ಗುರುವಾರ , ನವೆಂಬರ್ 14, 2019
19 °C

‘ಪೌರಕಾರ್ಮಿಕರು ಕ್ರೀಡಾ ಚಟುವಟಿಕೆಗೆ ಒತ್ತು ನೀಡಿ’ 

Published:
Updated:
Prajavani

ದೇವನಹಳ್ಳಿ: 'ದೈನಂದಿನ ಕರ್ತವ್ಯದ ಒತ್ತಡದಲ್ಲಿರುವ ಪೌರಕಾರ್ಮಿಕರು ಕ್ರೀಡಾ ಚಟುವಟಿಕೆಗೆ ಒತ್ತು ನೀಡಿದಾಗ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ಹೇಳಿದರು.

ಇಲ್ಲಿನ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಕಾರ್ಮಿಕರಿಗೆ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೆಳಗಿನ ಜಾವದಿಂದಲೇ ನಗರದ ಬೀದಿಗಳಲ್ಲಿ ಸ್ವಚ್ಛತೆಯಲ್ಲಿ ನಿರತರಾಗುವ ಕಾರ್ಮಿಕರಿಗೆ ಸಂಜೆಯ ವೇಳೆ ಮಾತ್ರ ಬಿಡುವು ಸಿಗುವುದರಿಂದ ಬಿಡುವಿನ ವೇಳೆಯಲ್ಲಿ ದೈಹಿಕ ಅಂಗಾಂಗ ಕಸರತ್ತು ಮಾಡಬೇಕು. ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿಯಂತ್ರಣ ಮಾಡಿ ಆರೋಗ್ಯವನ್ನು ಕಾಯ್ದುಕೊಳ್ಳಲು ಕನಿಷ್ಠ ಒಂದು ತಾಸು ಅಂಗಾಂಗ ಕಸರತ್ತು, ಯೋಗ, ಧ್ಯಾನ ಮಾಡಬೇಕು ಎಂದು ಸಲಹೆ ನೀಡಿದರು.

‘ನಮ್ಮ ಆರೋಗ್ಯವನ್ನು ನಾವೇ ಕಾಪಾಡಬೇಕು. ರೋಗಗಳು ಬರುವುದಕ್ಕಿಂತ ಮೊದಲೇ ಮುಂಜಾಗ್ರತೆ ಅಗತ್ಯ. ಕಸ ವಿಲೇವಾರಿ ಮಾಡುವುದು, ಚರಂಡಿ ಶುಚಿತ್ವ, ರಸ್ತೆ ಬದಿಯ ಮಣ್ಣು ಹೊರಹಾಕುವುದು, ಕಾರ್ಮಿಕರ ಕರ್ತವ್ಯವಾದರೂ ದೂಳು ದುರ್ವಾಸನೆಯಲ್ಲೇ ಹೆಚ್ಚು ಸಮಯ ಕೆಲಸ ಮಾಡಬೇಕಾದ ಸ್ಥಿತಿ ಇದೆ. ಆದ್ದರಿಂದ ಧರಿಸುವ ಸಮವಸ್ತ್ರ, ಕೈಗವಸು ಶುಚಿತ್ವ ಮಾಡುವಾಗ ಬಿಸಿನೀರಿನಲ್ಲಿ ಒಂದು ಬಾರಿ ಹಾಕಿ ಬಿಸಲಿನಲ್ಲಿ ಒಣಗಿಸಬೇಕು. ಇದು ಅನೇಕ ರೋಗಾಣುಗಳ ಕಡಿವಾಣಕ್ಕೆ ಸಹಕಾರಿಯಾಗಲಿದೆ. ಕುಡಿಯುವ ನೀರು, ಪೌಷ್ಟಿಕ ಆಹಾರಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.

‘ಪೌರಾಡಳಿತ ಇಲಾಖೆ ಪೌರಕಾರ್ಮಿಕರಿಗೆ ಆರೋಗ್ಯ ರಕ್ಷಣೆಗಾಗಿ ಅನೇಕ ಸವಲತ್ತು ನೀಡುತ್ತಿದೆ. ಸದುಪಯೋಗ ಪಡೆದುಕೊಳ್ಳಬೇಕು. ಸವಲತ್ತು ಕಾಡಿ ಬೇಡಿ ಪಡೆಯುವುದಲ್ಲ. ಕೇಳಿ ಪಡೆಯುವ ಹಕ್ಕು ನಿಮಗಿದೆ. ನಿಮಗಾಗಿ ನಡೆಸುತ್ತಿರುವ ಮನರಂಜನೆಯ ಸ್ವರ್ಧೆ ಮತ್ತು ಕ್ರೀಡಾಕೂಟದಲ್ಲಿ ಪಾಲ್ಗೊಂಡು ತಮ್ಮಲ್ಲಿರುವ ಸಾಮರ್ಥ್ಯವನ್ನು ಸಾಬೀತು ಮಾಡಿ’ ಎಂದು ಸಲಹೆ ನೀಡಿದರು.

ಪುರಸಭೆ ಕಂದಾಯ ನಿರೀಕ್ಷಕ ರಾಜೇಂದ್ರ, ಹಿರಿಯ ಆರೋಗ್ಯ ನಿರೀಕ್ಷಕಿ ಬಿಜಿ, ಸಿಬ್ಬಂದಿ ಇದ್ದರು.

ಪ್ರತಿಕ್ರಿಯಿಸಿ (+)