ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾಕ್ಷಿಗೆ ಡೌನಿಮಿಲ್ಡ್ ರೋಗ

ಬೆಳೆಗಾರರಿಗೆ ಇಳುವರಿ ಕುಸಿತದ ಆತಂಕ: ನೆರವು ನೀಡಲು ಸರ್ಕಾರಕ್ಕೆ ಒತ್ತಾಯ
Last Updated 29 ಅಕ್ಟೋಬರ್ 2020, 4:18 IST
ಅಕ್ಷರ ಗಾತ್ರ

ವಿಜಯಪುರ: ಬಯಲುಸೀಮೆಯ ಬಹುತೇಕ ರೈತರ ಆರ್ಥಿಕ ಸ್ವಾವಲಂಬನೆಗೆ ಆಧಾರವಾಗಿರುವ ದ್ರಾಕ್ಷಿ ಬೆಳೆಯು ಮೋಡಕವಿದ ವಾತಾವರಣ ಹಾಗೂ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಡೌನಿಮಿಲ್ಡ್ ರೋಗಕ್ಕೆ ತುತ್ತಾಗಿದೆ. ಇದರಿಂದ ರೈತರಿಗೆ ಇಳುವರಿ ಕುಸಿತದ ಭೀತಿ ಎದುರಾಗಿದೆ.

‘ವಾಣಿಜ್ಯ ಬೆಳೆಯಾಗಿ ದ್ರಾಕ್ಷಿಯನ್ನು ನಂಬಿಕೊಂಡು ಜೀವನ ಮಾಡುತ್ತಿದ್ದೇವೆ. ನಮ್ಮ ತೋಟದಲ್ಲಿ 980 ಗಿಡಗಳಿವೆ. ಔಷಧಿಗೆ ₹ 1.50 ಲಕ್ಷ, ಬೇಸಾಯಕ್ಕೆ ₹ 60 ಸಾವಿರ, ಫ್ರೂನಿಂಗ್ ಮತ್ತು ಔಷಧಿ ಉಜ್ಜುವುದು ಸೇರಿದಂತೆ ಕೂಲಿ ಕಾರ್ಮಿಕರಿಗೆ ₹ 50 ಸಾವಿರ ಖರ್ಚು ಮಾಡಿದ್ದೇವೆ. ಈ ಬಾರಿ 15 ಟನ್ ಬೆಳೆ ಬರಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದೆವು. ಪಾಲಿನೇಷನ್ (ಹೂವಿನಿಂದ ಕಾಯಿಯಾಗುವ ಸಮಯ) ಆಗುವ ಸಂದರ್ಭದಲ್ಲಿ ಪದೇ ಪದೇ ಮಳೆಯಾಗುತ್ತಿದ್ದ ‍ಪರಿಣಾಮ ಎಷ್ಟೇ ಔಷಧಿ ಸಿಂಪಡಣೆ ಮಾಡಿದರೂ ರೋಗದ ಹತೋಟಿ ಸಾಧ್ಯವಾಗಲಿಲ್ಲ. 500 ಕೆ.ಜಿ. ದ್ರಾಕ್ಷಿ ಸಿಗುವುದೂ ಅನುಮಾನವಾಗಿದೆ’ ಎಂದು ರೈತ ಕೆ. ಮುನಿರಾಜು ಅಳಲು ತೋಡಿಕೊಳ್ಳುತ್ತಾರೆ.

‘ಒಂದು ವರ್ಷ ನಿಪ್ಪಾ ವೈರಸ್ ಕಾರಣದಿಂದಾಗಿ ಬೆಳೆ ಉತ್ತಮವಾಗಿ ಬೆಳೆದಿದ್ದರೂ ಕಟಾವು ಮಾಡುವವರಿಲ್ಲದೆ ನಷ್ಟ ಅನುಭವಿಸಿದೆವು. ಮತ್ತೊಂದು ವರ್ಷ ನೋಟ್ ಬ್ಯಾನ್ ಆದ ಕಾರಣದಿಂದ ಖರೀದಿಗೆ ವ್ಯಾಪಾರಸ್ಥರು ಮುಂದೆ ಬರಲಿಲ್ಲ. ಈ ವರ್ಷ ಉತ್ತಮ ಬೆಳೆ ಬೆಳೆದರೂ ಕೊರೊನಾ ಸೋಂಕಿನ ಪರಿಣಾಮ ಮಾರಾಟ ಮಾಡಲಿಕ್ಕೆ ಆಗಲಿಲ್ಲ. ಈಗ ಫ್ರೂನಿಂಗ್ ಮಾಡಿದ ನಂತರ ಮಳೆ ಸುರಿದಿದೆ. ಮುಂದೇನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ಮಾಡಿರುವ ಸಾಲವನ್ನು ಹೇಗೆ ತೀರಿಸಬೇಕು, ಮುಂದಿನ ಬೆಳೆಗೆ ಹೇಗೆ ಬಂಡವಾಳ ಹಾಕಬೇಕು ಎಂಬುದು ಚಿಂತೆಯಾಗಿದೆ’ ಎನ್ನುತ್ತಾರೆ ಅವರು.

‘ಮುಂಗಾರು ಮುಗಿದು ಹಿಂಗಾರು ಆರಂಭವಾಗಿದೆ. ಚಳಿಗಾಲ ಆರಂಭವಾಗುವುದಕ್ಕೂ ಮುಂಚೆ ದ್ರಾಕ್ಷಿಗೆ ಬರುವ ರೋಗಗಳನ್ನು ನಿಯಂತ್ರಿಸಲು ರೈತರು ಹರಸಾಹಸಪಡುವಂತಾಗಿದೆ. ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಬೆಂಗಳೂರು ಬ್ಲೂ ದ್ರಾಕ್ಷಿಗೆ ಡೌನಿಮಿಲ್ಡ್ ರೋಗ ಬಂದಿದೆ’ ಎಂದು ವಿವರಿಸುತ್ತಾರೆರೈತ ಜಿ.ಡಿ.
ವೆಂಕಟೇಶ್.

‘ತಾಲ್ಲೂಕಿನ ಬಿಜ್ಜವಾರ, ಇರಿಗೇನಹಳ್ಳಿ, ವೆಂಕಟಗಿರಿಕೋಟೆ, ಹಾರೋಹಳ್ಳಿ, ಬೀಡಿಗಾನಹಳ್ಳಿ, ದಿನ್ನೂರು, ಚನ್ನರಾಯಪಟ್ಟಣ, ಚೀಮಾಚನಹಳ್ಳಿ‌ ಸೇರಿದಂತೆ ಹಲವೆಡೆ ರೈತರು ದ್ರಾಕ್ಷಿ ಬೆಳೆಯುತ್ತಿದ್ದಾರೆ. ಹವಾಮಾನದಲ್ಲಿ ಆಗುತ್ತಿರುವ ವ್ಯತ್ಯಾಸಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ದ್ರಾಕ್ಷಿ ಬೆಳೆಗಾರರ ನೆರವಿಗೆ ಬರಬೇಕು’ ಎಂಬುದು ರೈತ ಮುಖಂಡ ನಾರಾಯಣಸ್ವಾಮಿ ಅವರ ಒತ್ತಾಯ.

‘ಸೀಡ್‌ಲೆಸ್ ದ್ರಾಕ್ಷಿಗೆ ಬರುವ ರೋಗಗಳನ್ನು ತಡೆಗಟ್ಟಲು ರೈತರು ವಿಪರೀತವಾಗಿ ರಾಸಾಯನಿಕ ಬಳಕೆ ಮಾಡುತ್ತಿದ್ದಾರೆ. ಈಗೀಗ ಬಹಳಷ್ಟು ಮಂದಿಗೆ ಜಾಗೃತಿ ಮೂಡಿದೆ. ದ್ರಾಕ್ಷಿಯಲ್ಲಿ ವಿಷಕಾರಕ ವಸ್ತುಗಳನ್ನು ತೆಗೆಯಲು ಸಾಧ್ಯವಾಗುವುದಿಲ್ಲ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಫೆಬ್ರುವರಿಯಲ್ಲಿ ಬೆಳೆ ತೆಗೆದರೆ ಉತ್ತಮ ಇಳುವರಿ ಮತ್ತು ಬೆಲೆ ಪಡೆಯಲು ಸಾಧ್ಯ. ಆದ್ದರಿಂದ ರೈತರು ಈ ಬಗ್ಗೆ ಜಾಗೃತರಾಗಬೇಕು. ಇಲಾಖೆಯಿಂದ ನೀಡುವ ನಿರ್ದೇಶನಗಳನ್ನು ಪಾಲನೆ ಮಾಡಬೇಕು’ ಎಂಬುದು ತೋಟಗಾರಿಕೆ ಇಲಾಖೆಯ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT