ಶುಕ್ರವಾರ, ಅಕ್ಟೋಬರ್ 30, 2020
28 °C

ಕುರುಬ ಸಮುದಾಯ ಎಸ್ಟಿಗೆ ಸೇರಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ಹಲವಾರು ಜಾತಿಗಳನ್ನು ಹಿಂದುಳಿದ ವರ್ಗದ ಪಟ್ಟಿಯಲ್ಲಿ ಸೇರಿಸುವುದರಿಂದ ಸೌಲಭ್ಯ ವಂಚಿತರಾಗುತ್ತಿರುವ ಕುರುಬ ಸಮುದಾಯವನ್ನು ಎಸ್ಟಿ ಪ್ರವರ್ಗಕ್ಕೆ ಸೇರ್ಪಡೆಗೊಳಿಸಬೇಕು’ ಎಂದು ಹಾಲುಮತ ಮಹಾಸಭಾ ರಾಜ್ಯ ಘಟಕ ಸಂಚಾಲಕ ಕುಂದಾಣ ಉಮೇಶ್ ಒತ್ತಾಯಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕುರುಬ ಸಮುದಾಯ 2011ರ ಜನಗಣತಿಯಂತೆ 3ನೇ ಸ್ಥಾನದಲ್ಲಿದೆ. 2021ಕ್ಕೆ ಜನಗಣತಿಯ ಅಂಕಿ ಅಂಶ ಬೆಳಕಿಗೆ ಬಂದರೆ ಸಂಖ್ಯೆಯಲ್ಲಿ ಇನ್ನಷ್ಟ ಹೆಚ್ಚಳವಾಗಲಿದೆ. ಪ್ರಾದೇಶಿಕ ವಲಯವಾರು ಹಿಂದುಳಿದ ವರ್ಗಗಳ ಪಟ್ಟಿಯನ್ನು ಗಮನಿಸಿದಾಗ ಒಂದೊಂದು ಜಿಲ್ಲೆಯಲ್ಲಿ 45 ರಿಂದ 50 ಜಾತಿಗಳನ್ನು ಹಿಂದುಳಿದ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಪೈಪೊಟಿ ನಡೆಸಬೇಕು. ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿಯು ಹೆಚ್ಚಳ ಮಾಡಿಲ್ಲ’ ಎಂದು ದೂರಿದರು.

‘ಕುರುಬ ಸಮುದಾಯ ಶೈಕ್ಷಣಿಕ, ಅರ್ಥಿಕ, ಔದ್ಯೋಗಿಕ ಮತ್ತು ರಾಜಕೀಯವಾಗಿಯೂ ಹಿಂದುಳಿದಿದೆ. ಉತ್ತರ ಕರ್ನಾಟಕ ಸೇರಿದಂತೆ ಇತರ ಬಯಲು ಸೀಮೆ ಪ್ರದೇಶಗಳಲ್ಲಿ ಕುರಿ ಸಾಕಾಣಿಕೆ ಮಾಡಿಕೊಂಡು ಅಲೆಮಾರಿಗಳಾಗಿದ್ದಾರೆ. ಬುಡಕಟ್ಟು ಸಂಸ್ಕೃತಿಯಲ್ಲಿ ಜೀವನ ನಡೆಸುತ್ತಿರುವ ಸಮುದಾಯಕ್ಕೆ ಶಿಕ್ಷಣದ ಜೊತೆಗೆ ಆರ್ಥಿಕ ಚೈತನ್ಯ ನೀಡಬೇಕು. ಅರ್ಹ ಕುಟುಂಬಗಳಿಗೆ ನಿವೇಶನ, ಸೂರು ಸಿಗಬೇಕಾದರೆ ಎಸ್ಟಿ ಪ್ರವರ್ಗಕ್ಕೆ ಸೇರ್ಪಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಬ್ರಿಟೀಷರ ಕಾಲದಲ್ಲಿಯು ಕುರುಬ ಸಮುದಾಯ ಬುಡಕಟ್ಟು ಜನಾಂಗದಡಿಯಲ್ಲಿ ಎಸ್ಟಿ ಪ್ರವರ್ಗಕ್ಕೆ ಸೇರಿಸಲಾಗಿತ್ತು. ಜೇನು ಕುರುಬ, ಕಾಡು ಕುರುಬ, ಗೊಂಡ, ರಾಜಗೊಂಡ ಇವರೆಲ್ಲರೂ ಕುರುಬ ಸಮುದಾಯಕ್ಕೆ ಸೇರಿದ್ದು ಕೊಡಗು ಜಿಲ್ಲೆಯಲ್ಲಿ ಮಾತ್ರ ಎಸ್ಟಿ ಪ್ರವರ್ಗಕ್ಕೆ ಸೇರಿಸಲಾಗಿದೆ. ಇದನ್ನು 30 ಜಿಲ್ಲೆಗೂ ವಿಸ್ತರಿಸಬೇಕು. ಎಸ್ಟಿ ಪ್ರವರ್ಗ ಮೀಸಲಾತಿಯನ್ನು ಶೇ 9ಕ್ಕೆ ಏರಿಸಬೇಕು ಎಂದು ಆಗ್ರಹಿಸಿದರು. ಹಾಲು ಮತ ಮಹಾ ಸಭಾ ಜಿಲ್ಲಾ ಘಟಕ ಅಧ್ಯಕ್ಷ ಎ.ರಾಮಾಂಜಿನಪ್ಪ, ತಾಲ್ಲೂಕು ಘಟಕ ಅಧ್ಯಕ್ಷ ಜಿ.ಸಿ.ಮುನಿರಾಜು, ಮುಖಂಡರಾದ ಮಂಜುನಾಥ್, ನವೀನ್ ಕುಮಾರ್, ಕೆ. ಪ್ರವೀಣ್ ಕುಮಾರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು