ಗುರುವಾರ , ಸೆಪ್ಟೆಂಬರ್ 23, 2021
22 °C
ಇನ್ನೂ ಮುಗಿಯದ ಸಂಚಾರ ಸಂಕಟ 

ದೇವನಹಳ್ಳಿ | ಬೈಪಾಸ್ ರಸ್ತೆ ಕಾಮಗಾರಿ ನನೆಗುದಿಗೆ

ವಡ್ಡನಹಳ್ಳಿ ಬೊಜ್ಯಾನಾಯ್ಕ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಹಲವು ವರ್ಷಗಳ ಹಿಂದೆ ಆರಂಭಗೊಂಡಿರುವ ರಾಷ್ಟ್ರೀಯ ಹೆದ್ದಾರಿ–207ರ ಬೈಪಾಸ್ ರಸ್ತೆ ಅಭಿವೃದ್ಧಿ ಕಾಮಗಾರಿ ನನೆಗುದಿ ಬಿದ್ದಿರುವ ಪರಿಣಾಮ ನಗರದಲ್ಲಿ ದಿನನಿತ್ಯ ವಾಹನಗಳ ಸಂಚಾರ ಸಂಕಟ ಅನುಭವಿಸುವಂತಾಗಿದೆ ಎಂಬುದು ಸಾರ್ವಜನಿಕರ ದೂರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ 2009–10ನೇ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ದಾಬಸ್‌ಪೇಟೆಯಿಂದ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊರವಲಯದ ಬೈಪಾಸ್ ರಸ್ತೆ ಮೂಲಕ ಸೂಲಿಬೆಲೆ ಮಾರ್ಗವಾಗಿ ಹೊಸಕೋಟೆಯವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣ ಮಾಡಲು ರಸ್ತೆ ಬದಿಯಲ್ಲಿದ್ದ ಶತಮಾನಗಳಷ್ಟು ಹಳೆಯ ಸಾವಿರಾರು ಮರಗಳನ್ನು ಕಡಿದು ರಸ್ತೆ  ವಿಸ್ತರಿಸುವ ಕಾಮಗಾರಿ ಆರಂಭಿಸಿತ್ತು.

ದಶಕಗಳಿಂದ ಸರಕು ಸಾಗಾಣಿಕೆ ವಾಹನಗಳ ಸಂಖ್ಯೆ ಹೆಚ್ಚಳದ ಜತೆಗೆ ನಗರದಲ್ಲಿ ಸಂಚಾರ ಅಸ್ತವ್ಯಸ್ತಗೊಳ್ಳುವುದು ಒಂದೆಡೆ. ಪ್ರಸ್ತುತ ವಾಹನಗಳ ಸಂಚರಿಸುವ ರಸ್ತೆ ನಗರದ ಮಧ್ಯಭಾಗದಲ್ಲಿರುವುದರಿಂದ ರಸ್ತೆ ದಾಟಲು ಪಾದಚಾರಿಗಳಿಗೆ ಕಿರಿಕಿರಿಯಾಗುತ್ತಿದೆ ಎಂಬುದು ಸ್ಥಳೀಯರ ಆರೋಪ.

ವಿಸ್ತರಿಸಿದ ರಸ್ತೆಯ ಜತೆಗೆ ದೊಡ್ಡಬಳ್ಳಾಪುರ ಕಡೆಯಿಂದ ಬರುವಾಗ ಸಿಗುವ ಶೆಟ್ಟರಹಳ್ಳಿ ಗೇಟ್ ಬಳಿ ಬೈಪಾಸ್ ರಸ್ತೆ ನಿರ್ಮಾಣ ಮಾಡಲು ಹೆದ್ದಾರಿ ಪ್ರಾಧಿಕಾರ ಭೂ ಸ್ವಾಧೀನ ಮಾಡಿಕೊಂಡಿದೆ. ಆರಂಭದಲ್ಲಿ ಬಿರುಸುಗೊಂಡಿದ್ದ ಕಾಮಗಾರಿ ನಂತರ ಮಂದಗತಿಯಲ್ಲಿ ಸಾಗಿ ಕಳೆದ ಆರು ವರ್ಷಗಳಿಂದ ಸಂಪೂರ್ಣ ಸ್ಥಗಿತಗೊಂಡಿದೆ. ದಶಕಗಳಿಂದ ಕಾಮಗಾರಿ ಪೂರ್ಣಗೊಳಿಸಿದ್ದರೆ ಯೋಜನೆ ಜಾರಿಗೊಳಿಸಿದ ಅರ್ಥವೇನು? ಮರಗಳ ಹನನ ಮಾಡಬೇಕಾದ ಅವಶ್ಯಕತೆ ಇರಲಿಲ್ಲ. ಸಾವಿರಾರು ಮರಗಳನ್ನು ಬೆಳೆಸುವುದೆಂದರೆ ಒಂದೆರಡು ದಿನಗಳ ಮಾತಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸಾರ್ವಜನಿಕರು.

ಬೆಂಗಳೂರು, ಹೈದರಾಬಾದ್, ದೊಡ್ಡಬಳ್ಳಾಪುರ, ಕೋಲಾರ, ಸೂಲಿಬೆಲೆ, ಹೊಸಕೋಟೆಗಳಿಗೆ ಸಂಪರ್ಕ ಕಲ್ಪಿಸುವ ದೇವನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ಹೆಚ್ಚುತ್ತಿರುವ ಸಂಚಾರ ವ್ಯವಸ್ಥೆಗೆ ಸಾಧ್ಯವಾದಷ್ಟು ಕಡಿವಾಣ ಹಾಕಿ ಸ್ಥಳೀಯರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮತ್ತು ದಾಬಸ್‌ಪೇಟೆಯಿಂದ ನೆಲಮಂಗಲ ಮಾರ್ಗವಾಗಿ ಬೆಂಗಳೂರು ನಗರದ ವೈಟ್‌ಫೀಲ್ಡ್‌, ತಮಿಳುನಾಡು– ಹೊಸೂರಿಗೆ ಹೊಗುವಾಗ ಬೆಂಗಳೂರು ನಗರದಲ್ಲಿ ಸಂಚಾರ ಕಡಿಮೆ ಮಾಡಲು ಹೆದ್ದಾರಿ ಪ್ರಾಧಿಕಾರ ಸರಕು ಸಾಗಾಣಿಕೆ ವಾಹನಗಳ ಸಂಚಾರ ಗಣತಿ ನಡೆಸಿ ರಸ್ತೆ ವಿಸ್ತರಣೆ ಜತೆಗೆ ನಗರದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಿಸುವ ಉದ್ದೇಶ ಹೊಂದಿದೆ.

ಈ ರಸ್ತೆಯು ವನಕನಹಳ್ಳಿ ಗ್ರಾಮದ ಪಕ್ಕದಲ್ಲಿ ಹಾದು ಸಹಾಯಕ ಸಾರಿಗೆ ಇಲಾಖೆ ಕಚೇರಿ ಹಿಂಭಾಗದ ಮಾರ್ಗವಾಗಿ ಸಾಗುತ್ತದೆ. ನಂತರ ಪ್ರಥಮದರ್ಜೆ ಕಾಲೇಜು ಮುಂಭಾಗ ಸೌತೇಗೌಡನಹಳ್ಳಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 207ರ ಸೂಲಿಬೆಲೆ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.

‘ಒಟ್ಟಾರೆ 8 ಕಿ.ಮೀ ಬೈಪಾಸ್ ಕಾಮಗಾರಿ ಮುಗಿದ್ದಿದ್ದರೆ ಶೇ 50ರಷ್ಟು ವಾಹನಗಳು ದೇವನಹಳ್ಳಿ ನಗರಕ್ಕೆ ಪ್ರವೇಶ ಪಡೆಯದೆ ನೇರವಾಗಿ ನಿಗದಿತ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಕಾಮಗಾರಿ ಸ್ಥಗಿತಗೊಂಡ ಪರಿಣಾಮ ನಗರದಲ್ಲಿ ಪ್ರತಿನಿತ್ಯ ಸಂಚಾರ ಅಸ್ತವ್ಯಸ್ತವಾಗುತ್ತಿದೆ’ ಎಂಬುದು ಸ್ಥಳೀಯ ಜಿ.ವೆಂಕಟೇಶ್‌ ಯಾದವ್‌ ಅವರ ಆರೋಪ.

‘ಪೆಟ್ರೋಲ್, ಡೀಸೆಲ್‌ ಟ್ಯಾಂಕರ್‌ಗಳು ಶಿರಾ, ಹಿರಿಯೂರು, ಗುಬ್ಬಿ, ತಿಪಟೂರು ತುಮಕೂರು ಕಡೆಯಿಂದ ಇದೇ ಮಾರ್ಗದಲ್ಲಿ ಹಾದು ವೈಟ್ ಫೀಲ್ಡ್ ಬಳಿ ಇರುವ ಇಂಧನ ಪೂರೈಕೆ ಘಟಕದಲ್ಲಿ ತುಂಬಿಸಿಕೊಂಡು ಹೋಗುತ್ತವೆ. ಪ್ರತಿ ದಿನ ಕನಿಷ್ಠ 275ರಿಂದ 300 ಟ್ಯಾಂಕರ್‌ಗಳು ಸಂಚರಿಸುತ್ತವೆ, ಕಲ್ಲು, ಜಲ್ಲಿ, ಇಟ್ಟಿಗೆ, ಮರಳು, ಎಂ.ಸ್ಯಾಂಡ್, ಕಾಂಕ್ರೀಟ್ ಮಿಶ್ರಣ ತುಂಬಿದ ಭಾರಿ ವಾಹನಗಳ ಸಂಚಾರ, ಸರಕು ಸಾಗಾಣಿಕೆ ವಾಹನಗಳಿಗೂ ಕೊರತೆ ಇಲ್ಲ. ಸ್ಥಳೀಯ ವಾಹನಗಳ ಸವಾರರು ಮತ್ತು ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾಗಿದೆ. ಕೊರೊನ ಸೋಂಕಿನ ಕಡಿವಾಣಕ್ಕಾಗಿ ಲಾಕ್ ಡೌನ್ ನಿಂದ ಸಂಚಾರ ವ್ಯವಸ್ಥೆ ಅಷ್ಟಾಗಿ ಇರಲಿಲ್ಲ. ಈಗ ಲಾಕ್ ಡೌನ್ ಸಡಿಲಗೊಂಡಿರುವುದರಿಂದ ಸಾಧ್ಯವಿಲ್ಲದಷ್ಟು ವಾಹನಗಳ ಸಂಚಾರ, ಕರ್ಕಶ ಶಬ್ದ ,ಅತಿವೇಗ ನೋಡಿ ಭಯವಾಗುತ್ತೆ ಯಾರಿಗೆ ಹೇಳೋದು ಸಮಸ್ಯೆ’ ಎನ್ನುತ್ತಾರೆ ಪುಟ್ಟಪ್ಪನ ಗುಡಿ ಬೀದಿ ನಿವಾಸಿ ಆಂಜಿನಪ್ಪ.

‘ಇತರ ಜಿಲ್ಲೆಗಳಿಂದ ಬರುವ ವಾಹನಗಳು ಮತ್ತು ಸ್ಥಳೀಯವಾಗಿ ಸಂಚರಿಸುವ ವಾಹನಗಳಿಂದ ವಿಪರೀತ ದೂಳು ಹೆಚ್ಚಾಗಿ ಪರಿಸರ ಹಾಳಾಗುತ್ತಿದೆ. ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಎಲ್ಲೆಂದರಲ್ಲಿ ರಸ್ತೆ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ರಸ್ತೆಗಿಳಿಯುವ ವಾಹನಗಳ ಜೊತೆಗೆ ಸ್ಥಳೀಯ ವಾಹನ ಸವಾರರಿಗೆ ಜಾಗದ ಕೊರೆತೆಯಿಂದ ಸಂಚಾರದಲ್ಲಿ ಏರುಪೇರು ಆಗುತ್ತದೆ. ಹತ್ತಾರು ವರ್ಷಗಳ ಕಾಮಗಾರಿಗೆ ಮುಕ್ತಿ ದೊರೆಯದಿದ್ದರೆ ಹೇಗೆ? ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಎಚ್ಚೆತ್ತು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ’ ಎನ್ನುತ್ತಾರೆ ಮುಖಂಡ ಡಿ.ವಿ.ಕೃಷ್ಣಮೂರ್ತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು