ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಜನ ನಮ್ಮ ಧ್ವನಿ | ದೊಡ್ಡಬಳ್ಳಾಪುರ: ಯಾರಿಗಾಗಿ ಶಾಶ್ವತ ನೀರಾವರಿ ಯೋಜನೆ?

ಒಂದೆಡೆ ಕೈಗಾರಿಕಾ ಉದ್ದೇಶಕ್ಕೆ ಕೃಷಿ ಭೂಮಿ ಸ್ವಾಧೀನ; ಮತ್ತೊಂಡೆ ನೀರಾವರಿ ಭರವಸೆ । ಬಾರದ ಎತ್ತಿನ ಹೊಳೆ ನೀರು
Published 13 ಮೇ 2024, 3:34 IST
Last Updated 13 ಮೇ 2024, 3:34 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಒಂದೆಡೆ ಸರ್ಕಾರ ಫಲವತ್ತಾದ ಕೃಷಿಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನ ಮಾಡಿಕೊಳ್ಳುತ್ತಿದೆ. ಮತ್ತೊಂದೆಡೆ ರೈತರ ಹಿತ ಕಾಯಲು ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರುತ್ತೇವೆ ಎಂದು ರಾಜಕೀಯ ಮುಖಂಡರು ರಾಜಕೀಯ ಸಮಾವೇಶಗಳಲ್ಲಿ ಭರವಸೆ ನೀಡುತ್ತಲೆ ಇದ್ದಾರೆ. ಕೃಷಿಗೆ ಯೋಗ್ಯವಲ್ಲದ ಜಮೀನು ಸೇರಿದಂತೆ ಕೆಐಎಡಿಬಿ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದೆ. ಹಾಗಾದರೆ ಈ ನೀರಾವರಿ ಯೋಜನೆ ಯಾರಿಗಾಗಿ ?

–ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹೋರಾಡುತ್ತಿರುವ ರೈತ ಹೋರಾಟಗಾರರ ಅಸಮಾಧಾನದ ನುಡಿ.

ಏಪ್ರಿಲ್‌ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ವೇದಿಕೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯ ತಾಲ್ಲೂಕುಗಳಿಗೆ ಎತ್ತಿನಹೊಳೆ ನೀರು ಹರಿಸುವ ಮಾತು ಹೇಳುವ ಮೂಲಕವೇ ಭಾಷಣ ಪ್ರಾರಂಭಿಸುತ್ತಿದ್ದರು. ಹಾಗೆಯೇ ಭಾಷಣ ಮುಕ್ತಾಯ ಮಾಡುವಾಗಲು ಸಹ. ಎತ್ತಿನಹೊಳೆ ಯೋಜನೆ ಚುನಾವಣಾ ಪ್ರಚಾರದ ಸರಕಾಗಿತ್ತು.

ಬಯಲು ಸೀಮೆಯ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯಲ್ಲಿ ನೀರು ಹರಿಯುವ ಭರವಸೆಯೇ ಇಲ್ಲ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಪದಾಧಿಕಾರಿಗಳು ಆರಂಭದ ದಿನಗಳಿಂದಲೂ ಹೇಳುತ್ತಿದ್ದಾರೆ. ಹೋರಾಟಗಾರರ ವಿರೋಧದ ನಡುವೆಯೂ ಎತ್ತಿನಹೊಳೆ ಯೋಜನೆ ಆರಂಭವಾಯಿತು. ಯಾವುದೋ ಒಂದು ಯೋಜನೆ, ನಮ್ಮ ಕೃಷಿ ಭುಮಿಗಳಿಗೆ ಒಂದಿಷ್ಟು ನೀರು ಬರಲಿ ಎಂದು ಹೋರಾಟಗಾರರು ತಟಸ್ಥರಾದರು.

ಆದರೆ ₹9,000 ಕೋಟಿಗೆ ಪ್ರಾರಂಭವಾದ ಎತ್ತಿನಹೊಳೆ ಯೋಜನೆ ಈಗ ನಾಲ್ಕು ಪಟ್ಟು ಹೆಚ್ಚಾದರು ಇನ್ನೂ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ನೀರು ಬರುವ ನಂಬಿಕೆಯೇ ರೈತರಲ್ಲಿ ಕಾಣದೆ ಮತ್ತೆ ಹೋರಾಟಕ್ಕೆ ಸಿದ್ಧತೆಗಳು ನಡೆಯುತ್ತಿವೆ.

ಕೆಐಎಡಿಬಿಯಿಂದ ಜಿಲ್ಲೆಯಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳುವುದುನ್ನು ವಿರೋಧಿಸಿ ರೈತರು ಮತ್ತು ಹೋರಾಟಗಾರರು ನೂರಾರು ದಿನ ಹೋರಾಟ ನಡೆಸುತ್ತಿದ್ದರೂ, ಇದಕ್ಕೆ ಸ್ಪಂದಿಸದ ರಾಜಕೀಯ ಮುಖಂಡರು ಎತ್ತಿನಹೊಳೆ ಯೋಜನೆ ನೀರು ತರುತ್ತೇವೆ ಎಂದು ನೀಡುವ ಭರವಸೆ ನಿಲ್ಲಿಸಿಲ್ಲ. ಫಲವತ್ತಾದ ಕೃಷಿ ಭೂಮಿಯೇ ಹೋದ ಮೇಲೆ ನಾವು ಎಲ್ಲಿ ಕೃಷಿ ಮಾಡುವುದು ಎನ್ನುದು ರೈತರ ಪ್ರಶ್ನೆ.

ರೈತರ ಅಭಿಪ್ರಾಯ

ಪರಿಹಾರ ಇಲ್ಲ; ರೈತರ ಬೆಳೆಯೂ ಹಾಳು

ತಾಲ್ಲೂಕಿನ ಮೂಲಕ ಹಾದು ಹೋಗುತ್ತಿರುವ ಎತ್ತಿನಹೊಳೆ ಯೋಜನೆಯ ಬೃಹತ್‌ ಪೈಪ್‌ಲೈನ್‌ ನೋಡಿದರೆ ಸಮುದ್ರದಿಂದ ನೀರು ತಂದು ಹರಿಸಿದರು ಪೈಪ್‌ಗಳು ತುಂಬುವುದಿಲ್ಲ ಅನ್ನಿಸುತ್ತಿದೆ. ಇಷ್ಟೊಂದು ದೊಡ್ಡ ಪೈಪ್‌ ಲೈನ್‌ಗಳನ್ನು ಅಳವಡಿಸಲು ರೈತರು ಬೆಳೆದಿರುವ ಬೆಳೆ ಹಾಳು ಮಾಡಲಾಗುತ್ತಿದೆ. ಪರಿಹಾರ ನೀಡದೆ ಕಾಲುವೆ ತೋಡಲಾಗುತ್ತಿದೆ. ವರ್ಷದ ಒಂದೆರಡು ತಿಂಗಳಲ್ಲಿ ಮಳೆ ಹೆಚ್ಚಾದ ಸಂದರ್ಭದಲ್ಲಿ ಮಾತ್ರ ಮಲೆನಾಡಿನಿಂದ ನೀರು ಹರಿಸುವ ಸಲುವಾಗಿ ಇಷ್ಟೊಂದು ದೊಡ್ಡ ಪೈಪ್‌ಲೈನ್‌ ಅಗತ್ಯ ಇರಲಿಲ್ಲ.

ಮರಳೇನಹಳ್ಳಿ ಗ್ರಾಮದ ರೈತ ಎಂ.ಎಚ್‌.ಮುತ್ತುರಾಜ್‌.

ಜಲಾಶಯ ನಿರ್ಮಾಣ ಅಗತ್ಯವೇ ?

ಎತ್ತಿನಹೊಳೆ ಯೋಜನೆ ಕಾಮಗಾರಿ ಚಿಕ್ಕಬಳ್ಳಾಪುರದಲ್ಲಿ 2014ರಲ್ಲಿ ಉದ್ಘಾಟನೆಯಾದಾಗ ಕೊರಟಗೆರೆ ದೊಡ್ಡಬಳ್ಳಾಪುರ ತಾಲ್ಲೂಕಿನ ಗಡಿ ಭಾಗದ ಬೈರಗೊಂಡ್ಲು ಸಮೀಪ 12 ಸಾವಿರ ಎಕರೆ ಪ್ರದೇಶದಲ್ಲಿ ನೀರು ಸಂಗ್ರಹಕ್ಕೆ ಜಲಾಶಯ ನಿರ್ಮಿಸಲು ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಯಿತು. ಜಲಾಶಯದಿಂದ ಹಲವಾರು ಗ್ರಾಮಗಳು ಮುಳುಗಡೆಯಾಗುವುದರಿಂದ ಸ್ಥಳೀಯ ರೈತರ ವಿರೋಧದಿಂದ 12 ಸಾವಿರ ಎಕರೆಯಿಂದ ಈಗ 5000 ಎಕರೆ ಪ್ರದೇಶದಲ್ಲಿ ಜಲಾಶಯ ನಿರ್ಮಿಸಲು ಮುಂದಾಗಿದ್ದಾರೆ. ಅದು ಸಹ ಇನ್ನು ಪ್ರಾರಂಭವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ರೈತರ ಒಕ್ಕಲೆಬ್ಬಿಸುವುದು ಬೇಡ ಐದು ಸಾವಿರ ಎಕರೆ ಪ್ರದೇಶದಲ್ಲಿ ಜಲಾಶಯ ನಿರ್ಮಿಸುವ ಮೂಲಕ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವುದುರೈತರುನ್ನು ಅಲ್ಲಿಂದ ಒಕ್ಕಲೆಬ್ಬಿಸುವುದಕ್ಕೆ ಬದಲಾಗಿ ಜಲಾಶಯವೇ ನಿರ್ಮಿಸದೆ ಸರಣಿ ಸಾಲಿನಲ್ಲಿ ಇರುವ ಬೃಹತ್‌ ಕೆರೆಗಳಿಗೆ ನೀರು ತುಂಬಿಸಿದರೆ ಅನುಕೂಲವಾಗಲಿದೆ. ಜಲಾಶಯಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲು ಪರಿಹಾರದ ಹಣ ಜಲಾಶಯ ನಿರ್ಮಾಣಕ್ಕೆ ವೆಚ್ಚವಾಗುವ ಹಣವು ಉಳಿತಾಯವಾಗಲಿದೆ.

-ಆರ್‌.ಚಂದ್ರತೇಜಸ್ವಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡ

ಯಾರಿಗೆ ಹೋರಾಟದ ಫಲ ?

ಬೆಂಗಳೂರು ಸುತ್ತಲಿನ 100 ಕಿ.ಮೀ ವ್ಯಾಪ್ತಿಯಲ್ಲಿ ಕೃಷಿ ಭೂಮಿಯೇ ಉಳಿಯದಂತೆ ಸರ್ಕಾರ ಉಪನಗರಗಳು ಬೃಹತ್‌ ಕಾರಿಡಾರ್‌ ರಸ್ತೆಗಳ ಯೋಜನೆ ಘೋಷಣೆ ಮಾಡುತ್ತಲೇ ಇದೆ. ಭೂ ಸ್ವಾಧೀನವು ವೇಗವಾಗಿ ನಡೆಯುತ್ತಿದೆ. ಇದೇ ಸಮಯದಲ್ಲಿ ನೀರಾವರಿ ಯೋಜನೆ ಕಾಮಗಾರಿಯು ಕುಂಟುತ್ತ ಸಾಗುತ್ತಿದೆ. ಕುಡಿಯುವ ಹಾಗೂ ಕೃಷಿಗೆ ಅನುಕೂಲವಾಗಲಿ ಎಂದು ನಾವು ಶಾಶ್ವತ ನೀರಾವರಿ ಹೋರಾಟ ವೇದಿಕೆ ಅಡಿಯಲ್ಲಿ ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆ ಗಮನಿಸಿದರೆ ನೀರಾವರಿಗಾಗಿ ನಾವು ನಡೆಸುವ ಹೋರಾಟದ ಫಲ ಕೈಗಾರಿಕೆಗಳಿಗೆ ಆಗಲಿದೆ ಅನ್ನುವ ಅನುಮಾನ ಕಾಡುತ್ತಿದೆ. ರೈತರು ಕೈಗಾರಿಕೆಗಳು ಸೇರಿದಂತೆ ಇತರೆ ಉದ್ದೇಶಗಳಿಗೆ ತಾಲ್ಲೂಕಿನಲ್ಲಿ ಗೊತ್ತುಗುರಿ ಇಲ್ಲದಂತೆ ಅವೈಜ್ಞಾನಿಕವಾಗಿ ನಡೆಯುತ್ತಿರುವ ಕೃಷಿ ಭೂ ಸ್ವಾಧೀನ ಪ್ರಕ್ರಿಯೆ ನಿಲ್ಲಬೇಕು. ಈಗಾಗಲೇ ಕೈಗಾರಿಕೆಗಳ ಸ್ಥಾಪನೆಗಾಗಿ ಸ್ವಾಧೀನ ಮಾಡಿಕೊಂಡಿರುವ ಭೂಮಿಯನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಬೇಕು. ಒಂದೇ ಪ್ರದೇಶಕ್ಕೆ ಎಲ್ಲಾ ಕೈಗಾರಿಕೆಗಳು ಕೇಂದ್ರೀಕೃತವಾಗದಂತೆ ಇತರೆ ಜಿಲ್ಲೆಗಳಿಗು ವಿಸ್ತರಣೆಯಾಗಬೇಕು.

-ಮುತ್ತೇಗೌಡ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT