ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ 160 ಎಕರೆ ಜಮೀನು ಒತ್ತುವರಿ

ಸಂಸದ, ಶಾಸಕರ ವಿರುದ್ಧ ಸಚಿವ ಎಂ.ಟಿ.ಬಿ. ನಾಗರಾಜ್‌ ಆಟೋಪ
Last Updated 7 ಡಿಸೆಂಬರ್ 2022, 5:06 IST
ಅಕ್ಷರ ಗಾತ್ರ

ಹೊಸಕೋಟೆ: ‘ಕಾಂಗ್ರೆಸ್‌ ಪಕ್ಷವು ಹಲವಾರು ವರ್ಷಗಳಿಂದಲೂ ದಲಿತರಿಗೆ ಅನ್ಯಾಯ ಮಾಡಿಕೊಂಡು ಬರುತ್ತಿದೆ’ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಆರೋಪಿಸಿದರು.

ಅಂಬೇಡ್ಕರ್‌ ಪರಿನಿರ್ವಾಣ ದಿನದ ಪ್ರಯುಕ್ತ ನಗರದ ತಾಲ್ಲೂಕು ಕಚೇರಿಯಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಅಂಬೇಡ್ಕರ್‌ ಅವರ ತತ್ವ, ಸಿದ್ಧಾಂತಗಳಿಗೆ ತಿಲಾಂಜಲಿಯಿಟ್ಟ ಕಾಂಗ್ರೆಸ್, ಅವರನ್ನು ಸಂಸತ್ ಚುನಾವಣೆಯಲ್ಲಿ ಸೋಲಿಸಿತು ಎಂದು ಟೀಕಿಸಿದರು.

‘ತಾಲ್ಲೂಕಿನ ಶಾಸಕರು ಮತ್ತು ಸಂಸದರು ದಲಿತರಿಗೆ ಸೇರಿದ 160 ಎಕರೆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ದಲಿತರಿಗೆ ಸೇರಿದ ಸ್ಮಶಾನ ಜಾಗವನ್ನು ಸಂಸದರು ತಮ್ಮ ಪುತ್ರ ಶರತ್ ಬಚ್ಚೇಗೌಡರಿಗೆ ನೀಡಿದ್ದಾರೆ. ಈ ಬಗ್ಗೆ ತನಿಖೆ ಪ್ರಾರಂಭವಾಗಿದ್ದು, ಅವರು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದಾರೆ. ಈ ವಿಷಯದಲ್ಲಿ ತಾವು ಬಹಿರಂಗ ಚರ್ಚೆಗೆ ಸಿದ್ಧ. ಯಾವುದೇ ವೇದಿಕೆಯಲ್ಲಿ ದಾಖಲಾತಿಯೊಂದಿಗೆ ಮಾತನಾಡುತ್ತೇನೆ’ ಎಂದು ಗುಡುಗಿದರು.

ಕಳೆದ 40 ವರ್ಷಗಳಲ್ಲಿ ತಾಲ್ಲೂಕಿನಲ್ಲಿ ದಲಿತರ ಪರವಾಗಿ ಯಾವುದೇ ಕೆಲಸ ಮಾಡಿಲ್ಲ. ಆದರೆ, ಕೇವಲ ದಲಿತರ ಮತಗಳಿಂದ ಅಧಿಕಾರ ಅನುಭವಿಸಿದ್ದಾರೆ ಎಂದು ಟೀಕಿಸಿದರು.

ಅಂಬೇಡ್ಕರ್‌ ಸಂವಿಧಾನದ ಮೂಲಕ ಎಲ್ಲಾ ಸಮುದಾಯಕ್ಕೆ ಅವಕಾಶ ಕಲ್ಪಿಸಿದ್ದಾರೆ. ಎಲ್ಲರಿಗೂ ಮತದಾನದ ಹಕ್ಕು ನೀಡಿದರು. ಅವರು ಕೇವಲ ದಲಿತ ಮುಖಂಡರಾಗಿರದೆ ಇಡೀ ಭಾರತದ ಎಲ್ಲಾ ಜನಾಂಗಕ್ಕೂ ನಾಯಕರಾಗಿದ್ದಾರೆ ಎಂದು
ಹೇಳಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತರು, ಹಿಂದುಳಿದವರ ಪರವಾಗಿ ಅನೇಕ ಯೋಜನೆ ರೂಪಿಸುತ್ತಿದ್ದಾರೆ. ಅಂಬೇಡ್ಕರ್‌ ಅವರ ಪಂಚ ಶ್ರದ್ಧಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ಇಂದು ದಲಿತರ ಹೆಸರಿನಲ್ಲಿ ಅನೇಕರು ಆಸ್ತಿ ಮಾಡಿಕೊಂಡು ಅಂಬೇಡ್ಕರ್‌ ಮತ್ತು ಸಂವಿಧಾನದ ಹೆಸರನ್ನು ಹೇಳಿ ಭಾಷಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

‘ನಗರದ ಹೃದಯ ಭಾಗದಲ್ಲಿ ಅಂಬೇಡ್ಕರ್‌ ಭವನ, ತಾಲ್ಲೂಕು ಕಚೇರಿ ಆವರಣದಲ್ಲಿ ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆ ಸೇರಿದಂತೆ ಅನೇಕ ಕೆಲಸಗಳು ತಾವು ಶಾಸಕರಾದ ಮೇಲೆ ಮಾಡಿದ್ದೇನೆ. ತಾಲ್ಲೂಕಿನ ಅನೇಕ ಊರುಗಳಲ್ಲಿ ಜನರು ಭಯಭೀತರಾಗಿ ಮತದಾನ ಮಾಡುತ್ತಿದ್ದರು. ಅವರಿಗೆ ನಿಜವಾದ ಸ್ವಾತಂತ್ರ್ಯ ತಂದು ಕೊಡಲಾಗಿದೆ’ ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಸೋಮಶೇಖರ್‌, ನಿತಿನ್ ಶ್ರಿನಿವಾಸ್, ಶಿವಾನಂದ, ರೋಷನ್, ವೆಂಕಟೇಶ್, ನಗರಸಭೆ ಉಪಾಧ್ಯಕ್ಷೆ ಸುಗುಣಾ ಮೋಹನ್, ಮುಖಂಡರಾದ ನಾಗೇಶ್, ಶರತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT