಯನ್ನು ಮೇ15ರ ನಂತರ ಬಿತ್ತನೆ ಮಾಡಲಾಗುತ್ತದೆ. ಮುಸುಕಿನ ಜೋಳ ಮೇ ಕೊನೆ ವಾರದಿಂದ ಜೂನ್ ಅಂತ್ಯದವರೆಗೆ ಬಿತ್ತನೆ ಮಾಡಲು ಅವಕಾಶವಿದೆ. ರಾಗಿ ಜೂನ್ 15ರಿಂದ ಜುಲೈ ಅಂತ್ಯದವರೆಗೆ ಅವಕಾಶ ಇರುತ್ತದೆ.

ಮುಂಗಾರು ಅನಿಶ್ಚಿತತೆಯಿಂದ10 ರಿಂದ 15 ದಿನಗಳ ಮೊದಲೇ ಬಿತ್ತನೆ ಮಾಡಿದರೆ ಉತ್ತಮ. ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾದರೂ ಬೆಳೆ ಫಸಲು ಕಟ್ಟುವ ಮಧ್ಯಂತರ ಅವಧಿಯಲ್ಲಿ ಮಳೆ ಕೊರತೆ ಉಂಟಾಗುತ್ತದೆ. ಮಳೆ ಇಲ್ಲದೆಪೈರು ನೆಲ ಕಚ್ಚಲಿದೆ ಎನ್ನುತ್ತಾರೆ ರೈತರು.

ಕೃಷಿ ಇಲಾಖೆ ಮಾಹಿತಿಯಂತೆ 2020–21ನೇ ಸಾಲಿನಲ್ಲಿರೈತರಿಗೆ ಅವಶ್ಯಕ ಇರುವ ಯೂರಿಯಾ, ಡಿ.ಎ.ಪಿ, ಎಂ.ಓ.ಪಿ, ಕಾಂಪ್ಲೆಕ್ಸ್ ಮತ್ತು ಎಸ್.ಎಸ್.ಪಿ ರಸಗೊಬ್ಬರ ಬೇಡಿಕೆ 34,780 ಮೆಟ್ರಿಕ್ ಟನ್ ಪೈಕಿ 2,495 ಮೆಟ್ರಿಕ್ ಟನ್ ಸರಬರಾಜು ಮಾಡಲಾಗಿದೆ. ಈ ಹಿಂದಿನ ಗೊಬ್ಬರ ದಾಸ್ತಾನು 9,923 ಮೆಟ್ರಿಕ್ ಟನ್ ಇದೆ. ಖಾಸಗಿ ಮತ್ತು ಸಹಕಾರ ಸಂಘಗಳಲ್ಲಿ ದಾಸ್ತಾನು ಮಾಡಿ ಸಕಾಲದಲ್ಲಿ ವಿತರಿಸುವಂತೆ ಕೃಷಿ ಇಲಾಖೆ ಸೂಚಿಸಿದೆ.

ರಸಗೊಬ್ಬರ ಉತ್ಪಾದಕರಿಗೆ ಮತ್ತು ವಿತರಕರಿಗೆ ತೊಂದರೆಯಾಗದಂತೆ ಹಸಿರು ಪಾಸ್ ನೀಡಲಾಗುತ್ತಿದ್ದು ಸದ್ಯ ಯಾವುದೇ ಕೊರತೆಯಾಗದಂತೆ ನಿಗಾವಹಿಸಲಾಗಿದೆ. 17ರೈತ ಸಂಪರ್ಕ ಕೇಂದ್ರ, 17ಬಾಡಿಗೆ ಆಧಾರಿತ ಸೇವಾ ಕೇಂದ್ರಗಳಿಗೆ ಜವಾಬ್ದಾರಿ ನೀಡಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಭತ್ತ, ರಾಗಿ, ಮುಸಕಿನ ಜೋಳ, ಅಲಸಂದೆ, ತೊಗರಿ ಮತ್ತು ನೆಲಗಡಲೆ 7970.09 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದ್ದು 3770.90 ಕ್ವಿಂಟಲ್ ಈಗಾಗಲೇ ಅಗತ್ಯ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಲಘ ಪೋಷಕಾಂಶ ಗೊಬ್ಬರ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ. ರೈತರು ಅತಂಕ ಪಡುವ ಅಗತ್ಯವಿಲ್ಲ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT