ಬುಧವಾರ, ಫೆಬ್ರವರಿ 19, 2020
24 °C
ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಲಿನ ಗ್ರಾಮಸ್ಥರ ಅಳಲು

ದೂಳಿನ ಸ್ನಾನ ಮಾಡುತ್ತಿರುವ ವಿಮಾನ ನಿಲ್ದಾಣ ಸುತ್ತಲಿನ ಗ್ರಾಮಸ್ಥರು

ವಡ್ಡನಹಳ್ಳಿ ಭೋಜ್ಯಾನಾಯ್ಕ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ರಸ್ತೆ ತುಂಬೆಲ್ಲಾ ಧೂಳು. ಕಾಲಿಗೆ ಮುಳ್ಳಿನಂತೆ ಚುಚ್ಚುವ ಜಲ್ಲಿಕಲ್ಲು. ಇದು ಕುಗ್ರಾಮಗಳ ದೃಶ್ಯ ಅಲ್ಲ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಲಿನ ಗ್ರಾಮಗಳ ದುಸ್ಥಿತಿ ಇದು. 

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಗಿ 10ವರ್ಷ ಕಳೆದಿದೆ. ವಿಮಾನಗಳ ಹಾರಾಟ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅಭಿವೃದ್ಧಿ ಕಾಮಗಾರಿ ನಿರಂತರ ನಡೆಯುತ್ತಿದ್ದರೂ ವೇಗ ಪಡೆದಿಲ್ಲ. ಬೆಟ್ಟಕೋಟೆ, ಅಣ್ಣೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 15ಕ್ಕೂ ಹೆಚ್ಚು ಗ್ರಾಮಗಳು ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ಬಾಗಲೂರು ಮತ್ತು ಚಿಕ್ಕಜಾಲ ಪಂಚಾಯಿತಿ 12ಕ್ಕೂ ಹೆಚ್ಚು ಗ್ರಾಮಗಳ ವ್ಯಾಪ್ತಿಯಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸಲು ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಜತೆಗೆ ಬೆಟ್ಟಕೋಟೆಯಿಂದ ಬೂದಿಗೆರೆ ಮಾರ್ಗವಾಗಿ ಕೆ.ಆರ್.ಪುರಂಗೆ ಸಂಪರ್ಕ ಕಲ್ಪಿಸುವ ರಸ್ತೆ ವಿಸ್ತರಣೆ ನಡೆದಿದೆ. ಜಲ್ಲಿಕಲ್ಲಿನ ವಿಪರೀತ ದೂಳಿನಿಂದ ಜನರು ವೇದನೆ ಪಡುವಂತಾಗಿದೆ. 

‌ರಸ್ತೆ ಇಕ್ಕೆಲಗಳ ತೋಟಗಳಲ್ಲಿ ಬೆಳೆದಿರುವ ಹಿಪ್ಪುನೇರಳೆ ಸೊಪ್ಪು, ತರಕಾರಿ, ಹೂವು, ಮಾವು ಬೆಳೆಗಳಿಗೆ ವಿಪರೀತ ದೂಳು ಅವರಿಸಿಕೊಂಡಿದೆ. ಇದು ರೈತರನ್ನು ಚಿಂತೆಗೀಡು ಮಾಡಿದೆ.

ವಿಮಾನ ನಿಲ್ದಾಣಕ್ಕೆ ಸರ್ಕಾರಿ ಮತ್ತು ಅರಣ್ಯಭೂಮಿ ಹೊರತುಪಡಿಸಿ ರೈತರ ಫಲವತ್ತಾದ 4800 ಎಕರೆ ಸರ್ಕಾರ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ,ಪರಿಹಾರ ಮಾತ್ರ ಬಿಡಿಗಾಸು. ಉಳಿದಿರುವ ಒಂದಿಷ್ಟು ಎಕರೆಯಲ್ಲಿ ಫಸಲು ಪಡೆಯಲು ಹರಸಾಹಸಪಡುವಂತಾಗಿದೆ. ಕೊಳವೆ ಅಂತರ್ಜಲದ ಕೊರತೆಯಿಂದ ಜನರು ಹೈರಾಣರಾಗಿದ್ದಾರೆ ಎಂದು ಬೆಟ್ಟಕೋಟೆ ಗ್ರಾಮದ ರೈತ ಕೃಷ್ಣಮೂರ್ತಿ ಅಳಲು ತೋಡಿಕೊಂಡರು.

ದೂಳಿನಿಂದ ಜನ – ಜಾನುವಾರು ವಿವಿಧ ಬಗೆಯ ರೋಗಳಿಂದ ಬಳಲುವಂತಾಗಿದೆ. ದೂಳು ಹೆಚ್ಚುತ್ತಿರುವುದರಿಂದ ಮಕ್ಕಳು, ವೃದ್ಧರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಪಾಯಕಾರಿ ದೂಳಿನ ಮಾಲಿನ್ಯ ತಡೆಗಟ್ಟಲು ಯಾರು ಮುಂದಾಗುತ್ತಿಲ್ಲ ಎನ್ನುತ್ತಾರೆ ಸಿಂಗನಾಯಕನಹಳ್ಳಿ ವೆಂಕಟೇಶ್.

ದೂಳು ನಿರಂತರ ಮೇಲೇಳುತ್ತಿರುವುದರಿಂದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನದ ಬಿಸಿಯೂಟ ಸೇವಿಸಲು ಕಷ್ಟವಾಗುತ್ತಿದೆ ಎನ್ನುತ್ತಾರೆ ಕಾಡಯರಪ್ಪನ ಗ್ರಾಮದ ಮುಖಂಡ ಅಶೋಕ್. 

ರಸ್ತೆ ದೂಳಿನಿಂದ ವಾಹನ ಸವಾರರು ಮತ್ತು ಪಾದಾಚಾರಿಗಳಿಗೆ ತೀವ್ರ ತೊಂದರೆ ಆಗಿದೆ ಎನ್ನುತ್ತಾರೆ ಸರಕು ಸಾಗಣೆ ಚಾಲಕ ಅಬೂಬಕರ್ ಸಿದ್ದಕಿ.

ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದೆ. ರಸ್ತೆ ದುರಸ್ತಿಗೊಳಿಸುವ ಸಂದರ್ಭದಲ್ಲಿ ಹರಡುವ ಜಲ್ಲಿಕಲ್ಲು ಮತ್ತು ಎಂ.ಸ್ಯಾಂಡ್‌ಗೆ ಆಗಿಂದಾಗ್ಗೆ ನೀರು ಸುರಿಯಬೇಕು. ಕಾಮಗಾರಿ ಸ್ಥಳದಲ್ಲಿ ನಾಮಫಲಕ ಹಾಕಬೇಕು. ರಾತ್ರಿ ಸಮಯ ರಸ್ತೆಬದಿ ದೀಪ ಇರುವಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ಚೌಡಪ್ಪನಹಳ್ಳಿ ಗ್ರಾಮದ ಲೋಕೇಶ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)