ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ಯಾವುದಯ್ಯ ವೈಕುಂಠಕ್ಕೆ?

ಸ್ಮಶಾನ ಜಮೀನು ಮಂಜೂರಿಗೆ ದಲಿತರ ಒತ್ತಾಯ
Last Updated 23 ಡಿಸೆಂಬರ್ 2020, 2:45 IST
ಅಕ್ಷರ ಗಾತ್ರ

ವಿಜಯಪುರ: ಸ್ಮಶಾನಗಳಿಗೆ ಜಾಗ ಒದಗಿಸಿಕೊಡುವಲ್ಲಿ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ಶವ ಸಂಸ್ಕಾರಕ್ಕೆ ಜಾಗವಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ 14ನೇ ವಾರ್ಡಿನ ಸಮೀಪದಲ್ಲಿ ದಲಿತರ ಸ್ಮಶಾನಕ್ಕೆ ಜಾಗ ನೀಡಿ ಬಹಳ ವರ್ಷಗಳೇ ಕಳೆದಿವೆ. ಇಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ವಿದ್ಯುತ್ ದೀಪಗಳಿಲ್ಲ. ಮಳೆಗಾಲದಲ್ಲಿ ಶವ ಹೊತ್ತುಕೊಂಡು ಬಂದು ವಿಧಿವಿಧಾನ ನೆರವೇರಿಸಲೆಂದು ನಿರ್ಮಾಣವಾಗಿರುವ ಶೆಡ್ ಬಯಲು ಶೌಚಾಲಯವಾಗಿದೆ.

ನೀರಿನ ವ್ಯವಸ್ಥೆ ಇಲ್ಲ. ಕಾಲಿಡಲಿಕ್ಕೂ ಯೋಚಿಸಬೇಕಾದಂತಹ ಪರಿಸ್ಥಿತಿ ಇದೆ. ಸ್ಮಶಾನದ ಒಳಗೆ ಹೋಗಲಿಕ್ಕೂ ಸಮರ್ಪಕವಾದ ರಸ್ತೆಯಿಲ್ಲ. 20, 12 ಮತ್ತು 16ನೇ ವಾರ್ಡ್‌ಗಳು ಸೇರಿದಂತೆ ಪಟ್ಟಣದಲ್ಲಿ ದಲಿತರು ಅಂತ್ಯಸಂಸ್ಕಾರ ಮಾಡಲು ಹೋಗಬೇಕಾದರೆ ಸುಮಾರು ಒಂದೂವರೆ ಕಿಲೋಮೀಟರ್ ದೂರಕ್ಕೆ ಶವ ಹೊತ್ತುಕೊಂಡು ಸಾಗಬೇಕಾಗಿದೆ.

ಇಲ್ಲಿ ವರ್ಷದಲ್ಲಿ ಒಂದು ಬಾರಿ ಮಾತ್ರ ಮಹಾಲಯ ಅಮಾವಾಸ್ಯೆಗೆ ಗಿಡಗಂಟಿಗಳನ್ನು ಸ್ವಚ್ಛಗೊಳಿಸುವುದು ಬಿಟ್ಟರೆ, ಮುಂದಿನ ವರ್ಷದವರೆಗೂ ತಿರುಗಿಯೂ ನೋಡುವುದಿಲ್ಲ. ರಾತ್ರಿವೇಳೆ ಈ ಭಾಗದಲ್ಲಿ ಸಂಚರಿಸುವುದು ತೀರಾ ಕಷ್ಟಕರ ಎನ್ನುತ್ತಾರೆ ನಾಗರಿಕರು.

ಬಾಡಿಗೆ ವಾಹನ ಪಡೆದು ಶವ ಸಾಗಾಣಿಕೆ ಮಾಡಿಕೊಂಡು ಬಂದರೆ ಕಿರಿದಾದ ರಸ್ತೆಯಲ್ಲಿ ಮುಂದೆ ಹೋಗಲಿಕ್ಕೂ ಸಾಧ್ಯವಿಲ್ಲ. ಒಂದೊಂದು ಗುಂಡಿಯಲ್ಲಿ ಎರಡು– ಮೂರು ಜನರನ್ನು ಸಂಸ್ಕಾರ ಮಾಡುವಂತಾಗಿದೆ. ಗುಂಡಿ ಅಗೆಯುವಾಗ ಮೊದಲು ಸಂಸ್ಕಾರ ಮಾಡಿರುವವರ ಮೂಳೆಗಳು ಸಿಗುತ್ತಿವೆ. ಇದರಿಂದ ಬೇರೆಯವರ ಭಾವನೆಗಳಿಗೂ ಧಕ್ಕೆಯಾಗುತ್ತಿದೆ. ಈ ನಡುವೆ ಗುಂಡಿಗಳು ಅಗೆಯುವಾಗ ನಮ್ಮವರ ಗುಂಡಿ ಅಗೆಯುತ್ತಿದ್ದೀರಿ ಎಂದು ಮೃತರ ಸಂಬಂಧಿಕರು ಗಲಾಟೆ ಮಾಡುತ್ತಾರೆ. ಈ ಸಂಕಷ್ಟದ ನಡುವೆಯೇ ಶವ ಸಂಸ್ಕಾರ ಮಾಡಿಬರುವಂತಾಗಿದೆ ಎಂಬುದು ಜನರ ಬೇಸರ.

‘ದಲಿತರ ಸ್ಮಶಾನಗಳಿಗೆ ಭೂಮಿ ಮಂಜೂರು ಮಾಡಿಕೊಡಿ ಎಂದು ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು, ತಹಶೀಲ್ದಾರ್ ಸೇರಿದಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ, ಅವರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಪಟ್ಟಣದಲ್ಲಿ ಯಾರಾದರೂ ಮೃತಪಟ್ಟರೆ ಎಲ್ಲಿ ಅಂತ್ಯಸಂಸ್ಕಾರ ಮಾಡಬೇಕು ಎನ್ನುವ ಚಿಂತೆ ದಲಿತರಿಗೆ ಕಾಡುತ್ತಿದೆ. ಈಗಲಾದರೂ ಸರ್ಕಾರ ಗಮನಹರಿಸಿ ನಮಗೆ ಅನುಕೂಲ ಮಾಡಿಕೊಡದಿದ್ದರೆ ಪುರಸಭೆ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ’ ಎನ್ನುತ್ತಾರೆಮುಖಂಡ ನಾಗರಾಜ್.

ಪುರಸಭಾ ಮುಖ್ಯಾಧಿಕಾರಿ ಎ.ಬಿ. ಪ್ರದೀಪ್ ಕುಮಾರ್ ಮಾತನಾಡಿ, ‘ಜಾಗವಿಲ್ಲದ ಕಾರಣ ಎಲ್ಲಿ ಖಾಲಿಯಿದೆಯೋ ಅಲ್ಲಿ ಶವಸಂಸ್ಕಾರ ಮಾಡುತ್ತಿದ್ದಾರೆ. ಸ್ಮಶಾನದ ಕಾಂಪೌಂಡ್‌ನ ಕಲ್ಲಿನ ಚಪ್ಪಡಿಗಳು ತೆಗೆದಿದ್ದಾರೆ. ಶೀಘ್ರವಾಗಿ ಕಲ್ಲಿನ ಚಪ್ಪಡಿಗಳನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಗಿಡಗಂಟಿಗಳನ್ನು ತೆರವು ಮಾಡಲಿಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ. ವಿದ್ಯುತ್ ಕಂಬಗಳಿಗೆ ಎಲ್.ಇ.ಡಿ ಲೈಟ್‌ ಅಳವಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪ್ರತ್ಯೇಕ ಭೂಮಿ ಗುರ್ತಿಸುವುದು ನಮ್ಮ ಹಂತದಲ್ಲಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಖಾಜಾ ಹುಸೇನ್ ಮುಧೋಳ ಮಾತನಾಡಿ, ದಲಿತರ ಸ್ಮಶಾನದ ಸಮಸ್ಯೆ ಬಗೆಹರಿಸಲಿಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಟ್ಟಿಗೆ ಶೀಘ್ರವೇ ಚರ್ಚೆ ನಡೆಸುತ್ತೇನೆ. ಎರಡು ದಿನಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದರು.

ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆ ಎಸ್. ರವಿಕಲಾ ಮಾತನಾಡಿ, ಇಲ್ಲಿನ ಸಮಸ್ಯೆ ಕುರಿತು ಪ್ರತಿ ಸಭೆಯಲ್ಲೂ ಜಿಲ್ಲಾಧಿಕಾರಿ ಅವರಿಗೆ ಪ್ರಸ್ತಾಪ ಸಲ್ಲಿಸಲಾಗುತ್ತಿದೆ. ಆದರೆ, ಇದುವರೆಗೂ ಭೂಮಿ ಗುರುತಿಸುವಂತಹ ಕೆಲಸವಾಗಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT