ಸೋಮವಾರ, ಸೆಪ್ಟೆಂಬರ್ 16, 2019
21 °C
‘ಜ್ಞಾನ ಶಾಲೆ ಸೌಹಾರ್ದ ಕೋ –ಆಪರೇಟಿವ್’ ನೂತನ ಶಾಖೆ ಉದ್ಘಾಟನೆ

ಗುಡಿ ಕೈಗಾರಿಕೆಗಳಿಗೆ ಒತ್ತು ನೀಡಿ: ನಿಸರ್ಗ ನಾರಾಯಣಸ್ವಾಮಿ

Published:
Updated:
Prajavani

ದೇವನಹಳ್ಳಿ: ಸಾಮಾಜಿಕ ಕಳಕಳಿಯಿಂದ ಸಹಕಾರಿ ಸಂಘಗಳು ಗುಡಿ ಕೈಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.  ‌

ಇಲ್ಲಿನ ಕುಂಬೇಶ್ವರ ಕಾಂಪ್ಲೆಕ್ಸ್‌ನಲ್ಲಿ ‘ಜ್ಞಾನ ಶಾಲೆ ಸೌಹಾರ್ದ ಕೋ –ಆಪರೇಟಿವ್’ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿರುವ ಮೂಲ ವೃತ್ತಿ ಕಸಬುದಾರರಿಗೆ ಪ್ರೋತ್ಸಾಹ ನೀಡಿದರೆ ಮಾತ್ರ ಆರ್ಥಿಕ ಭದ್ರತೆ ಸಿಗಲಿದೆ. ಬರಗಾಲ ನಿರಂತರವಾಗಿ ಕಾಡುತ್ತಿರುವ ಸಂದರ್ಭದಲ್ಲಿ ಸ್ವಾವಲಂಬನೆ ಬದುಕಿಗೆ ಸಹಕಾರ ಸಂಘಗಳು ಸಮಾಜ ಮುಖಿಯಾಗಿ ಕೆಲಸ ಮಾಡಬೇಕಾಗಿದೆ. ನಶಿಸಿ ಹೋಗುತ್ತಿರುವ ಮೂಲ ವೃತ್ತಿಯನ್ನು ಉಳಿಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಸೌಹಾರ್ದ ಕೋ–ಆಪರೇಟಿವ್ ರಾಜ್ಯ ಘಟಕ ಅಧ್ಯಕ್ಷ ಬಿ.ಎಚ್.ಕೃಷ್ಣಾರೆಡ್ಡಿ ಮಾತನಾಡಿ, ಸಹಕಾರ ಕ್ಷೇತ್ರ ನಿಂತ ನೀರಲ್ಲ. ಸದಾ ಹರಿಯುತ್ತಿರುವ ನದಿ ಇದ್ದಂತೆ. ರಾಜ್ಯದ ಗದಗದಲ್ಲಿ ಆರಂಭವಾದ ಸಹಕಾರಿ ಸಂಘ ದೇಶದಲ್ಲಿ 8.2 ಲಕ್ಷ ಶಾಖೆಗಳನ್ನು ಹೊಂದಿದ್ದು 30 ಕೋಟಿ ಸದಸ್ಯರಿದ್ದಾರೆ. ರಾಜ್ಯದಲ್ಲಿ 4,600 ಶಾಖೆಗಳಿದ್ದು 1ಕೋಟಿ ಸದಸ್ಯರಿದ್ದಾರೆ ಎಂದು ಹೇಳಿದರು.

ಸರ್ಕಾರ ಅನೇಕ ಯೋಜನೆಗಳ ಅನುದಾನ ಸಹಕಾರ ಸಂಘಗಳ ಮೂಲಕ ರೈತರಿಗೆ, ಕಾರ್ಮಿಕರಿಗೆ, ಮೂಲ ವೃತ್ತಿದಾರರಿಗೆ ನೀಡಬೇಕಾಗಿದೆ. ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚು ಒಡನಾಟ ಹೊಂದುವುದರಿಂದ ಸ್ಥಳೀಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ಬಿದರಿನ ಬುಟ್ಟಿ, ಆಡಿಕೆ ಹಾಳೆಯಿಂದ ಊಟದ ತಟ್ಟೆ ತಯಾರಿಕೆ, ಕರಕುಶಲ ವಸ್ತುಗಳ ತಯಾರಿಕೆಗೂ ಆದ್ಯತೆ ನೀಡಲಾಗುವುದು ಎಂದರು.

ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು ಮಾತನಾಡಿ, ಬಡವರ ಬಗ್ಗೆ ಚಿಂತನೆ ಮಾಡಬೇಕು. ಆರ್ಥಿಕ ಸ್ಥಿತಿಗೆ ನೆರವಾಗಬೇಕು. ಖಾಸಗಿ ವ್ಯವಹಾರಕ್ಕಿಂತ ಸಹಕಾರ ಸಂಘಗಳಲ್ಲಿ ನ್ಯಾಯಯುತವಾಗಿ ವಹಿವಾಟು ನಡೆಯತ್ತದೆ. ಸಹಕಾರ ಸಂಘಗಳು ಕಟ್ಟಕಡೆ ಕುಟುಂಬಕ್ಕೂ ದನಿಯಾಗಬೇಕು ಎಂದು ಹೇಳಿದರು.

ಜ್ಞಾನ ಶಾಲೆ ಸೌಹಾರ್ದ ಕೋ –ಆಪರೇಟಿವ್ ಸಂಸ್ಥಾಪಕ ಅಧ್ಯಕ್ಷ ಶ್ರೀಧರ್ ಎನ್.ರಾವ್ ಮಾತನಾಡಿ, ಒಂಬತ್ತು ವರ್ಷಗಳ ಹಿಂದೆ ಆರಂಭವಾದ ಈ ಸಹಕಾರ ಸಂಘದಲ್ಲಿ ₹10 ಲಕ್ಷ ಹೂಡಿಕೆ ಮಾಡಲಾಗಿತ್ತು. ಪ್ರಸ್ತುತ 15 ಸಾವಿರ ಸದಸ್ಯರನ್ನು ಹೊಂದಿದ್ದು ₹102 ಕೋಟಿ ವಹಿವಾಟು ನಡೆಯುತ್ತಿದೆ. ವಿಧೆವೆಯರಿಗೆ, ಅಂಗವಿಕಲರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಕೊಳೆಗೇರಿ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಬಡವರಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಕೆಪಿಸಿಸಿ ಮಹಿಳಾ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಕಯ್ಯಮ್ಮ ಮುನಿಯಪ್ಪ, ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಜ್ಯೋತಿ ಬಸವರಾಜು, ಬಿಜೆಪಿ ರಾಜ್ಯ ಪರಿಷದ್ ಸದಸ್ಯ ದೇ.ಸು ನಾಗರಾಜ್, ಸೌಹಾರ್ದ ಕೋ.ಆಪರೇಟಿವ್ ಸಂಘದ ನಿರ್ದೇಶಕ ಎನ್.ರಮೇಶ್ ಬಾಬು,  ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್ ರಾವ್, ಸಂಘದ ಅಧ್ಯಕ್ಷ ಸಂಜೀವ್ ಕೆ.ಮಹಾಜನ್, ಉಪಾಧ್ಯಕ್ಷ ರವಿಶಂಕರ್ ಕುಲಕರ್ಣಿ ಹಾಗೂ ನಿರ್ದೇಶಕರು ಇದ್ದರು.

Post Comments (+)