ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ದುರಾಡಳಿತದಿಂದ ಸಂವಿಧಾನ ಆಶಯಕ್ಕೆ ಧಕ್ಕೆ: ರಾಮ್‌ ಜಿ ಗೌತಮ್‌

ಬಿಎಸ್‌ಪಿ ಬೆಂಗಳೂರು ವಿಭಾಗ ಮಟ್ಟದ ಸಮಾವೇಶ
Published 10 ಮಾರ್ಚ್ 2024, 4:58 IST
Last Updated 10 ಮಾರ್ಚ್ 2024, 4:58 IST
ಅಕ್ಷರ ಗಾತ್ರ

ದೇವನಹಳ್ಳಿ: ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನ ಬದಲಾಯಿಸುವ ಕುತಂತ್ರವನ್ನು ನಡೆಸುತ್ತಿದೆ. ಕಳೆದ 10 ವರ್ಷದಿಂದ ಸಂವಿಧಾನದ ಆಶಯಕ್ಕೆ ಚ್ಯುತಿ ಬರುವಂತಹ ಆಡಳಿತದಲ್ಲಿ ನಡೆಸುತ್ತಿದೆ ಎಂದು  ಎಂದು ರಾಜ್ಯಸಭೆ ಸದಸ್ಯ ರಾಮ್‌ ಜಿ ಗೌತಮ್‌ ಆರೋಪಿಸಿದರು.

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್ ಭವನದಲ್ಲಿ ಶನಿವಾರ ಬಹುಜನ ಸಮಾಜ ಪಾರ್ಟಿ ಹಮ್ಮಿಕೊಂಡಿದ್ದ ‘ಸಂವಿಧಾನ ಸಂರಕ್ಷಣೆ ಮತ್ತು ಸಂಪೂರ್ಣ ಜಾರಿಗಾಗಿ ಬಹುಜನರ ನಡಿಗೆ ಪಾರ್ಲಿಮೆಂಟಿನ ಕಡೆಗೆ’ ಬೆಂಗಳೂರು ವಿಭಾಗ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಈ ಹಿಂದೆ ಬಿಜೆಪಿ ಸರ್ಕಾರ ಸಂವಿಧಾನ ಬದಲಾವಣೆಗೆ ಕೈ ಹಾಕಿದಕ್ಕೆ ಕಾನ್ಶಿರಾಂ ಅವರ ಹೋರಾಟದ ಫಲವಾಗಿ ಸುಮ್ಮನಾಗಿದ್ದರು. ಆದರೆ, 2014ರಿಂದ ಅಧಿಕಾರಕ್ಕೆ ಬಂದ ಬಳಿಕ ಸಂವಿಧಾನ ವಿರೋಧಿ ಕೃತ್ಯ ಮುಂದುವರೆದಿದೆ. ಸುಳ್ಳಿನ ಮೂಲಕ ಜನರನ್ನು ಮರಳು ಮಾಡುತ್ತಿದ್ದಾರೆ. ₹15 ಲಕ್ಷ ಪ್ರತಿಯೊಬ್ಬರ ಖಾತೆಗೆ ಹಾಕುವ ಭರವಸೆ ಹುಸಿಯಾಗಿದೆ’ ಎಂದು ಹರಿಹಾಯ್ದರು.

₹500, ₹1000 ಮುಖ ಬೆಲೆಯ ನೋಟು ಅಮಾನ್ಯ ಮಾಡಿದ್ದರಿಂದ ಯಾವ ಕಪ್ಪು ಹಣವೂ ಹೊರಗೆ ಬರಲಿಲ್ಲ. ಅದರ ಬದಲು ಕೂಲಿ, ಬಡ ಕಾರ್ಮಿಕರು ಇನ್ನಷ್ಟು ಪಡು ಪಡುವಂತಾಯಿತು. ಉದ್ಯೋಗ ಸೃಷ್ಟಿಸುತ್ತೇವೆ ಎಂದು ಬಿಜೆಪಿಗರು ಅಧಿಕಾರಕ್ಕೆ ಬಂದರೂ, ಈ ವರೆಗೂ ₹4.5 ಕೋಟಿ ಉದ್ಯೋಗ ಕಡಿತವಾಗಿದೆ. ಲಕ್ಷಾಂತರ ಕಂಪನಿಗಳು ಮುಚ್ಚಿ ಹೋಗಿದೆ ಎಂದು ಆರೋಪಿಸಿದರು.

ಬಿಎಸ್‌ಪಿ ರಾಜ್ಯ ಘಟಕ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಮಾತನಾಡಿ, ಸರ್ಕಾರಿ ಕಂಪನಿಗಳ ಖಾಸಗೀಕರಣ ಮಾಡಿ ಮೀಸಲಾತಿಗೆ ರದ್ದುಗೊಳ್ಳಿಸುವ ಹುನ್ನಾರ ನಡೆದಿದೆ ಎಂದು ದೂರಿದರು.

ದೇಶದ್ಲಲಿ ನಿರಂತರವಾಗಿ ಆರ್ಥಿಕ ಶೋಷಣೆ ನಡೆಯುತ್ತಿದ್ದು, ಅದಾನಿ, ಅಂಬಾನಿಯ ಅಂತಹ ಶ್ರೀಮಂತರ ಸಂಪತ್ತು ಮೊದಲಿಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಉಸ್ತುವಾರಿ ನಂದಿಗುಂದ ಪಿ.ವೆಂಕಟೇಶ್‌ ಮಾತನಾಡಿ, ಸಣ್ಣ ಪುಟ್ಟ ವಸ್ತುಗಳಿಗೆ ಜಿಎಸ್‌ಟಿ ವಿಧಿಸಿ, ದುರಾಡಳಿತ ನಡೆಸುತ್ತಿದೆ. ಅದನ್ನು ಖಂಡಿಸಿದವರ ಮೇಲೆ ಐ.ಟಿ, ಇ.ಡಿ ದಾಳಿ ನಡೆಸುತ್ತಿದ್ದಾರೆ. ಕೋಮುವಾದಿ ಅಧಿಕಾರಿಗಳಿಗೆ ಬಡ್ತಿ ನೀಡಿ, ನಿಷ್ಠಾವಂತರನ್ನು ಜೈಲಿಗೆ ಅಟ್ಟಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸಂಯೋಜಕರು ನಿತಿನ್‌ ಸಿಂಗ್, ಗೋಪಿನಾಥ್‌, ಕೃಷ್ಣಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್‌.ಮುನಿಯಪ್ಪ, ಜಿಲ್ಲಾಧ್ಯಕ್ಷ ಮಹದೇವ್, ಮುಖಂಡರಾದ ಚಿನ್ನಪ್ಪ ಚಿಕ್ಕಹಾಗಡೆ, ರೇವತಿ ರಾಜ್‌ ಇದ್ದರು.

ಅಲ್ಪಸಂಖ್ಯಾತ ದಲಿತರ ವಿರೋಧಿಯಾದ ಕಾಂಗ್ರೆಸ್‌ 

ದಲಿತರ ಅಭಿವೃದ್ಧಿಗೆ ಮೀಸಲಾಗಿದ್ದ ₹11 ಸಾವಿರ ಕೋಟಿಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿಗೆ ಉಪಯೋಗಿಸಿಕೊಂಡಿದೆ. ಸಂವಿಧಾನ ರಕ್ಷಣೆಗೆ ಜಾಥಾ ನಡೆಸಿ ಪರಿಶಿಷ್ಟರ ಹಣ ಖಾಲಿ ಮಾಡುತ್ತಿದೆ.  ಗ್ಯಾರೆಂಟಿಗಳು ತಾತ್ಕಲಿಕವಾಗಿದ್ದು ಸಂವಿಧಾನದ ಆಶಯ ಈಡೇರಬೇಕಾದರೇ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳು ಯಥಾವತ್ತಾಗಿ ರಾಜ್ಯದಲ್ಲಿ ಚಾರಿಯಾಗಬೇಕು. ಅಲ್ಪಸಂಖ್ಯಾತರು ರಾಜಕೀಯ ಪ್ರಾತಿನಿಧ್ಯ ಪಡೆದು ಅವರ ಹಕ್ಕುಗಳಿಗಾಗಿ ಆಡಳಿತದ ಭಾಗವಾಗಬೇಕು ಎಂದು ನಂದಿಗುಂದ ವೆಂಕಟೇಶ್‌ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT