ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಬ್ಬಾಣ ಎಂಬ ಮುಕ್ತಿ ಪಡೆಯುವುದೇ ನೈಜ ಧಮ್ಮ’

ಚೌಡಪ್ಪನಹಳ್ಳಿ ಅಶೋಕ ಬುದ್ಧ ವಿಹಾರದಲ್ಲಿ ಧಮ್ಮಚಕ್ರ ಪ್ರವರ್ತನ ದಿನಾಚರಣೆ
Last Updated 31 ಜುಲೈ 2019, 14:01 IST
ಅಕ್ಷರ ಗಾತ್ರ

ವಿಜಯಪುರ : 'ಹುಟ್ಟು ಸಾವುಗಳೆಂಬ ಸಂಸಾರವನ್ನು ದಾಟಿ ನಿಬ್ಬಾಣ ಎಂಬ ಮುಕ್ತಿಯನ್ನು ಪಡೆಯುವುದು ನಿಜವಾದ ಧಮ್ಮ' ಎಂದು ಚೌಡಪ್ಪನಹಳ್ಳಿಯ ಅಶೋಕ ಬುದ್ಧ ವಿಹಾರದ ಜ್ಞಾನಲೋಕ ಭಂತೇಜಿ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ಚೌಡಪ್ಪನಹಳ್ಳಿ ಅಶೋಕ ಬುದ್ಧ ವಿಹಾರದಲ್ಲಿ ಸಮ್ಮಾಸಂಬುದ್ಧ ಬುದ್ಧಬಿಕ್ಕುಗಳ ಸಂಘ ಹಾಗೂ ಲುಂಬಿನಿ ಸೇವಾ ಟ್ರಸ್ಟ್, ವತಿಯಿಂದ ಆಯೋಜಿಸಿದ್ದ ಧಮ್ಮಚಕ್ಕ ಪವತ್ತನ (ಧಮ್ಮಚಕ್ರ ಪ್ರವರ್ತನ) ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಭವಚಕ್ರವನ್ನು ಸುರಕ್ಷಿತ ಮಾರ್ಗದ ಮೇಲೆ ಉರುಳಿಸುತ್ತ ಗುರಿ ತಲುಪಬೇಕು. ಭಗವನಾ ಬುದ್ಧರು ಧಮ್ಮ ಅನುಸರಿಸುವ ಎಲ್ಲರಿಗೂ ಅಮೃತ ದ್ವಾರವು ತೆರೆದಿದೆ. ಅದರ ಲಾಭವನ್ನು ಪಡೆದುಕೊಂಡು ಅನುಭವಿಸಲು ಮಾನವನ ಮನಸ್ಸು ಸಿದ್ಧಗೊಳ್ಳಬೇಕು ಎಂದು ಹೇಳಿದ್ದಾರೆ’ ಎಂದರು.

‘ದಶ ಸಹಸ್ರಲೋಕಕ್ಕೆ ಸಂದೇಶವನ್ನು ಬಿತ್ತರಿಸಿದ ದಿನ ಮಹಾಬೋಧಿಯನ್ನು ಪಡೆದ ದಿನವಾಗಿದೆ. ಮಾನವ ಜನ್ಮದಲ್ಲಿ ಸುಖವನ್ನು ಬಯಸಿದರೂ ಅದು ಸಿಗುವ ದಾರಿಯನ್ನು ಹುಡುಕಬೇಕಾಗಿರುವ ಮಾರ್ಗದಿಂದ ಜನರು ವಿಮುಖರಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ’ ಎಂದರು.

ಮೈಸೂರು ಕಾಡಕೋಳ ಬುದ್ಧವಿಹಾರದ ವೀರ್ಯಶೀಲ ಭಂತೇಜಿ ಮಾತನಾಡಿ, ‘ಬುದ್ಧನು ಬೌದ್ಧಧರ್ಮದ ಸಂಸ್ಥಾಪಕ. ಮಾತ್ರವಲ್ಲ, ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕರಾಗಿದ್ದಾರೆ’ ಎಂದು ಹೇಳಿದರು.

ಧ್ಯಾನ ಮಾರ್ಗವು ದುಃಖ ಮತ್ತು ಪಾಪ ಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವರಾಗಿದ್ದಾರೆ ಎಂದರು.

ಸಂಶೋಧನೆ, ತಿಳಿವಳಿಕೆ, ಅನುಭವಿಸುವಿಕೆ ಮತ್ತು ಅದನ್ನು ಮತ್ತೆ ಅರ್ಥ ಮಾಡಿಕೊಳ್ಳುವುದೇ ಬೌದ್ಧಧರ್ಮವಾಗಿದೆ. ಬುದ್ಧನು ಬೋಧಿಸಿದ್ದು ದುಃಖದಿಂದ ಹೊರಬರುವ ಮಾರ್ಗವನ್ನು ಮಾತ್ರ. ಇದನ್ನೇ ಅವರು ಪಾಲಿ ಭಾಷೆಯಲ್ಲಿ ಧಮ್ಮ ಎಂದು ಕರೆದರು. ತಾನು ಬೋಧಿಸುತ್ತಿರುವುದರಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡವರಲ್ಲಿ ತಾನು ಮೊದಲನೆಯವನೂ ಅಲ್ಲ, ಕೊನೆಯವನೂ ಅಲ್ಲವೆಂದು ಸಾರಿದ್ದರು ಎಂದು ಹೇಳಿದರು.

ಬುದ್ಧಿಸ್ಟ್ ಇಂಟರ್ ನ್ಯಾಷನಲ್ ನೆಟ್‌ವರ್ಕ್ ರಾಜ್ಯ ಶಾಖೆಯ ಅಧ್ಯಕ್ಷ ಎಸ್.ಸಿದ್ಧಾರ್ಥ್ ಮಾತನಾಡಿ, ‘ಯಾರು ಬೇಕಾದರೂ ಬುದ್ಧನ ಮಾರ್ಗವನ್ನು ಅನುಸರಿಸಿ ದುಃಖದಿಂದ ಮುಕ್ತರಾಗಬಹುದು. ಬುದ್ಧರಂತೆ ಎಚ್ಚರದ ಸ್ಥಿತಿಯನ್ನು ಹೊಂದಬಹುದು. ಆದರೆ ಈ ಸಿದ್ಧಿಗೆ ಸ್ವಂತ ಪ್ರಯತ್ನ, ಸಾಧನೆ ಮಾತ್ರ ಕಾರಣ ಎಂದು ಹೇಳಿದ ಬುದ್ಧರು, ಸತತ ಎಚ್ಚರದ ಸ್ಥಿತಿಯನ್ನು ಸಾಧಿಸಿದ ಯಾರನ್ನು ಬೇಕಾದರೂ ಬುದ್ಧನೆಂದು ಕರೆಯಬಹುದು ಎಂದು ತಿಳಿಸಿದ್ದಾರೆ’ ಎಂದು ವಿವರಿಸಿದರು.

ಮುಖಂಡ ಚೌಡಪ್ಪನಹಳ್ಳಿ ಲೋಕೇಶ್, ಎಸ್.ಸಿದ್ಧರಾಜು, ವಕೀಲ ಮಹೇಶ್‌ ದಾಸ್, ಡಾ. ಜ್ಞಾನಕುಮಾರ್, ಬಿ.ಎಂ.ಮುನಿರಾಜು, ಹ.ರಾ.ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT