ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯದಶಮಿ ಉತ್ಸವಕ್ಕೆ ಆನೇಕಲ್‌ ಸಿಂಗಾರ

ವೈಭವದ ಚೌಡೇಶ್ವರಿ ದೇವಿಯ ಮೈಸೂರು ದಸರೆ, ಸಾಂಸ್ಕೃತಿಕ ಕಾರ್ಯಕ್ರಮ
Last Updated 16 ಅಕ್ಟೋಬರ್ 2018, 13:30 IST
ಅಕ್ಷರ ಗಾತ್ರ

ಆನೇಕಲ್: ಪಟ್ಟಣದ ಚೌಡೇಶ್ವರಿ ದೇವಿ ವಿಜಯದಶಮಿ ದಸರಾ ಉತ್ಸವವು ಮೈಸೂರು ದಸರೆ ಆನೇಕಲ್‌ನಲ್ಲಿ ನಡೆಯುತ್ತಿದ್ದು ಇದಕ್ಕಾಗಿ ಪಟ್ಟಣವು ನವವಧುವಿನಂತೆ ಸಿಂಗಾರಗೊಂಡಿದೆ.

ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ, ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಸೇರಿದಂತೆ ಹಾಗೂ ನವರಾತ್ರಿಯ ಅಂಗವಾಗಿ ಪ್ರತಿದಿನ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಪ್ರತಿನಿತ್ಯ ಜನರ ದಂಡು ದೇವಿಯ ದರ್ಶನಕ್ಕಾಗಿ ಸೇರುತ್ತಿದೆ.

ಪಟ್ಟಣದ ಹೃದಯಭಾಗದ ತಿಲಕ್ ವೃತ್ತದಲ್ಲಿರುವ ಶ್ರೀ ಚೌಡೇಶ್ವರಿ ದೇವಿ ದೇವಾಲಯವು ಪಟ್ಟಣದ ಪ್ರಮುಖ ಆಕರ್ಷಣೆ. ಈ ಶಕ್ತಿ ದೇವತೆಯು ಸುತ್ತಲಿನ ಗ್ರಾಮಗಳು ಸೇರಿದಂತೆ ಪಟ್ಟಣದ ಸಹಸ್ರಾರು ಜನರ ಆರಾಧ್ಯ ದೈವವಾಗಿದೆ. ಶರನ್ನವರಾತ್ರಿ ಪ್ರಯುಕ್ತ ಅಕ್ಟೋಬರ್‌ 10ರಿಂದಲೂ ದೇವಾಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಚೌಡೇಶ್ವರಿ ದೇವಿಗೆ ಶರನ್ನವರಾತ್ರಿಯ ಪ್ರಯುಕ್ತ ವಿಜಯಲಕ್ಷ್ಮೀ, ಮೀನಾಕ್ಷಿ, ನಾರಸಿಂಹಿಣಿ, ರಾಜರಾಜೇಶ್ವರಿ, ಕೊಲ್ಲಾಪುರ ಲಕ್ಷ್ಮೀ, ಪಾರ್ವತಿ, ಸರಸ್ವತಿ ಅಲಂಕಾರಗಳನ್ನು ಮಾಡಲಾಗಿದ್ದು ಪ್ರತಿದಿನ ಭಕ್ತರು ಚೌಡೇಶ್ವರಿ ದೇವಿಯನ್ನು ಭಕ್ತರು ವಿವಿಧ ಅಲಂಕಾರಗಳಲ್ಲಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಬುಧವಾರ (ಅ.17) ದುರ್ಗಾದೇವಿ ಅಲಂಕಾರ, ಗುರುವಾರ (ಅ.18) ರೇಣುಕಾ ದೇವಿ ಅಲಂಕಾರ ಹಾಗೂ ಶುಕ್ರವಾರ ದೇವಿಗೆ ಸರ್ವಾಲಂಕಾರ ಮಾಡಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ಪ್ರತಿದಿನ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಕ್ತಿಗೀತೆ, ಹರಿಕಥೆ, ಯಕ್ಷಗಾನ, ಸುಗಮ ಸಂಗೀತ, ದೇಶಭಕ್ತಿ ಹಾಗೂ ಭಾವಗೀತೆಗಳ ಗಾಯನ, ಭರತನಾಟ್ಯ ಕಾರ್ಯಕ್ರಮಗಳು ಪ್ರತಿದಿನ ಸಂಜೆ ನಡೆಯುತ್ತಿವೆ. ಧಾರ್ಮಿಕ ಆಚರಣೆಗಳ ಜೊತೆಗೆ ದೇವಾಲಯದಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಗಿದ್ದು ಸಾಂಸ್ಕೃತಿಕ ಕಾರ್ಯಕ್ರಮ ಭಕ್ತರನ್ನು ಆಕರ್ಷಿಸುತ್ತಿವೆ.

ಬುಧವಾರ (ಅ.17) ಅನ್ನಮಯ್ಯ ಸಂಕೀರ್ತನೆ ಹಾಗೂ ಘಂಟಸಾಲ ಹಾಡುಗಳು, ಗುರುವಾರ (ಅ.18) ತೆಲುಗು ಈ ಟಿವಿ ಖ್ಯಾತಿಯ ಜಗ ಡ್ಯಾನ್ಸ್ ತಂಡದವರಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ, ಶುಕ್ರವಾರ(ಅ.18) ಹಾಸ್ಯ ಲಹರಿ ಹಾಗೂ ಕವಿ ಕಚಗುಳಿ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿಜಯದಶಮಿಯಂದು ಬೆಳಿಗ್ಗೆ 8ರಿಂದ ರಾತ್ರಿ 10ರವರೆಗೂ ಪಟ್ಟಣದ ಕಂಬದ ಗಣಪತಿ ದೇವಾಲಯದ ಹಿಂಭಾಗದ ಮೈದಾನದಲ್ಲಿ ನಿರಂತರ ಅನ್ನದಾಸೋಹದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಶುಕ್ರವಾರದಂದು ರಾತ್ರಿ ಆಕರ್ಷಕ ಬಾಣಬಿರುಸು ಪ್ರದರ್ಶನ, ಪಂಜಿನ ಕವಾಯತು ನಡೆಯಲಿದೆ.

ದಾನಿಗಳು ಹಾಗೂ ಸೇವಾಕರ್ತರ ನೆರವಿನಿಂದ ಆನೇಕಲ್ ಚೌಡೇಶ್ವರಿ ದೇವಿ ದೇವಾಲಯ ಆಡಳಿತ ಮಂಡಳಿ ಹಾಗೂ ತೊಗಟವೀರರ ಕ್ಷೇಮಾಭಿವೃದ್ಧಿ ಯುವಕರ ಸಂಘದ ಸಹಯೋಗದಲ್ಲಿ ನಡೆಯುತ್ತಿರುವ ವಿಜಯದಶಮಿ ಉತ್ಸವ ವರ್ಷದಿಂದ ವರ್ಷಕ್ಕೆ ವಿಶೇಷ ಕಾರ್ಯಕ್ರಮಗಳ ಮೂಲಕ ತನ್ನದೇ ಆದ ಮೆರಗನ್ನು ಮೂಡಿಸಿದೆ.

ದೇವಾಲಯದ ಇತಿಹಾಸ:

ಚೌಡೇಶ್ವರಿ ದೇವಿಯು ತೊಟವೀರರ ಆರಾಧ್ಯ ದೈವವಾಗಿದ್ದರೂ ಸಹ ಶ್ರೀ ನಂದವರೀಕ ಬ್ರಾಹ್ಮಣರ ಕುಲದೇವತೆಯಾಗಿರುವುದು ವಿಶೇಷ. ಇದಕ್ಕೆ ಸಂಬಂಧಪಟ್ಟಂತೆ ಒಂದು ಪ್ರಚಲಿತ ವೃತ್ತಾಂತವು ಪ್ರಚಲಿತದಲ್ಲಿದೆ. 400 ವರ್ಷಗಳಿಗೂ ಹಿಂದೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಂದವರಂ ಎಂಬ ಗ್ರಾಮವಿತ್ತು. ಅದು ಆ ಪ್ರದೇಶದ ನಂದನ ಚಕ್ರವರ್ತಿಯ ರಾಜಧಾನಿಯಾಗಿತ್ತು.

ಈ ಚಕ್ರವರ್ತಿಯು ವಿಶ್ವೇಶ್ವರನ ದರ್ಶನಕ್ಕೆಂದು ಕಾಶಿಗೆ ಆಗಿಂದ್ದಾಗೆ ಹೋಗುತ್ತಿದ್ದ ಎನ್ನಲಾಗಿದೆ. ಕಾಶಿಯಲ್ಲಿ ಶ್ರೀ ಚೌಡೇಶ್ವರಿಯ ಆರಾಧಕರು ಮಹಾಮಹಿಮರು ಆಗಿದ್ದ ಬ್ರಾಹ್ಮಣ ತಪಸ್ವಿಗಳನ್ನು ಚಕ್ರವರ್ತಿಯನ್ನು ಸಂದರ್ಶಿಸುತ್ತಿದ್ದರು.

ಈ ಬ್ರಾಹ್ಮಣರನ್ನು ರಾಜ ತನ್ನ ರಾಜ್ಯಕ್ಕೆ ಆಹ್ವಾನಿಸುತ್ತಲೇ ಇದ್ದ , ಆದರೆ ಅವರು ಬಂದಿರಲಿಲ್ಲ. ಸಂತಾನ ಭಾಗ್ಯವಿಲ್ಲದ ಈ ಚಕ್ರವರ್ತಿಗೆ ಬ್ರಾಹ್ಮಣ ತಪಸ್ವಿಗಳು ‘ಪುತ್ರವಾನ್ ಭವ’ ಎಂದು ಆಶೀರ್ವದಿಸಿದರು. ಮಕ್ಕಳಿಲ್ಲದ ಚಕ್ರವರ್ತಿ ತನಗೆ ಸಂತಾನವಾದರೆ ಅರ್ಧ ರಾಜ್ಯ ನೀಡುವುದಾಗಿ ಚೌಡೇಶ್ವರಿಯ ಆರಾಧಕರಿಗೆ ವಾಗ್ದಾನ ಮಾಡಿದರು ಎನ್ನಲಾಗಿದೆ.

ತಪಸ್ವಿಗಳ ವರದಿಂದ ನಂದನ ಚಕ್ರವರ್ತಿಗೆ ಪುತ್ರಭಾಗ್ಯ ಲಭಿಸಿತು. ಈ ವಿಷಯ ತಿಳಿದು ವಿಪ್ರರು ನಂದನ ರಾಜ್ಯಕ್ಕೆ ಬಂದು ಅರ್ಧ ರಾಜ್ಯವನ್ನು ಕೇಳಿದರು. ಆದರೆ ಚಕ್ರವರ್ತಿಯು ತಾನು ನೀಡಿದ್ದ ವಾಗ್ದಾನವನ್ನು ಮರೆತಿದ್ದ.

ಆಗ 6 ಸಾವಿರ ಮಂದಿ ವಿಪ್ರರು ನಿರಾಸೆಗೊಂಡು ತಾವುಗಳು ಹೊರಟಿದ್ದ ರಾಜ್ಯಗಳಿಗೆ ಹಿಂದಿರುಗದೇ ಅಲ್ಲಲ್ಲಿ ಚದುರಿ ಹೋದರು. ಕ್ರಮೇಣ ಚಕ್ರವರ್ತಿಗೆ ಜ್ಞಾನೋದಯವಾಗಿ ಚಕ್ರವರ್ತಿಯು ರಾಜ್ಯ ನೀಡಲು ಮುಂದಾದನು. ಆಗ ಶ್ರೀವತ್ಸವೇ ಮೊದಲವಾದ 13 ಗೋತ್ರಗಳಿಗೆ ಸೇರಿದ ಬ್ರಾಹ್ಮಣರಿಗೆಲ್ಲಾ ನಂದವರಂ ಪ್ರದೇಶವನ್ನು ಬಿಟ್ಟುಕೊಟ್ಟನು.

ಕ್ರಮೇಣ ಬ್ರಾಹ್ಮಣರು ರಾಜ್ಯದ ಜವಾಬ್ದಾರಿಯನ್ನು ತೊಗಟವೀರರಿಗೆ ವಹಿಸಿಕೊಟ್ಟರು. ದೇವಾಲಯದಲ್ಲಿನ ಚೌಡೇಶ್ವರಿ ದೇವಿಯ ಅರ್ಚನೆಯ ಜವಾಬ್ದಾರಿಯನ್ನು ಅವರಿಗೆ ನೀಡಿದರು. ಹಾಗಾಗಿ ಬ್ರಾಹ್ಮಣರಿಗೂ ಚೌಡೇಶ್ವರಿ ದೇವಾಲಯಕ್ಕೂ ತನ್ನದೇ ಆದ ನಂಟಿದ್ದು ಇದು ಇಂದಿಗೂ ನಡೆಯುತ್ತಿದೆ.

ದೇವಿಗೆ ವಿಶಿಷ್ಟ ಇತಿಹಾಸವಿದ್ದು, ಹೀಗೆ ಸ್ಥಾಪನೆಯಾದ ದೇವಾಲಯಗಳಲ್ಲಿ ಈ ದೇಗುಲವೂ ಒಂದಾಗಿದೆ. ದೇವಿಯ ಅರ್ಚನೆಯ ಜವಾಬ್ದಾರಿಯನ್ನು ತೊಗಟವೀರರಿಗೆ ನೀಡಿರುವುದು ವಿಶೇಷ. ನಂದವರಂನಿಂದ ಪ್ರಾರಂಭವಾದ ದೇವಾಲಯದ ಇತಿಹಾಸದ ಅಂಗವಾಗಿ ಆಂಧ್ರಪ್ರದೇಶದ ನಂದವರಂನಿಂದ ಚೌಡೇಶ್ವರಿ ಅಮ್ಮನವರ ಜ್ಯೋತಿಯನ್ನು ವಿಜಯದಶಮಿ ಉತ್ಸವಕ್ಕೆ ತರಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT