ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿಗೆ ಹಾನಿ: ಸ್ಥಳ ಪರಿಶೀಲನೆ

ನಂದಿ ಮೋರಿ ಬಳಿ ಹಳಿ ಮೇಲೆ ಸೈಜು ಕಲ್ಲು ಇಟ್ಟ ದುಷ್ಕರ್ಮಿಗಳು
Last Updated 6 ಡಿಸೆಂಬರ್ 2022, 5:51 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರ ಹೊರವಲಯದ ನಂದಿಮೋರಿ ಸಮೀಪ ರೈಲು ಹಳಿಗಳ ಮೇಲೆ ಶನಿವಾರ ದುಷ್ಕರ್ಮಿಗಳು ಸೈಜು ಕಲ್ಲುಗಳನ್ನು ಇಟ್ಟಿದ್ದರ ಪರಿಣಾಮ ರೈಲಿನ ಮುಂಭಾಗಕ್ಕೆ ಹಾನಿಯಾಗಿದ್ದು, ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಸೌಮ್ಯಲತಾ ನೇತೃತ್ವದ ತಂಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಈ ಮಾರ್ಗದಲ್ಲಿ ಕೂರ್ಲಾ ರೈಲು ಸಂಚರಿಸುತ್ತಿದ್ದಾಗ ಹಳಿಗಳ ಮೇಲೆ ಕಲ್ಲುಗಳು ಇದ್ದದ್ದನ್ನು ಗಮನಿಸಿದ ಚಾಲಕ ತಕ್ಷಣ ರೈಲು ನಿಲ್ಲಿಸಿ ಕಲ್ಲುಗಳನ್ನು ತೆರವು ಮಾಡಿದ್ದಾರೆ. ಈ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ರೈಲು ಮುಂದಕ್ಕೆ ಸಾಗಿದೆ.

ಸೈಜು ಕಲ್ಲಿನಿಂದ ರೈಲಿನ ಮುಂಭಾಗಕ್ಕೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಗಂಭೀರತೆ ಅರಿತ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಸೌಮ್ಯಲತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕರ್ನಾಟಕ-ದೆಹಲಿ ಎಕ್ಸ್‌ಪ್ರೆಸ್‌ ಸೇರಿದಂತೆ ಕರ್ನಾಟಕದಿಂದ ವಿವಿಧ ರಾಜ್ಯಗಳಿಗೆ ತೆರಳುವ ಹಲವಾರು ರೈಲುಗಳು ಬೆಂಗಳೂರಿನಿಂದ ಈ ಮಾರ್ಗದ ಮೂಲಕವೇ ಸಂಚರಿಸುತ್ತವೆ. ಹಾಗಾಗಿ, ಹೆಚ್ಚಿನ ನಿಗಾವಹಿಸಲು ಗನ್‌ಮನ್‌ಗಳ ಸಂಖ್ಯೆ ಹೆಚ್ಚಿಸಲು ಸೂಚಿಸಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ನಂದಿ ಮೋರಿ ಆತ್ಮಹತ್ಯೆ ಹಾಟ್‌ಸ್ಪಾಟ್‌:ದೊಡ್ಡಬಳ್ಳಾಪುರ ನಗರದಿಂದ ನಂದಿಬೆಟ್ಟದ ಕಡೆಗೆ ಹೋಗುವ ಚಿಕ್ಕಬಳ್ಳಾಪುರ ರಸ್ತೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬೃಹತ್‌ ಮೋರಿಯನ್ನು ‘ನಂದಿ ಮೋರಿ’ ಹೆಸರಿನಿಂದ ಕರೆಯಲಾಗುತ್ತದೆ.

ನಗರದ ಪ್ರವಾಸಿ ಮಂದಿರ, ಪೊಲೀಸ್‌ ಠಾಣೆ, ಸರ್ಕಾರಿ ಆಸ್ಪತ್ರೆಗೆ ಕೂಗಳತೆ ದೂರದಲ್ಲೇ ಇರುವ ನಂದಿಮೋರಿ ಕೆಳಗೆ ಹಾಗೂ ಮೋರಿಯಿಂದ ಐದಾರು ಮೀಟರ್‌ ದೂರದಲ್ಲಿ ವರ್ಷಕ್ಕೆ ಕನಿಷ್ಠ 8ರಿಂದ 10 ಮಂದಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ನಡೆಯುತ್ತಿವೆ.

ನಂದಿ ಮೋರಿ ಸಮೀಪದಲ್ಲೇ ಹೈಟೆಕ್‌ ಲೇಔಟ್‌, ಮನೆಗಳು ಸಹ ನಿರ್ಮಾಣವಾಗಿವೆ. ಆದರೆ, ನಂದಿ ಮೋರಿ ಸಮೀಪ ಮಾತ್ರ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದು ಮಾತ್ರ ಕಡಿಮೆಯಾಗಿಲ್ಲ.

ಮೋರಿ ಸಮೀಪ ಹೆಚ್ಚು ಕತ್ತಲು, ರಸ್ತೆಯಲ್ಲಿ ಹೋಗುವವರು ಕಾಣದಷ್ಟು ಪೊದೆ ಬೆಳೆದಿರುವುದೇ ಇಲ್ಲಿ ಹೆಚ್ಚಿನ ಆತ್ಮಹತ್ಯೆಗಳು ನಡೆಯಲು ಕಾರಣವಾಗಿದೆ. ಈ ಮೋರಿ ಸುತ್ತಮುತ್ತ ರಾತ್ರಿ ವೇಳೆ ಬೆಳಕು ಇರುವಂತೆ ವಿದ್ಯುತ್‌ ದೀಪ ಅಳವಡಿಕೆ ಹಾಗೂ ರೈಲ್ವೆ ಹಳಿ ಹಾದು ಹೋಗಿರುವ ಅಕ್ಕಪಕ್ಕದಲ್ಲಿನ ಪೊದೆಯನ್ನು ತೆರವುಗಳಿಸಬೇಕು. ಹಳಿಯ ಕಡೆಗೆ ಯಾರೂ ಹೋಗದಂತೆ ತಂತಿಬೇಲಿ ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT