ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾಪ್ರಭುತ್ವ ದಿನ: 60 ಸಾವಿರ ಮಂದಿಯಿಂದ 77 ಕಿ.ಮೀ ಮಾನವ ಸರಪಳಿ

ಪ್ರಜಾಪ್ರಭುತ್ವ ಮೌಲ್ಯ ಉಳಿಯದಿದ್ದರೆ ದೇಶಕ್ಕೆ ಕಂಟಕ: ಮುನಿಯಪ್ಪ
Published : 15 ಸೆಪ್ಟೆಂಬರ್ 2024, 15:37 IST
Last Updated : 15 ಸೆಪ್ಟೆಂಬರ್ 2024, 15:37 IST
ಫಾಲೋ ಮಾಡಿ
Comments

ದೊಡ್ಡಬಳ್ಳಾಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ಅಂಗವಾಗಿ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಏಕಕಾಲಕ್ಕೆ ಹಮ್ಮಿಕೊಂಡಿದ್ದ ಮಾನವ ಸರಪಳಿ ರಚನೆಗೆ ತಾಲ್ಲೂಕಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ನೆಲಮಂಗಲ ತಾಲ್ಲೂಕಿನಲ್ಲಿ ಹಳೆ ನಿಜಗಲ್‌ನಿಂದ ಪ್ರಾರಂಭವಾಗಿ ದಾಬಸ್‌ಪೇಟೆ ಇಂದ ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದ ಮೂಲಕ ತಾಲ್ಲೂಕಿನ ಹೆಗ್ಗಡಿಹಳ್ಳಿ ಕ್ರಾಸ್‌ ವರೆಗೆ 77 ಕಿ.ಮೀ ಮಾನವ ಸರಪಳಿ ರಚಿಸಲಾಗಿತ್ತು. ಇದರಲ್ಲಿ 60 ಸಾವಿರ ಮಂದಿ ಪಾಲ್ಗೊಂಡಿದ್ದರು.

ಯುವಕ–ಯುವತಿಯರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ–ಸಂಸ್ಥೆಯವರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಮಾನವ ಸರಪಳಿಯಲ್ಲಿ ಕೈ ಹಿಡಿದು, ಜೊತೆಯಾದರು. ಎಲ್ಲಾ ಇಲಾಖೆಗಳು, ಬೆಸ್ಕಾಂ, ನಗರಸಭೆ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಸಿಬ್ಬಂದಿ ಕೈ ಜೋಡಿಸಿದರು.

ಜಿಲ್ಲೆಯಲ್ಲಿ ಏಕಕಾಲದಲ್ಲಿ ಎರಡು ಕಡೆ ಮಾನವ ಸರಪಳಿ ರಚಿಸಲಾಯಿತು. ಮೊದಲ ಭಾಗದಲ್ಲಿ ನೆಲಮಂಗಲ ತಾಲ್ಲೂಕಿನ ಹಳೆ ನಿಜಗಲ್‌ ನಿಂದ ಪ್ರಾರಂಭವಾಗಿ ದಾಬಸ್‌ಪೇಟೆ ಮುಖಾಂತರ ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಗ್ಗಡಿಹಳ್ಳಿ ಕ್ರಾಸ್‌ ವರೆಗೆ 54 ಕಿಮೀ ಸರಪಳಿ ರಚನೆಯಾಗಿದೆ. ಎರಡನೇ ಭಾಗದಲ್ಲಿ ಹೊಸಕೋಟೆ ತಾಲ್ಲೂಕಿನ ವೆಂಕಟಪುರದಿಂದ ಪ್ರಾರಂಭಿಸಿ ಮುಗಬಾಳ ಮುಖಾಂತರ ಹೊಸಕೋಟೆಯ ದೊಡ್ಡಮಾನಿಕೆರೆಯವರೆಗೆ 23 ಕಿಲೋಮೀಟರ್‌ ಸೇರಿ ಒಟ್ಟು 77 ಕಿಮೀ ವರೆಗೆ ಮಾನವ ಸರಪಳಿ ಯಶಸ್ವಿಯಾಗಿದೆ ಎಂದು ಜಿಲ್ಲಾಧಿಕಾರಿ ಎನ್‌.ಶಿವಶಂಕರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ತಾಲ್ಲೂಕಿನ ಹೆಗ್ಗಡಿಹಳ್ಳಿ ಭಾನುವಾರ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಉದ್ಘಾಟಿಸಿದರು.

ಬಳಿಕ ಮಾತನಾಡಿ, ಸಮಾನತೆ, ಭಾತೃತ್ವ  ಸಂದೇಶ ಸಾರುವ ಪ್ರಜಾಪ್ರಭುತ್ವದ ಮೌಲ್ಯವನ್ನು ಉಳಿಸಿಕೊಳ್ಳದಿದ್ದರೆ ದೇಶಕ್ಕೆ ಕಂಟಕ ಎದುರಾಗಲಿದೆ ಎನ್ನುವ ಎಚ್ಚರಿಕೆ ಸದಾ ನಮ್ಮಲ್ಲಿ ಇರಬೇಕು ಎಂದು ಹೇಳಿದರು.

ಡಾ.ಬಿ.ಆರ್‌ ಅಂಬೇಡ್ಕರ್‌ ಅವರು ದೇಶಕ್ಕೆ ಮಹಾನ್‌ ಸಂವಿಧಾನ ರೂಪಿಸಿದ್ದಾರೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಅಂಬೇಡ್ಕರ್‌ ಅವರ ಆಶಯಗಳಿಗೆ ಅನುಗುಣವಾಗಿ ಎಲ್ಲಾ ವರ್ಗದ ಜನರು ಭಾವೈಕ್ಯತೆಯಿಂದ ಬದುಕಬೇಕು. ಆಗಲೇ ಪ್ರಜಾಪ್ರಭುತ್ವದ ಉಳಿವು ಸಾಧ್ಯ. ಮಹಾತ್ಮ ಗಾಂಧಿ ಚಿಂತನೆಯನ್ನು ನಾವೆಲ್ಲ ಪಾಲಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎನ್‌.ಅನುರಾಧ, ಉಪವಿಭಾಗಾಧಿಕಾರಿ ಎನ್‌.ದುರ್ಗಾಶ್ರೀ, ಜಿಲ್ಲಾ ಗ್ಯಾರಂಟಿ ಅನುಷ್ಠಾನಗಳ ಅಧ್ಯಕ್ಷ ಬಿ.ರಾಜಣ್ಣ, ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ವಿ. ಶಾಂತಕುಮಾರ್, ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ತಹಶೀಲ್ದಾರ್‌ ವಿಭಾ ವಿದ್ಯಾ ರಾಥೋಡ್, ದೇವನಹಳ್ಳಿ ತಹಶೀಲ್ದಾರ್‌ ಬಾಲಕೃಷ್ಣ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್‌.ಮುನಿರಾಜು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್‌.ರವಿಕುಮಾರ್, ಪೌರಾಯುಕ್ತ ಕಾರ್ತಿಕ್‌ ಈಶ್ವರ್, ಕಾಂಗ್ರೆಸ್‌ ಪಕ್ಷದ ತೂಬಗೆರೆ ಬ್ಲಾಕ್‌ ಅಧ್ಯಕ್ಷ ಎನ್‌.ರಂಗಪ್ಪ, ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷ ಮುನಿಕೃಷ್ಣಪ್ಪ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಎಸ್‌.ಆರ್‌.ಮುನಿರಾಜ್‌, ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಕೆ.ಪಿ.ಜಗನ್ನಾಥ್‌, ಲಕ್ಷ್ಮೀಕಾಂತ್‌ ಇದ್ದರು.

ಮಾನವ ಸರಪಳಿಯಲ್ಲಿ ಭಾಗವಹಿಸಿದ್ದ ಶಾಲಾ–ಕಾಲೇಜು ವಿದ್ಯಾರ್ಥಿಗಳು
ಮಾನವ ಸರಪಳಿಯಲ್ಲಿ ಭಾಗವಹಿಸಿದ್ದ ಶಾಲಾ–ಕಾಲೇಜು ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT