ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಸಾಮಾಜಿಕ ಪಿಡುಗು ನಿವಾರಣೆ; ಎಲ್ಲರ ಹೊಣೆ

Published:
Updated:
Prajavani

ದೊಡ್ಡಬಳ್ಳಾಪುರ: ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸುವ ಹೊಣೆಗಾರಿಕೆ ಎಲ್ಲಾ ಪ್ರಜ್ಞಾವಂತರ ಮೇಲಿದೆ ಎಂದು ವಕೀಲರಾದ ಕನಕರಾಜು ಹೇಳಿದರು.

ಅವರು ತಾಲ್ಲೂಕಿನ ಜಿಂಕೆಬಚ್ಚಹಳ್ಳಿ ಗ್ರಾಮದಲ್ಲಿ ಕನ್ನಮಂಗಲದ ಎಂ.ವಿ.ಎಂ. ಕೇಂದ್ರೀಯ ಶಾಲೆಯ ವತಿಯಿಂದ ನಡೆದ ಬೀದಿನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾನೂನು ದೃಷ್ಟಿಯಿಂದ ಮಾತ್ರ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹಗಳನ್ನು ತಡೆಯಬೇಕು ಎನ್ನುವ ಮನೋಭಾವನೆ ಮುಖ್ಯವಲ್ಲ. ನಮ್ಮ ಸುತ್ತಲಿನ ಸಮಾಜ ಆರೋಗ್ಯಕರವಾಗಿ ಇರಬೇಕು ಎನ್ನುವ ಉದ್ದೇಶ ಮುಖ್ಯ’ ಎಂದರು.

ಹಿರಿಯ ಕಾಂಗ್ರೆಸ್‌ ಮುಖಂಡ ಬಿ.ಎಚ್‌.ಕೆಂಪಣ್ಣ ಮಾತನಾಡಿ, ‘ನಗರ ಪ್ರದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಬದುಕಿನ ಪ್ರಾಯೋಗಿಕ ಅನುಭವ ಮುಖ್ಯ. ಈ ನಿಟ್ಟಿನಲ್ಲಿ ಪಠ್ಯದೊಂದಿಗೆ ಬದುಕಿಗೆ ಅಗತ್ಯ ಇರುವ ತಿಳಿವಳಿಕೆಯನ್ನು ಕಲಿಸಬೇಕು. ಇವತ್ತಿನ ಬದುಕಿನಲ್ಲಿ ವಿದ್ಯೆ ಇಲ್ಲದ ಮೇಲೆ ಮನುಷ್ಯ ಬದುಕಿದ್ದು ವ್ಯರ್ಥವಾಗಲಿದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಆಸ್ತಿ ಸಂಪಾದನೆಗಿಂತಲೂ ಪ್ರಥಮ ಆದ್ಯತೆಯನ್ನು ಉತ್ತಮ ವಿದ್ಯಾವಂತರನ್ನಾಗಿಸುವ ಕಡೆಗೆ ನೀಡಬೇಕಿದೆ’ ಎಂದರು.

ಚಿಂಕೆಬಚ್ಚಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಕೃಷ್ಣೇಗೌಡ ಮಾತನಾಡಿ, ‘ಇವತ್ತು ಮೊಬೈಲ್‌ ಆಪ್‌ಗ್ರೇಡ್‌ ಕಡೆಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ನಮ್ಮ ಬದುಕನ್ನು ಆಪ್‌ಗ್ರೇಡ್‌ ಮಾಡಿಕೊಳ್ಳುವುದಕ್ಕೆ ನೀಡುತ್ತಿಲ್ಲ. ಪ್ರತಿ ದಿನದ ಬದುಕಿನ ರೀತಿಗಳು ಬದಲಾಗುತ್ತಿವೆ. ಇವುಗಳಿಗೆ ಹೊಂದಿಕೊಂಡು ಹೋಗಬೇಕಿದೆ’ ಎಂದರು.

ಎಂ.ವಿ.ಎಂ.ಕೇಂದ್ರೀಯ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ್‌ ಮಾತನಾಡಿ, ‘ನಮ್ಮ ಶಾಲೆಯಲ್ಲಿನ ಮಕ್ಕಳಿಗೆ ಪಠ್ಯ ಪುಸ್ತಕದಲ್ಲಿನ ಪಾಠಗಳನ್ನು ಕಲಿಸುವಷ್ಟೇ ಮುತುವರ್ಜಿಯಿಂದ ಸುಸ್ಥಿರ ಆಹಾರ ಪದ್ಧತಿ, ಟ್ರಾಫಿಕ್‌ಜಾಮ್‌ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ’ ಎಂದರು.

ಸಮಾರಂಭದಲ್ಲಿ ಎಂ.ವಿ.ಎಂ.ಕೇಂದ್ರೀಯ ಶಾಲೆಯ ಪ್ರಾಂಶುಪಾಲ ವಿಜಯಭಾಸ್ಕರ್‌ರೆಡ್ಡಿ, ವಿಶ್ವನಾಥಪುರ ವೃತ್ತದ ಸಿಆರ್‌ಪಿ ವಿ.ಸಿ.ಜ್ಯೋತಿಕುಮಾರ್‌, ಶಾಲೆಯ ಕಾರ್ಯದರ್ಶಿ ರಾಧಾಶ್ರೀನಿವಾಸ್‌, ಗೌರವ್‌, ಹೇಮಲತ ಇದ್ದರು.

Post Comments (+)